ಪಂಕಜ ಕೆ.ಎಂ. ಬೆಂಗಳೂರು
ಆರೋಗ್ಯಕರ ಜೀವನಕ್ಕೆ ಆಹಾರದಷ್ಟೇ ಸುಖಕರವಾದ ನಿದ್ರೆಯೂ ಮುಖ್ಯ. ಆದರೆ, ಬದಲಾದ ಜೀವನಶೈಲಿಯಲ್ಲಿ ಆಹಾರವಲ್ಲದೆ ನಿದ್ರೆ ಮಾಡುವ ಕ್ರಮದಲ್ಲೂ ಬಹಳಷ್ಟು ಏರುಪೇರುಗಳಾಗಿವೆ. ಪರಿಣಾಮ ಇತ್ತೀಚಿನ ವರ್ಷಗಳಲ್ಲಿ ‘ನಿದ್ರಾಹೀನತೆ’ ಸಮಸ್ಯೆಯಿಂದ ಬಳಲುವವರ ಸಂಖ್ಯೆ ಹೆಚ್ಚಾಗಿದೆ. ಮೊಬೈಲ್, ಕಂಪ್ಯೂಟರ್ ಸೇರಿ ಗ್ಯಾಜೆಟ್ಗಳ ಅತಿಯಾದ ಬಳಕೆ ಹಾಗೂ ಒತ್ತಡ ಸೇರಿ ನಾನಾ ಕಾರಣಗಳಿಂದ ತಡವಾಗಿ ನಿದ್ರಿಸುವುದರಿಂದ ಕಣ್ಣಿಗಷ್ಟೇ ಹಾನಿಯಾಗುತ್ತಿಲ್ಲ, ಮಿದುಳಿನ ನರಮಂಡಲದ ಮೇಲೂ ಪರಿಣಾಮವಾಗುತ್ತಿದೆ. ಜತೆಗೆ ನಾನಾ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗುತ್ತಿದೆ. ಹಾಗಾಗಿ ‘ನಿದ್ರೆಯ ಆರೋಗ್ಯವನ್ನು ಆದ್ಯತೆಯನ್ನಾಗಿ ಮಾಡಿಕೊಳ್ಳಿ’ ಎಂಬ ಘೋಷವಾಕ್ಯದೊಂದಿಗೆ ಈ ವರ್ಷದ ‘ನಿದ್ರಾ ದಿನ’ ಆಚರಿಸಲಾಗುತ್ತಿದೆ.
ನಗರವಾಸಿಗಳಲ್ಲಿ ನಿದ್ರಾ ಸಮಸ್ಯೆ ಅಧಿಕ: ನಗರ ಪ್ರದೇಶದ ಜೀವನ ನಾನಾ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಿದ್ದು, ನಿದ್ರಾಹೀನತೆಗೆ ಒಳಗಾದವರಲ್ಲೂ ನಗರದ ಜನರೇ ಹೆಚ್ಚಿನವರಿದ್ದಾರೆ. ನಗರವಾಸಿಗಳು ನಿದ್ರೆ ಮಾಡುವ ಅವಧಿಯೂ ಆರು ಗಂಟೆಗಳಿಗಿಂತಲೂ ಕಡಿಮೆಯಾಗಿದೆ ಎಂದು ಖಾಸಗಿ ಸಂಸ್ಥೆಯೊಂದು ‘ಭಾರತ ಹೇಗೆ ನಿದ್ರಿಸುತ್ತದೆ’ ಎಂಬ ಶೀರ್ಷಿಕೆಯಡಿ ನಡೆಸಿರುವ ಸಮೀಕ್ಷೆಯಲ್ಲಿ ಬಹಿರಂಗಗೊಂಡಿದೆ. ಈ ಸಂಸ್ಥೆ ನಡೆಸಿರುವ ಸಮೀಕ್ಷೆಯಲ್ಲಿ ಶೇಕಡ 59 ಭಾರತೀಯರು 6 ಗಂಟೆಗಿಂತಲೂ ಕಡಿಮೆ ನಿದ್ರೆ ಮಾಡುತ್ತಿದ್ದು, ಅವರಲ್ಲಿ ನಗರದ ವಾಸಿಗಳೇ ಹೆಚ್ಚಿನವರಾಗಿದ್ದಾರೆ. ಸಂಸ್ಥೆಯು ದೇಶದ 348 ಜಿಲ್ಲೆಗಳಲ್ಲಿ 43 ಸಾವಿರಕ್ಕೂ ಅಧಿಕ ಜನರನ್ನು ಸಮೀಕ್ಷೆಗೆ ಒಳಪಡಿಸಿದ್ದು, ಇವರಲ್ಲಿ ಶೇ.39 ಜನರು 6-8 ಎಂಟು ಗಂಟೆಗಳ ಕಾಲ ನಿದ್ರೆ ಮಾಡಲು ಸಾಧ್ಯವಾದರೆ, ಶೇ.39ರಷ್ಟು ಜನರು 4-6 ಗಂಟೆಗಳ ಕಾಲ, ಉಳಿದಂತೆ ಶೇ.20 ಜನರು ಕೇವಲ 4 ತಾಸು ನಿದ್ರೆ ಮಾಡುತ್ತಿದ್ದಾರೆ. ಶೇ.2 ಜನರು ಮಾತ್ರ ಆರೋಗ್ಯಕರ (8-10 ಗಂಟೆಗಳ ಕಾಲ) ನಿದ್ರೆ ಮಾಡುತ್ತಿದ್ದಾರೆ ಎಂದು ವರದಿ ತಿಳಿಸಿದೆ.
ಗುಣಮಟ್ಟ ಪರೀಕ್ಷೆ: ಆಧುನಿಕ ಯುಗದಲ್ಲಿ ವ್ಯಕ್ತಿಯ ನಿದ್ರೆಯ ಗುಣಮಟ್ಟ ಅಳೆಯುವ ವಿಧಾನ ಜಾರಿಯಲ್ಲಿದೆ. ಹಾಗಾಗಿ ರೋಗಲಕ್ಷಣಗಳು ಕಂಡುಬಂದಲ್ಲಿ ವೈದ್ಯರಲ್ಲಿ ನಿದ್ರೆಯ ಗುಣಮಟ್ಟ (ಸ್ಲೀಪ್ ಟೆಸ್ಟ್) ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯುವ ಮೂಲಕ ಉತ್ತಮ ನಿದ್ರೆಯೊಂದಿಗೆ ಉತ್ತಮ ಆರೋಗ್ಯ ಹೊಂದಬಹುದಾಗಿದೆ ಎನ್ನುತ್ತಾರೆ ವೈದ್ಯರು.
ಎಷ್ಟು ಸಮಯ?: ನ್ಯಾಷನಲ್ ಸ್ಲೀಪ್ ಫೌಂಡೇಷನ್ ವರದಿ ಪ್ರಕಾರ ದಿನದ 24 ಗಂಟೆಗಳಲ್ಲಿ ನವಜಾತ ಶಿಶುಗಳು 12-18 ತಾಸು ನಿದ್ರಿಸಬೇಕು. 1-3 ವರ್ಷದ ಮಕ್ಕಳು 12-14 ತಾಸು, 3-5 ವರ್ಷದ ಮಕ್ಕಳು 11-13 ತಾಸು, ಶಾಲೆಗೆ ಹೋಗುವ ಮಕ್ಕಳಿಗೆ 10-11 ತಾಸು ನಿದ್ರೆಯ ಅಗತ್ಯವಿದೆ. 9 ವರ್ಷ ಮೇಲ್ಪಟ್ಟ ಮಕ್ಕಳಿಗೆ 8 ತಾಸು ನಿದ್ರೆ ಸಾಕಾಗುತ್ತದೆ. ಉಳಿದವರು ಸಹ 6 ಗಂಟೆಗೂ ಅಧಿಕ ಸಮಯ ನಿದ್ರಿಸಬೇಕು.
ಇತಿಹಾಸ: ಜಾಗತಿಕವಾಗಿ ನಿದ್ರೆಯ ಮಹತ್ವ ತಿಳಿಸುವ ಸಲುವಾಗಿ 2008ರಿಂದ ಪ್ರತಿ ವರ್ಷ ಮಾರ್ಚ್ ತಿಂಗಳಲ್ಲಿ ನಿದ್ರಾ ದಿನವನ್ನು ಆಚರಿಸಲಾಗುತ್ತದೆ. ಈ ಆಚರಣೆಯಲ್ಲಿ 70ಕ್ಕೂ ಅಧಿಕ ದೇಶಗಳು ಭಾಗಿಯಾಗಿದ್ದು, ವಿಶ್ವ ನಿದ್ರಾ ಸೊಸೈಟಿ ಮೂಲಕ ವಾರ್ಷಿಕ ಜಗತ್ತಿನಾದ್ಯಂತ 150ಕ್ಕೂ ಹೆಚ್ಚು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಆ ಮೂಲಕ ಆರೋಗ್ಯಕರ ನಿದ್ರೆಯ ಸಮಯ, ನಿದ್ರಾ ಔಷಧದ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲಾಗುತ್ತದೆ. ಅಮೆರಿಕದ ಸ್ಲೀಪ್ ಅಸೋಸಿಯೇಷನ್ ಪ್ರಕಾರ 70 ದಶಲಕ್ಷಕ್ಕಿಂತಲೂ ಹೆಚ್ಚು ಜನರು ಹಲವು ರೀತಿಯ ನಿದ್ರೆ ಸಮಸ್ಯೆ ಹೊಂದಿದ್ದರೆ, 25 ದಶಲಕ್ಷ ಅಧಿಕ ಜನರು ತೀವ್ರ ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ನಿದ್ರಾ ಸಮಸ್ಯೆಗಳ ಕುರಿತ ಸಂಶೋಧನೆಗೆ ಹಣಕಾಸು ಒದಗಿಸಲು ಮೀಸಲಾಗಿರುವ ಲಾಭರಹಿತ ಸಂಸ್ಥೆಯಾದ ವರ್ಲ್ಡ್ ಸ್ಲೀಪ್ ಸೊಸೈಟಿಯನ್ನು ಇಟಲಿಯ ವೈದ್ಯರಾದ ಲಿಬೊರಿಯೊ ಪ್ಯಾರಿನೊ ಮತ್ತು ಆಂಟೋನಿಯೊ ಕುಲೆಬ್ರಾಸ್ ಸ್ಥಾಪಿಸಿದರು. ನಿದ್ರೆಯ ಸಮಸ್ಯೆಗಳ ಕುರಿತು ರ್ಚಚಿಸಿ ಪರಿಹಾರ ಕಂಡುಕೊಳ್ಳುವ ಉದ್ದೇಶದೊಂದಿಗೆ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ.
ಲಕ್ಷಣಗಳು: ಕಣ್ಣು ಹಾಗೂ ಹುಬ್ಬುಗಳ ನೋವು, ದಣಿವು, ಕಿರಿಕಿರಿ, ಜ್ಞಾಪಕಶಕ್ತಿಯ ಸಮಸ್ಯೆ, ರಾತ್ರಿ ವೇಳೆ ಪದೇಪದೆ ಎಚ್ಚರಗೊಳ್ಳುವುದು, ಬೆಳಗ್ಗೆ ಬೇಗನೆ ಎಚ್ಚರವಾಗುವುದು, ನಿದ್ರೆಯಲ್ಲಿ ಗೊರಕೆ ಹೊಡೆಯುವುದು, ಮಾತನಾಡುವುದು, ನಡೆಯುವುದು ನಿದ್ರಾಹೀನತೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಯ ಲಕ್ಷಣಗಳು. ಇಂಥವರು ವೈದ್ಯರಲ್ಲಿ ಚಿಕಿತ್ಸೆ ಪಡೆಯುವುದು ಸೂಕ್ತ.
ತೊಡಕುಗಳು: ಸರಿಯಾದ ನಿದ್ರೆ ಮಾಡದಿದ್ದರೆ ಹಗಲು ಹೊತ್ತಿನಲ್ಲಿ ತೂಕಡಿಕೆ, ಕೆಲಸದಲ್ಲಿ ನಿರಾಸಕ್ತಿ ಸಾಮಾನ್ಯ. ಆದರೆ ಉಸಿರಾಟದ ಸಮಸ್ಯೆ, ರಕ್ತದ ಒತ್ತಡ, ಹೃದಯ ಸಮಸ್ಯೆ, ಬೊಜ್ಜು, ಪಾರ್ಶ್ವವಾಯು, ನರದೌರ್ಬಲ್ಯ ಮತ್ತಿತರ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇದಲ್ಲದೆ ನಿದ್ರಾಹೀನತೆಯಿಂದ ಸ್ಲೀಪ್ಆಪ್ನಿಯದಂಥ ಗಂಭೀರ ಸಮಸ್ಯೆಗೆ ಒಳಗಾಗುತ್ತಾರೆ. ಹೀಗಾಗಿ ಆರೋಗ್ಯಕರ ನಿದ್ರೆ ಮಾಡುವುದನ್ನು ರೂಢಿಸಿಕೊಳ್ಳಿ ಎನ್ನುತ್ತಾರೆ ತಜ್ಞರು.
ತಜ್ಞರ ಸಲಹೆ