ಹೈದರಾಬಾದ್: ಒಂದು ಪ್ಲೇಟ್ ಇಡ್ಲಿ-ಸಾಂಬಾರ್ ಬೆಲೆ ಎಷ್ಟಿರಬಹುದು? ಸಾಮಾನ್ಯ ಹೋಟೆಲ್ಗಳಲ್ಲಾದರೆ 25 ರಿಂದ 30 ರೂಪಾಯಿ ಇರುತ್ತದೆ. ಅದೇ ಫೈವ್ ಸ್ಟಾರ್ ಹೋಟೆಲ್ನಲ್ಲಿ ಅಬ್ಬಾಬ್ಬಾ ಅಂದ್ರ 100 ರಿಂದ 150 ರೂಪಾಯಿ ಇರುತ್ತದೆ. ಆದರೆ, ಹೈದರಾಬಾದ್ನ ಖಾಸಗಿ ಆಸ್ಪತ್ರೆ ಒಂದು ಪ್ಲೇಟ್ ಇಡ್ಲಿಗೆ ಚಾರ್ಜ್ ಮಾಡಿದ ಮೊತ್ತ ಕೇಳಿದ್ರೆ ನಿಜಕ್ಕೂ ಶಾಕ್ ಆಗುತ್ತದೆ.
ಹೈದರಾಬಾದ್ ಖಾಸಗಿ ಆಸ್ಪತ್ರೆ ಬರೋಬ್ಬರಿ 700 ರೂಪಾಯಿ ಬಿಲ್ ಮಾಡಿದೆ. ನಾವು ಹೇಳುತ್ತಿರುವುದು ತಮಾಷೆಯಲ್ಲ. ನಿಜವಾಗಿಯೂ ಇಷ್ಟು ಹಣವನ್ನು ರೋಗಿಯ ಕೈಯಿಂದ ವಸೂಲಿ ಮಾಡಿದ್ದಾರೆ.
ಮೊದಲೇ ಕರೊನಾದಿಂದ ಜನರು ಆರ್ಥಿಕವಾಗಿ ಕುಗ್ಗಿರುವ ಸಮಯದಲ್ಲಿ ಹೈದರಾಬಾದ್ ಸೇರಿದಂತೆ ದೇಶದ ಕೆಲ ಖಾಸಗಿ ಆಸ್ಪತ್ರೆಗಳು ಲೂಟಿಗೆ ಇಳಿದಿವೆ. ಜನರ ಸಮಸ್ಯೆಗೆ ಸರಿಯಾದ ಸಮಯದಲ್ಲಿ ನ್ಯಾಯ ಒದಗಿಸಿಕೊಡಲು ವಿಫಲವಾಗುತ್ತಿರುವುದರಿಂದ ಈ ರೀತಿಯ ಅನೇಕ ಘಟನೆಗಳು ನಡೆಯುತ್ತಿವೆ. ಇದನ್ನು ಪ್ರಶ್ನಿಸಿದರೆ ಏನು ಮಾಡಿಬಿಡುತ್ತಾರೋ ಎಂಬ ಭಯದಿಂದಲೂ ಕೆಲವರು ಧ್ವನಿಯೇರಿಸದೇ ಸುಮ್ಮನಾಗಿಬಿಡುತ್ತಾರೆ.
ರೋಗ ಲಕ್ಷಣಗಳಿಲ್ಲದೆ ಕೋವಿಡ್ ಪಾಸಿಟಿವ್ ಆದ ರೋಗಿಗಳ ಬಳಿ ಲಕ್ಷಾಂತರ ಹಣ ಪೀಕಿದ ಎಷ್ಟೋ ಉದಾಹರಣೆಗಳು ನಮ್ಮ ಮುಂದಿವೆ. ಅದೇ ರೀತಿ ಹೈದರಾಬಾದ್ ಆಸ್ಪತ್ರೆ ರೋಗಿಯೊಬ್ಬರಿಗೆ ನೀಡಿದ ಬಿಲ್ ನೋಡಿದ್ರೆ ಒಮ್ಮೆ ಹೃದಯಾಘಾತವಾಗುವುದು ಖಂಡಿತ. ಹೈದರಾಬಾದ್ನ ಕಾರ್ಪೊರೇಟ್ ಆಸ್ಪತ್ರೆಯೊಂದು ಒಂದು ಪ್ಲೇಟ್ ಇಡ್ಲಿಗೆ ಬರೋಬ್ಬರಿ 700 ರೂ. ಚಾರ್ಜ್ ಮಾಡಿದೆ.
ರೋಗಿಯ ಸಂಬಂಧಿಯೊಬ್ಬರು ಟ್ವಿಟರ್ನಲ್ಲಿ ಆಸ್ಪತ್ರೆಯ ಬಿಲ್ ಅನ್ನು ಶೇರ್ ಮಾಡಿದ ಬಳಿಕ ಘಟನೆ ಬೆಳಕಿಗೆ ಬಂದಿದೆ. ಈ ಇಡ್ಲಿಗಳೇನಾದರೂ ಸ್ವರ್ಗದಿಂದ ಬಂದಿದೆಯೇ? ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ನೆಟ್ಟಿಗರು ಇದೊಂದೆ ಆಸ್ಪತ್ರೆಯಲ್ಲ ಇಂತಹ ಅನೇಕ ಆಸ್ಪತ್ರೆಗಳಲ್ಲಿ ಇಂತಹ ಪರಿಸ್ಥಿತಿ ಇದೆ ಎಂದಿದ್ದಾರೆ. ಮನುಷ್ಯತ್ವವನ್ನೇ ಮರೆತು ಮೃಗಗಳಂತೆ ಖಾಸಗಿ ಆಸ್ಪತ್ರೆಯವರು ವರ್ತಿಸುತ್ತಿದ್ದಾರೆಂದು ನೆಟ್ಟಿಗರು ಕಿಡಿಕಾರಿದ್ದಾರೆ. (ಏಜೆನ್ಸೀಸ್)