The man who harassed a South Korean vlogger in Pune , police
ಪುಣೆ: ಪುಣೆಯಲ್ಲಿ ದಕ್ಷಿಣ ಕೊರಿಯಾದ ಯೂ ಟ್ಯೂಬರ್ ಯುವತಿಗೆ ಕಿರುಕುಳ ನೀಡಿದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನವೆಂಬರ್‌ನಲ್ಲಿ ಘಟನೆ ನಡೆದಿದ್ದು, ವೀಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದರಿಂದ ಪೊಲೀಸರು ಕೇಸು ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ಪುಣೆಯ ಪಿಂಪ್ರಿ ಚಿಂಚ್‌ವಾಡ್‌ನ ರಾವೆಟ್ ಪ್ರದೇಶದ ಮಾರುಕಟ್ಟೆಯಲ್ಲಿ ದಕ್ಷಿಣ ಕೊರಿಯಾದ ಕೆಲ್ಲಿ ಎಂಬಾಕೆ ವ್ಲಾಗ್ ಮಾಡುತ್ತಿದ್ದಾಗ ಅಲ್ಲಿನ ಜನರು ಆಕೆಯನ್ನು ಸುತ್ತುವರಿದಿದ್ದರು. ಆಗ ಅಲ್ಲಿಗೆ ಬಂದ ಸ್ಥಳೀಯ ವ್ಯಕ್ತಿ ಆಕೆ ಕುತ್ತಿಗೆಗೆ ಕೈ ಹಾಕಿ ಅಸಭ್ಯವಾಗಿ ವರ್ತಿಸಿದ್ದ. ಇದು ಸ್ಥಳದಲ್ಲಿದ್ದ ಕೆಲವರು ವೀಡಿಯೋ ಮಾಡಿದ್ದು, ಅದರಲ್ಲಿ ರೆಕಾರ್ಡ್ ಆಗಿತ್ತು. ನಂತರ ಕ್ಲಿಪ್ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಪುಣೆಯ ಪಿಂಪ್ರಿ ಚಿಂಚ್‌ವಾಡ್ ಪೊಲೀಸರು ಕ್ಷಿಪ್ರವಾಗಿ ಕ್ರಮ ಕೈಗೊಂಡಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.
ಎಸಿಪಿ ಸತೀಶ್ ಮಾನೆ ಅವರ ಪ್ರಕಾರ, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವ್ಯಾಪಕವಾಗಿ ಹರಡಿದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ. ವೀಡಿಯೋ ತುಣುಕಿನಲ್ಲಿ ಕೆಲ್ಲಿ ಮಾರುಕಟ್ಟೆಯಲ್ಲಿ ಸ್ಥಳೀಯರೊಂದಿಗೆ ತೊಡಗಿಸಿಕೊಳ್ಳಲು ಪ್ರಯತ್ನಿಸುತ್ತಿರುವಾಗ ಆರೋಪಿ ಆಕೆಯ ಕುತ್ತಿಗೆಗೆ ಕೈ ಹಾಕಿ ಅನುಚಿತವಾಗಿ ವರ್ತಿಸಿದ್ದು ಕಂಡುಬಂದಿತ್ತು. ಪಿಂಪ್ರಿ ಚಿಂಚ್ವಾಡ್ ಪೊಲೀಸರ ಅಪರಾಧ ವಿಭಾಗವು ರಾವೆಟ್ ಪ್ರದೇಶದಲ್ಲಿ ಶಂಕಿತನನ್ನು ಪತ್ತೆಹಚ್ಚಿ ಮಂಗಳವಾರ ಬಂಧಿಸಿತು ಎಂದು ವಿವರಿಸಿದ್ದಾರೆ.
ಕೆಲ್ಲಿ ತೆಂಗಿನ ನೀರು ಹೀರುತ್ತಾ ಸ್ಥಳೀಯ ಅಂಗಡಿಯೊಂದರಲ್ಲಿ ವ್ಯಾಪಾರಿಗಳು ಮತ್ತು ಗ್ರಾಹಕರೊಂದಿಗೆ ಸಂಭಾಷಣೆ ನಡೆಸುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಇದ್ದಕ್ಕಿದ್ದಂತೆ ಆ ವ್ಯಕ್ತಿ ಒಳನುಗ್ಗಿ ಆಕೆಯನ್ನು ಹಿಡಿಯುತ್ತಾನೆ, ಅವಳ ಕುತ್ತಿಗೆಗೆ ತನ್ನ ಕೈಯನ್ನು ಹಾಕುತ್ತಾನೆ. ಆಗ ಮತ್ತೊಬ್ಬ ವ್ಯಕ್ತಿ ಬಂದು ಇನ್ನೂ ಆಕೆಯ ಸನಿಹಕ್ಕೆ ಬರುವಂತೆ ಸೂಚಿಸುತ್ತಾನೆ. ಕೆಲ್ಲಿ ಅವರಿಂದ ತಪ್ಪಿಸಿಕೊಳ್ಳಲು ಯತ್ನಿಸಸುತ್ತಾಳೆ. "ನಾನು ಇಲ್ಲಿಂದ ಓಡಬೇಕು" ಎಂದು ಹೇಳುತ್ತಾಳೆ ಆದರೆ ಅವರು ಆಕೆಯನ್ನು ಬಲವಂತವಾಗಿ ತಬ್ಬಿಕೊಳ್ಳಲು ಮುಂದಾಗುತ್ತಾರೆ ಎಂದು ವಿವರಿಸಿದರು.
ಇದೇ ರೀತಿಯ ಘಟನೆ ಮುಂಬೈನಲ್ಲಿ ಕಳೆದ ವರ್ಷ ನಡೆದಿತ್ತು. ಆಗಲೂ ದಕ್ಷಿಣ ಕೊರಿಯಾದ ವ್ಲಾಗರ್‌ಗೆ ಕಿರುಕುಳ ನೀಡಿದ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿತ್ತು.