ಬೀಜಿಂಗ್: ಟಿಬೆಟ್ ಪ್ರಸ್ಥಭೂಮಿಯ ಪೂರ್ವ ಭಾಗದಲ್ಲಿ ವಿಶ್ವದ ಅತ್ಯಂತ ದೊಡ್ಡದೆಂದು ಹೇಳಲಾಗಿರುವ ಜಲವಿದ್ಯುತ್ ಯೋಜನೆಗೆ ಅಣೆಕಟ್ಟೆ ನಿರ್ವಿುಸುವ ಯೋಜನೆಗೆ ಚೀನಾ ಅನುಮೋದನೆ ನೀಡಿದೆ. ಇದರಿಂದ, ಅಣೆಕಟ್ಟಿನ ಕೆಳಭಾಗದಲ್ಲಿರುವ ಭಾರತ ಮತ್ತು ಬಾಂಗ್ಲಾದೇಶದ ಲಕ್ಷಾಂತರ ಜನರ ಬದುಕಿಗೆ ತೊಂದರೆಯಾಗಬಹುದೆಂಬ ಭೀತಿ ಎದುರಾಗಿದೆ.
ಟಿಬೆಟ್ನಲ್ಲಿ ಬ್ರಹ್ಮಪುತ್ರ ನದಿ ಮೇಲೆ ಭಾರತದ ಗಡಿ ಸಮೀಪ 137 ಶತಕೋಟಿ ಅಮೆರಿಕನ್ ಡಾಲರ್ ವೆಚ್ಚದಲ್ಲಿ ನಿರ್ವಣವಾಗಲಿರುವ ಅಣೆಕಟ್ಟು ಯೋಜನೆಯಿಂದ ಕೆಳ ಹರಿವಿನ ದೇಶಗಳಾದ ಭಾರತ ಮತ್ತು ಬಾಂಗ್ಲಾದೇಶಕ್ಕೆ ಕಳವಳ ಉಂಟಾಗಿದೆ. ಚೀನಾದಲ್ಲಿ ಯಾರ್ಲುಂಗ್ ಝುಂಗ್ಬೋ ಎಂದು ಕರೆಯಲಾಗುವ ಬ್ರಹ್ಮಪುತ್ರ ನದಿಯ ಕೆಳ ಹರಿವಿನಲ್ಲಿ ಕಟ್ಟಲಾಗುವ ಅಣೆಕಟ್ಟು ವರ್ಷಕ್ಕೆ 300 ಶತಕೋಟಿ ಕಿಲೋವ್ಯಾಟ್ ಗಂಟೆಯಷ್ಟು ವಿದ್ಯುತ್ ಉತ್ಪಾದಿಸಬಹುದೆಂದು ಚೀನಾದ ಪವರ್ ಕನ್ಸ್ಟ್ರಕ್ಷನ್ ಕಾರ್ಪೆರೇಶನ್ 2020ರಲ್ಲಿ ಅಂದಾಜು ಮಾಡಿತ್ತು.
ಅದು, ಮಧ್ಯ ಚೀನಾದಲ್ಲಿ ಈಗಿರುವ ಜಗತ್ತಿನ ಹಾಲಿ ಅತಿ ದೊಡ್ಡದಾದ ತ್ರೀ ಗಾರ್ಜಸ್ ಡ್ಯಾಮ್ ಉತ್ಪಾದಿಸಲು ಯೋಜಿಸಿರುವ 88.2 ಶತಕೋಟಿ ಕಿಲೋವ್ಯಾಟ್ ವಿದ್ಯುತ್ನ ಮೂರು ಪಟ್ಟಿಗಿಂತ ಜಾಸ್ತಿಯಾಗಲಿದೆ ಚೀನಾದ ಅಧಿಕೃತ ಸುದ್ದಿ ಸಂಸ್ಥೆ ಕ್ಸಿನ್ಹುವಾ ಬುಧವಾರ ವರದಿ ಮಾಡಿದೆ.
ಯಾರ್ಲುಂಗ್ ಝುಂಗ್ಬೋದ ಒಂದು ವಿಭಾಗ 50 ಕಿಲೋ ಮೀಟರ್ನಷ್ಟು (31 ಮೈಲಿ) ಸಣ್ಣ ಪ್ರದೇಶದಲ್ಲಿ ನಾಟಕೀಯವಾಗಿ 2,000 ಮೀಟರ್ನಷ್ಟು (6,561 ಅಡಿ) ಕೆಳಗೆ ಬೀಳುವುದರಿಂದ ಜಲವಿದ್ಯುತ್ ಉತ್ಪಾದನೆಗೆ ಅಪಾರ ಅವಕಾಶವಿದೆ. ಅಲ್ಲದೆ, ಅದು ವಿಶಿಷ್ಟ ಎಂಜಿನಿಯರಿಂಗ್ ಸವಾಲುಗಳನ್ನೂ ಒಡ್ಡುತ್ತದೆ. ತ್ರೀ ಗಾರ್ಜಸ್ ಡ್ಯಾಮ್ೆ ತಗಲಿದ 254.2 ಶತಕೋಟಿ ಯುವಾನ್ (34.83 ಶತಕೋಟಿ ಡಾಲರ್) ವೆಚ್ಚವನ್ನು ಹೊಸ ಯೋಜನೆಯ ಖರ್ಚು ಮಸಕುಗೊಳಿಸಲಿದೆ. ಇದು, ಯೋಜನೆಯಿಂದ ನಿರಾಶ್ರಿತರಾಗಲಿರುವ ಸುಮಾರು 14 ಲಕ್ಷ ಜನರ ಪುನರ್ವಸತಿಗೆ ತಗಲುವ ವೆಚ್ಚವನ್ನೂ ಒಳಗೊಂಡಿರುತ್ತದೆ.
ಭಾರತದ ಕಳವಳವೇನು?: ಟಿಬೆಟ್ ಯೋಜನೆಯಿಂದ ಪರಿಸರದ ಮೇಲಾಗಲೀ ನೀರಿನ ಕೆಳ ಹರಿವಿನಲ್ಲಾಗಲೀ ಯಾವುದೇ ಪರಿಣಾಮವಾಗುವುದಿಲ್ಲ ಎಂದು ಚೀನಾದ ಅಧಿಕಾರಿಗಳು ಹೇಳಿದ್ದಾರೆ. ಆದರೆ, ಸ್ಥಳೀಯ ಪರಿಸರವನ್ನು ಬದಲಾಯಿಸುವುದು ಮಾತ್ರವಲ್ಲದೆ ನದಿಯ ಕೆಳಹರಿವಿನ ಮಾರ್ಗವೂ ಬದಲಾಗಲಿದೆ ಎಂಬುದು ಭಾರತ ಮತ್ತು ಬಾಂಗ್ಲಾದೇಶದ ಕಳವಳವಾಗಿದೆ.