ನ್ಯೂಸ್

ಶಿಕ್ಷೆ ಪ್ರಶ್ನಿಸುವ ಪೊಲೀಸರ ಹಕ್ಕು ಮೊಟಕು!; ಶಿಸ್ತು ಪ್ರಾಧಿಕಾರ ವಿರುದ್ಧ ಮೇಲ್ಮನವಿ ಸಲ್ಲಿಸುವಂತಿಲ್ಲ

| ಕೀರ್ತಿನಾರಾಯಣ ಸಿ. ಬೆಂಗಳೂರು

ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ತಿಳಿದೋ ತಿಳಿಯದೆಯೋ ಮಾಡಿದ ತಪ್ಪಿಗೆ ಶಿಸ್ತು ಪ್ರಾಧಿಕಾರ ಶಿಕ್ಷೆ ಕೊಟ್ಟರೆ ಅದನ್ನು ಪ್ರಶ್ನಿಸುವ ಅಧಿಕಾರವೇ ಇನ್ನು ಮುಂದೆ ಇರುವುದಿಲ್ಲ! ವಿಧಿಸುವ ದಂಡನೆ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಇರುವಂತಹ ಅಧಿಕಾರವನ್ನು ಮೊಟಕುಗೊಳಿಸಲು ಮುಂದಾಗಿರುವ ರಾಜ್ಯ ಸರ್ಕಾರದ ವಿರುದ್ಧ ಪೊಲೀಸ್ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಯಾವುದೇ ಕಾರಣಕ್ಕೂ ನಿಯಮಾವಳಿಗೆ ತಿದ್ದುಪಡಿ ತರಬಾರದು ಎಂಬ ಕೂಗು ಕೇಳಿಬಂದಿದೆ.

ಕರ್ನಾಟಕ ರಾಜ್ಯ ಪೊಲೀಸ್ ಶಿಸ್ತು ನಡವಳಿಕೆ ನಿಯಮಗಳು 1965/1989ಕ್ಕೆ ತಿದ್ದುಪಡಿ ತರಲಾಗುತ್ತಿದೆ. 2022ರ ತಿದ್ದುಪಡಿ ನಿಯಮಕ್ಕೆ ಹೆಚ್ಚುವರಿಯಾಗಿ 4ಎ, 4ಬಿ ಮತ್ತು 4ಸಿ ಉಪ ನಿಯಮಗಳನ್ನು ಸೇರ್ಪಡೆಗೊಳಿಸಿ, ಕರಡು ಪ್ರತಿಯನ್ನು ಬಿಡುಗಡೆ ಮಾಡಲಾಗಿದೆ. ಆದರೆ, ತಿದ್ದುಪಡಿ ನಿಯಮವು ಸ್ವಾಭಾವಿಕ ನ್ಯಾಯ ತತ್ವಗಳಿಗೆ ವಿರುದ್ಧವಾಗಿದೆ. ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಕ್ರೂರ ಹಾಗೂ ಕಠಿಣ ಕ್ರಮಗಳನ್ನು ಕೈಗೊಳ್ಳುವ ಸಲುವಾಗಿ ತಿದ್ದುಪಡಿ ತರಲಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಭ್ರಷ್ಟಾಚಾರ, ಅಶಿಸ್ತು ಹಾಗೂ ಇನ್ನಿತರ ಆರೋಪ ಕೇಳಿ ಬಂದಾಗ ಸಂಬಂಧಪಟ್ಟ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಶಿಸ್ತು ಪ್ರಾಧಿಕಾರಗಳು, ವಾಗ್ದಂಡನೆ, ವಾರ್ಷಿಕ ವೇತನ ಬಡ್ತಿ ತಡೆ ಹಿಡಿಯುವುದು, ಹುದ್ದೆ ಮುಂಬಡ್ತಿ ತಡೆ ಹಿಡಿಯುವುದು ಹಾಗೂ ಆರ್ಥಿಕ ನಷ್ಟ ವಸೂಲಿ ಮಾಡಲು ದಂಡನೆ ವಿಧಿಸಲಾಗುತ್ತದೆ. ಪ್ರಸ್ತುತ ಈ ದಂಡನೆಗಳ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಅಧಿಕಾರಿ ಮತ್ತು ಸಿಬ್ಬಂದಿಗೆ ಅವಕಾಶ ಇದೆ. ಆದರೀಗ ತಿದ್ದುಪಡಿ ನಿಯಮದಲ್ಲಿ ದಂಡನೆಗೊಳಗಾದ ಅಧಿಕಾರಿ ಮತ್ತು ಸಿಬ್ಬಂದಿ ಶಿಸ್ತು ಪ್ರಾಧಿಕಾರ ಹೊರಡಿಸಿದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶ ಇರುವುದಿಲ್ಲ. ತಪ್ಪು ಮಾಡಿರಲಿ ಅಥವಾ ಮಾಡದಿರಲಿ ದಂಡನೆಗೆ ಒಳಗಾಗಲೇ ಬೇಕು. ಅಲ್ಲದೆ, ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಅಥವಾ ಯಾವುದೇ ಇತರ ರಾಜ್ಯ ಸರ್ಕಾರಕ್ಕೆ ಹಾಗೂ ಅಧಿಕಾರಿಯ ಸೇವೆಗಳನ್ನು ಹೊಂದಿರುವ ಯಾವುದೇ ವ್ಯಕ್ತಿ, ಸಂಸ್ಥೆ ಅಥವಾ ಪ್ರಾಧಿಕಾರಕ್ಕೆ ನಿರ್ಲಕ್ಷ್ಯ ಅಥವಾ ಆದೇಶಗಳ ಉಲ್ಲಂಘನೆಯಿಂದ ಉಂಟಾದ ಆರ್ಥಿಕ ನಷ್ಟದ ಸಂಪೂರ್ಣ ಅಥವಾ ಭಾಗಶಃ ಹಣದ ವಸೂಲಾತಿಗೆ ದಂಡನೆ ವಿಧಿಸಿದಾಗ ಅಂತಹ ಆದೇಶದ ಮೇಲೂ ಮೇಲ್ಮನವಿ ಸಲ್ಲಿಸಲು ಅವಕಾಶ ಇರದಂತೆ ನಿಯಮ ಜಾರಿಗೆ ತರಲಾಗುತ್ತಿದೆ.

ಕೆಳಹಂತದ ಅಧಿಕಾರಿ ಮತ್ತು ಸಿಬ್ಬಂದಿ ಮೇಲಧಿಕಾರಿಗಳ ವಿರುದ್ಧ ಧ್ವನಿ ಎತ್ತದಂತೆ ಬಿಟಿಷ್ ಪದ್ಧತಿ ಜಾರಿಗೆ ತರಲಾಗುತ್ತಿದೆ. ಕರ್ನಾಟಕ ಪೊಲೀಸ್ ಕಾಯ್ದೆಯನ್ವಯ ನೇಮಕಗೊಂಡವರ ಮೇಲೆ ಸವಾರಿ ಮಾಡಲು ಐಪಿಎಸ್ ಅಧಿಕಾರಿಗಳು ರೂಪಿಸಿರುವ ಪದ್ಧತಿ ಇದಾಗಿದೆ ಎಂದು ಅಧಿಕಾರಿ ಮತ್ತು ಸಿಬ್ಬಂದಿ ಆರೋಪಿಸಿದ್ದು, ತಿದ್ದುಪಡಿ ನಿಯಮ ಕೈಬಿಡುವಂತೆ ಈಗಾಗಲೇ ಹಲವು ಅಧಿಕಾರಿ ಮತ್ತು ಸಿಬ್ಬಂದಿ ಸರ್ಕಾರಕ್ಕೆ ಆಕ್ಷೇಪಣೆಗಳನ್ನು ಸಲ್ಲಿಸಿದ್ದಾರೆ.

ತಿದ್ದುಪಡಿ ಏನು?

  • ಪೊಲೀಸ್ ಶಿಸ್ತು ನಡವಳಿಕೆ ನಿಯಮಕ್ಕೆ ಹೆಚ್ಚುವರಿ 4ಎ,4ಬಿ,4ಸಿ ಉಪ ನಿಯಮ ಸೇರ್ಪಡೆ
  • 4ಎ (ಎ) ಕಲಂ (2) ಮತ್ತು (3) ಅನ್ವಯ ದಂಡನೆಗಳ ವಿರುದ್ಧ ಮೇಲ್ಮನವಿಗೆ ಅವಕಾಶ ಇಲ್ಲ
  • ಆಪಾದಿತ ಅಧಿಕಾರಿ/ಸಿಬ್ಬಂದಿಯ ವೇತನ ಬಡ್ತಿ, ಮುಂಬಡ್ತಿ ತಡೆ ಹಿಡಿದರೂ ಪ್ರಶ್ನಿಸುವಂತಿಲ್ಲ

ದಂಡನೆ ಅಧಿಕಾರ ಯಾರಿಗಿದೆ?

  • ಕಾನ್​ಸ್ಟೆಬಲ್​ನಿಂದ ಎಎಸ್​ಐವರೆಗಿನ ಆರೋಪಗಳಿಗೆ ಎಸ್ಪಿ ಶಿಸ್ತು ಪ್ರಾಧಿಕಾರವಾಗಿ ದಂಡನೆ ವಿಧಿಸುತ್ತಾರೆ. ತಮ್ಮ ವಾದವನ್ನೂ ಕೇಳುವಂತೆ ಐಜಿಪಿಗೆ ಮೇಲ್ಮನವಿ ಸಲ್ಲಿಸಲು ಈಗ ಅವಕಾಶ ಇದೆ.
  • ಸಬ್ ಇನ್​ಸ್ಪೆಕ್ಟರ್​ಗಳ ವಿರುದ್ಧದ ಆರೋಪಕ್ಕೆ ಎಸ್ಪಿ ಶಿಸ್ತು ಪ್ರಾಧಿಕಾರವಾಗಿ ದಂಡನೆ ವಿಧಿಸುತ್ತಾರೆ. ಐಜಿಪಿಗೆ ಮೇಲ್ಮನವಿ ಸಲ್ಲಿಸಲು ಅವಕಾಶ ಇದೆ.
  • ಇನ್​ಸ್ಪೆಕ್ಟರ್, ಎಸಿಪಿಗಳ ವಿರುದ್ಧ ಆರೋಪಕ್ಕೆ ಐಜಿಪಿ ದಂಡನೆ ವಿಧಿಸುತ್ತಾರೆ. ಡಿಜಿಪಿಗೆ ಮೇಲ್ಮನವಿ ಸಲ್ಲಿಸಲು ಅವಕಾಶ ಇದೆ.

ಕರಡನ್ನು ಕನ್ನಡದಲ್ಲಿ ಪ್ರಕಟಿಸಿ: ಕರಡು ಪ್ರತಿಯನ್ನು ಇಂಗ್ಲೀಷ್​ನಲ್ಲಿ ಪ್ರಕಟಿಸಲಾಗಿದೆ. ಪೊಲೀಸ್ ಇಲಾಖೆಯಲ್ಲಿ ಅಂದಾಜು 1 ಲಕ್ಷ ಅಧಿಕಾರಿ ಮತ್ತು ಸಿಬ್ಬಂದಿ ಇದ್ದಾರೆ. ಇದರಲ್ಲಿ ಶೇ.90 ಮಂದಿಗೆ ಇಂಗ್ಲಿಷ್​ನಲ್ಲಿ ಓದಿ ಅರ್ಥೈಸಿಕೊಳ್ಳಲು ಸಾಧ್ಯವಿಲ್ಲ. ತಿದ್ದುಪಡಿ ನಿಯಮಗಳ ಕರಡನ್ನು ಕನ್ನಡದಲ್ಲಿ ಪ್ರಕಟಿಸಿ, ಆಕ್ಷೇಪಣೆಗಳ ಸಲ್ಲಿಕೆಗೆ ಮತ್ತಷ್ಟು ಕಾಲಾವಕಾಶ ಕೊಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಲಾಗಿದೆ. ಸೆ. 9ರಂದು ಕರಡು ಪ್ರಕಟಿಸಿದ್ದು, 15 ದಿನಗಳ ಕಾಲ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ.

ಮೇಲ್ಮನವಿ ಸಲ್ಲಿಸುವ ಅವಕಾಶವಿರದಿದ್ದರೆ ಪೊಲೀಸ್ ಇಲಾಖೆಯ ಸಾಕಷ್ಟು ಅಧಿಕಾರಿ ಮತ್ತು ಸಿಬ್ಬಂದಿ ವಾರ್ಷಿಕ ವೇತನ ಬಡ್ತಿ ಮತ್ತು ಮುಂಬಡ್ತಿಯಿಂದ ವಂಚಿತರಾಗುವ ಸಾಧ್ಯತೆ ಹೆಚ್ಚಾಗುತ್ತದೆ. | ಇನ್​ಸ್ಪೆಕ್ಟರ್ ನಿರುದ್ಯೋಗ, ಬಡತನ ಸಮಸ್ಯೆಯಿಂದಾಗಿ ಇತ್ತೀಚಿನ ದಿನಗಳಲ್ಲಿ ಪೊಲೀಸ್ ಇಲಾಖೆಗೆ ಉನ್ನತ ಪದವೀಧರರು ಹೆಚ್ಚಾಗಿ ಸೇರಿಕೊಳ್ಳುತ್ತಿದ್ದಾರೆ. ಇಲಾಖೆಯಲ್ಲಿ ನಡೆಯುವಂತಹ ಅನ್ಯಾಯದ ವಿರುದ್ಧ ಧ್ವನಿ ಎತ್ತುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಮೇಲಾಧಿಕಾರಿಗಳಿಗೆ ಸಹಿಸಿಕೊಳ್ಳಲಾಗುತ್ತಿಲ್ಲ. ಗುಲಾಮರಂತೆ ಇಟ್ಟುಕೊಳ್ಳಲು ಇಂತಹ ನಿಯಮಗಳನ್ನು ಜಾರಿಗೆ ತರಲಾಗುತ್ತಿದೆ. | ಇನ್​ಸ್ಪೆಕ್ಟರ್

ನಿಯಮ ತಿದ್ದುಪಡಿಗೆ ವಿರೋಧ ಏಕೆ?

  • ಬಹುತೇಕ ಪ್ರಕರಣಗಳಲ್ಲಿ ಅಧಿಕಾರಿಗಳು ಪೂರ್ವಗ್ರಹ ಪೀಡಿತರಾಗಿ ಯಾರದೋ ಮಾತನ್ನು ಕೇಳಿ ಮನಸಿಗೆ ಬಂದಂತೆ ದಂಡನೆಗಳನ್ನು ವಿಧಿಸುತ್ತಿದ್ದು, ತಪ್ಪು ಮಾಡದಿದ್ದರೂ ಅಧಿಕಾರಿ/ಸಿಬ್ಬಂದಿ ಶಿಕ್ಷೆಗೆ ಒಳಗಾಗುತ್ತಿದ್ದಾರೆ.
  • ದಂಡನೆಗೆ ಒಳಗಾದ ಅಧಿಕಾರಿ ಮತ್ತು ಸಿಬ್ಬಂದಿ, ಇಲಾಖಾ ಮೇಲಧಿಕಾರಿಗಳಿಗೆ ಮೇಲ್ಮನವಿ ಸಲ್ಲಿಸಿ ತಮ್ಮ ಕುಂದು-ಕೊರತೆ ಮತ್ತು ತಮ್ಮ ಪರವಾದ ವಾದವನ್ನು ಮಂಡಿಸಲು ಅವಕಾಶವಿಲ್ಲದ ಕ್ರೂರ ನಿಯಮವನ್ನು ರಚಿಸಲಾಗಿದೆ.
  • ಅಖಿಲ ಭಾರತ ಸೇವೆಗಳ ಶಿಸ್ತು ನಿಯಮಗಳಲ್ಲಿ ಇಲ್ಲದಂತಹ ನಿಯಮ, ಕೇಂದ್ರ ಸರ್ಕಾರದ ನಾಗರಿಕ ಸೇವಾ ಶಿಸ್ತು ನಿಯಮಗಳಲ್ಲಿ ಇಲ್ಲದಂತಹ ನಿಯಮ ಕರ್ನಾಟಕದಲ್ಲಿ ಯಾಕೆ ಬೇಕು.
  • ಕರ್ನಾಟಕದ ಬೇರೆ ಇಲಾಖೆಗಳಲ್ಲೂ ಇಂತಹ ಮೇಲ್ಮನವಿ ಸಲ್ಲಿಸಲು ಅವಕಾಶವಿಲ್ಲದ ನಿಯಮ ಜಾರಿಯಲ್ಲಿಲ್ಲ. ಪೊಲೀಸ್ ಇಲಾಖೆಗೆ ಏಕೆ?

ಪೊಲೀಸರ ವಾದವೇನು?

  • ಮೇಲ್ಮನವಿ ಸಲ್ಲಿಸುವುದು ತಪ್ಪೇ? ಶಿಸ್ತು ಪ್ರಾಧಿಕಾರಗಳು ವಿಧಿಸಿದ ದಂಡನೆಗಳೆಲ್ಲ ಸರಿಯಾಗಿರುತ್ತದೆಯೇ? ಮೇಲ್ಮನವಿ ಸಲ್ಲಿಸಲು ಅವಕಾಶವಿಲ್ಲದಿರುವಂತೆ ಮಾಡುವ ಉದ್ದೇಶವಾದರೂ ಏನು?
  • ಎಲ್ಲ ಅಧಿಕಾರಿ, ಸಿಬ್ಬಂದಿಗೆ ಕೋರ್ಟ್ ಮೊರೆ ಹೋಗಲು ಸಾಧ್ಯವಿರುವುದಿಲ್ಲ. ಅದಕ್ಕಾಗಿಯೇ ಇಲಾಖಾ ಮೇಲ್ಮನವಿ ಮತ್ತು ಸರ್ಕಾರದ ಮೇಲ್ಮನವಿಗೆ ಅವಕಾಶ ಇರುವುದು. ಅದನ್ನೇ ಕಿತ್ತುಕೊಂಡರೆ ಹೇಗೆ?
  • ಈ ಹಿಂದೆ ಇದ್ದ ನಿಯಮಗಳ ಪ್ರಕಾರ ಮೇಲ್ಮನವಿ ಸಲ್ಲಿಸಲು ಅವಕಾಶವಿತ್ತು ಹಾಗೂ ಮೇಲ್ಮನವಿ ಸಲ್ಲಿಸಲು 3 ತಿಂಗಳ ಕಾಲಾವಕಾಶ ಸಹ ಇತ್ತು. ಈಗ ಮೊಟಕುಗೊಳಿಸುವುದು ಏಕೆ?