ಫನೋಮ್ ಪೆನ್ಹ: ಕಾಂಬೋಡಿಯಾದಲ್ಲಿ ಸ್ಫೋಟಕ ಪತ್ತೆಗೆ ನೆರವಾಗುತ್ತಿದ್ದ ಇಲಿ ‘ಮಗವಾ’ ಕಳೆದ ವಾರಾಂತ್ಯದಲ್ಲಿ ಮೃತಪಟ್ಟಿದೆ. ‘ಹೀರೊ ರ್ಯಾಟ್’ ಎಂದೇ ಅದು ಜನಪ್ರಿಯವಾಗಿತ್ತು. ಅದಕ್ಕೆ 8 ವರ್ಷ ವಯಸ್ಸಾಗಿತ್ತು. ಐದು ವರ್ಷ ಕಾಲ ಅದು 100ಕ್ಕೂ ಹೆಚ್ಚು ನೆಲಬಾಂಬ್ ಮತ್ತು ಸ್ಪೋಟಕಗಳನ್ನು ಪತ್ತೆ ಹಚ್ಚುವಲ್ಲಿ ನೆರವಾಗಿತ್ತು. ಇಂಟರ್ನ್ಯಾಷನಲ್ ಚಾರಿಟಿ ಸಂಸ್ಥೆ ಎಪಿಒಪಿಒ ಈ ಇಲಿಯನ್ನು ಬಳಸಿಕೊಂಡಿತ್ತು. ಇದು ಸ್ಪೋಟಕಗಳಿಂದ ಅನೇಕರ ಪ್ರಾಣವನ್ನು ಉಳಿಸಿದೆ. ಇದು ದೊಡ್ಡ ಗಾತ್ರದ ಇಲಿಯಾಗಿದ್ದು, ಇದರ ಮೂಲ ಆಫ್ರಿಕ. ಕ್ಷಯರೋಗ ಪತ್ತೆಗೂ ಈ ಇಲಿಯನ್ನು ಬಳಸುತ್ತಿದ್ದರು. ಕಳೆದ ವಾರ ಆರಂಭದಲ್ಲಿ ಮಗವಾ ಬಹಳ ಆರೋಗ್ಯವಾಗಿತ್ತು. ಆದರೆ ಕ್ರಮೇಣ ಅದು ಎಲ್ಲದರಲ್ಲೂ ನಿರಾಸಕ್ತಿ ತೋರಿಸಿತ್ತು. ಆಹಾರವನ್ನೂ ಸೇವಿಸದೇ ಕ್ಷೀಣವಾಗಿ ಪ್ರಾಣಬಿಟ್ಟಿದೆ ಎಂದು ಎಪಿಒಪಿಒ ತಿಳಿಸಿದೆ.
ಹೀರೋ ರ್ಯಾಟ್: ಮಗವಾ ತಾನ್ಜಾನಿಯಾದ ಸೊಕೊಯಿನೆ ಯೂನಿವರ್ಸಿಟಿ ಆಫ್ ಅಗ್ರಿಕಲ್ಚರ್ ಕ್ಯಾಂಪಸ್ನಲ್ಲಿ 2013ರಲ್ಲಿ್ಲ ಜನಿಸಿತ್ತು. ಇಲ್ಲೇ ಅದಕ್ಕೆ ಸ್ಪೋಟಕ ಪತ್ತೆ ತರಬೇತಿ ಲಭ್ಯವಾಗಿತ್ತು. 2016ರಲ್ಲಿ ಕಾಂಬೋಡಿಯಾದ ಸೇಯಿಮ್ ರೀಪ್ಗೆ ರವಾನಿಸಲ್ಪಟ್ಟಿತ್ತು. ಅಲ್ಲಿ ಸ್ಪೋಟಕ ಪತ್ತೆ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿತ್ತು. 2021ರ ಜೂನ್ನಲ್ಲಿ ಇದು ಸ್ಪೋಟಕ ಪತ್ತೆ ಕಾರ್ಯದಿಂದ ನಿವೃತ್ತಿ ಪಡೆದಿತ್ತು.
ಕಾರ್ಯಕ್ಷಮತೆ: ಒಂದು ಟೆನಿಸ್ ಕೋರ್ಟ್ ಗಾತ್ರದ ಪ್ರದೇಶದಲ್ಲಿ ಸ್ಪೋಟಕ ಪತ್ತೆಗೆ ಮನುಷ್ಯನಿಗೆ ಒಂದರಿಂದ ನಾಲ್ಕು ದಿನ ಬೇಕಾಗಬಹುದು. ಆದರೆ, ಈ ಇಲಿಗೆ ಕೇವಲ 20 ನಿಮಿಷ ಸಾಕು. ಇದು ಈ ಇಲಿಯ ಕಾರ್ಯಕ್ಷಮತೆಗೆ ಸಾಕ್ಷಿ.
ಗಿನ್ನೆಸ್ ದಾಖಲೆ: ಆಫ್ರಿಕನ್ ಮೂಲದ ದೊಡ್ಡ ಇಲಿ ಮಗವಾ ನಾಯಿಯ ಹೊರತಾಗಿ ಪಿಡಿಎಸ್ಎ ಗೋಲ್ಡ್ ಮೆಡಲ್ ಪಡೆದು ಗಿನ್ನೆಸ್ ದಾಖಲೆಗೂ ಪಾತ್ರವಾಗಿದೆ. ಈ ಮೆಡಲ್ ಶೌರ್ಯಕ್ಕೆ ಸಂಬಂಧಿಸಿದ ಜಾರ್ಜ್ ಕ್ರಾಸ್ ಮೆಡಲ್ಗೆ ಸಮನಾದುದು.