ನ್ಯೂಸ್

ಸರ್ಕಾರ ಕೇವಲ ಒಂದು ಸಮುದಾಯದ ಓಲೈಕೆ ಮಾಡುತ್ತಿದೆ; ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ| government

ಶಿವಮೊಗ್ಗ: ಹಾಸನ ಜಿಲ್ಲೆಯ ಮೊಸಳೆಹೊಸಹಳ್ಳಿಯಲ್ಲಿ ಗಣೇಶ ಮೆರವಣಿಗೆ ವೇಳೆ ಸಂಭವಿಸಿದ ದುರಂತದಲ್ಲಿ ಮತಪಟ್ಟವರ ಕುಟುಂಬಕ್ಕೆ ಹೆಚ್ಚಿನ ಪರಿಹಾರ ನೀಡಬೇಕು. ಇಲ್ಲವಾದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತೀವ್ರ ವಾಗ್ದಾಳಿ ನಡೆಸಿದರು.

ಕೇರಳದಲ್ಲಿ ಪ್ರಿಯಾಂಕಾ ಗಾಂಧಿ ಕ್ಷೇತ್ರಕ್ಕೆ 10 ಕೋಟಿ ರೂ. ನೀಡುತ್ತಾರೆ. ಆರ್‌ಸಿಬಿ ಕ್ರಿಕೆಟ್ ತಂಡ ಸರ್ಕಾರದ ಯೋಜನೆ ಅಲ್ಲ, ಸರ್ಕಾರದ ಕ್ರೀಡೆ ಕೂಡ ಅಲ್ಲ. ಆದರೂ ಕಾಲ್ಕುಳಿತಕ್ಕೆ ಒಳಗಾಗಿ ಮೃತಪಟ್ಟವರಿಗೆ ಪರಿಹಾರ ಕೊಡುತ್ತಾರೆ. ಆದರೆ ಗಣಪತಿ ಮೆರವಣಿಗೆಗಳಲ್ಲಿ ಸತ್ತವರ ಕುಟುಂಬಗಳಿಗೆ ನೆರವು ನೀಡುತ್ತಿಲ್ಲ. ಪ್ರತಿ ಬಜೆಟ್‌ನಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕಷ್ಟೇ ಯೋಜನೆ ಮತ್ತು ಸವಲತ್ತುಗಳ ಘೋಷಣೆ ನಡೆಯುತ್ತಿದೆ. ಎಲ್ಲರಿಗೂ ತಕ್ಕ ಪರಿಹಾರ, ಸೌಲಭ್ಯ ಇರಬೇಕಾದರೂ, ಸರ್ಕಾರವು ನಿರ್ದಿಷ್ಟ ಸಮುದಾಯದ ಪರವಾಗಿ ನಿಲ್ಲುತ್ತಿದೆ ಎಂದು ದೂರಿದರು.

ಶಿವಮೊಗ್ಗದಲ್ಲಿ ಇಂದು (ಸೆ.14) ಸುದ್ದಿಗರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಹಿಂದೂ ವಿರೋಧಿ ಸರ್ಕಾರ ಆಡಳಿತದಲ್ಲಿದೆ. ಸರ್ಕಾರ ಕೇವಲ ಒಂದು ಸಮುದಾಯದ ಓಲೈಕೆ ಮಾಡುತ್ತಿದೆ. ಈ ಸರ್ಕಾರಕ್ಕೆ ಅಲ್ಪಸಂಖ್ಯಾತರ ನೋವು ಕಾಣುತ್ತಿದೆ. ಆದರೆ ಬೇರೆ ಸಮುದಾಯದ ನೋವು ಕಾಣುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ವರ್ಷ ನಾಗಮಂಗಲದಲ್ಲಿ ಗಣಪತಿಯನ್ನು ಪೊಲೀಸರು ಅರೆಸ್ಟ್ ಮಾಡಿ, ಪೊಲೀಸ್ ಜೀಪಿನಲ್ಲಿ ತೆಗೆದುಕೊಂಡು ಹೋಗಿ ವಿಸರ್ಜನೆ ಮಾಡಿದ್ದರು. ಶಿವಮೊಗ್ಗದಲ್ಲಿ ಔರಂಗಾಜೇಬನ ಕತ್ತಿ ಪ್ರದರ್ಶನಕ್ಕೆ ಅವಕಾಶ ನೀಡಿದ್ದರು. ಹಿಂದೂಗಳನ್ನು ಕೊಂದವನ ಕತ್ತಿಯನ್ನು ಈದ್ ಮೆರವಣಿಗೆಯಲ್ಲಿ ಪ್ರದರ್ಶಿಸುವುದಕ್ಕೆ ಸರ್ಕಾರ ಅನುಮತಿ ಕೊಡುತ್ತಿದೆ. ಇದು ಹಿಂದೂ ವಿರೋಧಿ ನಿಲುವಿಗೆ ನಿದರ್ಶನ. ರಾಜ್ಯದಲ್ಲಿ ಹಿಂದು ವಿರೋಧಿ ಕೆಲಸಗಳು ನಡೆಯಲು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ನೇರ ಕಾರಣಕರ್ತರು ಎಂದು ಆರೋಪಿಸಿದರು.