ನ್ಯೂಸ್

ಕಾಫಿ ಪರಿಮಳದ ಸೊಗಸು

ಚಿಕ್ಕಮಗಳೂರಿನ ಬೆಟ್ಟ ಪ್ರದೇಶಗಳಲ್ಲಿ ಉಗಮವಾದ ಕಾಫಿಯ ಪರಿಮಳ ಎಲ್ಲೆಡೆ ಆವರಿಸಿಕೊಂಡು ಈಗ ದಕ್ಷಿಣ ಭಾರತದ ಅಧಿಕೃತ ಪೇಯವಾಗಿದೆ. ಬೆಂಗಳೂರು, ಮೈಸೂರುಗಳಲ್ಲಿ ಸಾಂಸಾರಿಕ ಪೇಯವಾಗಿ ಸಾಮುದಾಯಿಕ ಸಂಬಂಧಗಳನ್ನು ಬೆಸೆಯುವ ಕೊಂಡಿಯಾಗಿದೆ. ಸಭೆ, ಸಮಾರಂಭ ಏನೇ ಇರಲಿ ಆ ಚರ್ಚೆಗೆ ರಂಗು ತುಂಬುವುದೇ ಕಾಫಿ. ಉದ್ಯಮವಾಗಿಯೂ ಬೃಹತ್ ರೂಪ ಪಡೆದುಕೊಂಡಿರುವ ಕಾಫಿ ವರ್ಷದಿಂದ ವರ್ಷಕ್ಕೆ ತನ್ನ ಆರ್ಥಿಕ ಸಾಮರ್ಥ್ಯವನ್ನು ವೃದ್ಧಿಸಿಕೊಂಡು ಹೋಗುತ್ತಿದೆ.

ಕಾಫಿಯ ರಾಜಧಾನಿ ಕೊಡಗು: ಕೊಡಗು ಜಿಲ್ಲೆಯೊಂದರಲ್ಲೇ ವರ್ಷಕ್ಕೆ ಸುಮಾರು 1,10,730 ಮೆಟ್ರಿಕ್ ಟನ್ ಕಾಫಿಯನ್ನು ಉತ್ಪಾದಿಸುತ್ತಿದ್ದು, ಇದು ಕರ್ನಾಟಕದ ಶೇಕಡ 50 ಮತ್ತು ಭಾರತದ ಉತ್ಪಾದನೆಯ ಶೇ.35ರಷ್ಟಿದೆ. ಕಾಫಿ ಕೃಷಿಯು ಕಾರ್ವಿುಕ ಪ್ರಧಾನವಾಗಿದ್ದು ಕೊಡಗಿನ ಕಾಫಿ ತೋಟಗಳಲ್ಲಿ ಶೇ.51ರಷ್ಟು ಉದ್ಯೋಗ ಸೃಷ್ಟಿಯಾಗುತ್ತಿದೆ. ಕರ್ನಾಟಕದಲ್ಲಿ 5 ಲಕ್ಷಕ್ಕೂ ಹೆಚ್ಚು ಕೃಷಿ ಕಾರ್ವಿುಕರು ಕಾಫಿ ತೋಟಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸ್ಥಳೀಯ ಪ್ರದೇಶದ ನಿರ್ದಿಷ್ಟ ಪರಿಸರ ಸ್ಥಿತಿಯನ್ನು ಅವಲಂಬಿಸಿ ಕಾಫಿ ಕೃಷಿಯನ್ನು ಮಾಡಲಾಗುತ್ತಿದೆ.ಕೊಡಗಿನ ಅರೇಬಿಕಾ ರೋಬೊಸ್ಟಾ ತಳಿಗಳ ಕಾಫಿ ಬೀಜಗಳಿಗೆ ಭಾರಿ ಬೇಡಿಕೆ ಇದೆ. 60: 40, 80:20 ಹೀಗೆಲ್ಲ ಬೇರೆ ಬೇರೆ ಅನುಪಾತದಲ್ಲಿ ಚಿಕೋರಿ ಬೆರೆಸಿ, ಕಾಫಿಯ ಸ್ವಾದ ಹೆಚ್ಚಿಸುವುದುಂಟು. ಕಾಫಿಯ ಕುರಿತಾಗಿಯೇ ಇರುವ ಅಂತಾರಾಷ್ಟ್ರೀಯ ಪತ್ರಿಕೆ ್ಚfಛಿಛಿ ್ಟಡಜಿಛಿಡಿ ಕಾಫಿಯ ಕುರಿತಾದ ವಾಣಿಜ್ಯಿಕ, ಭೌಗೋಳಿಕ ಸಂಗತಿಗಳ ಕುರಿತು ರ್ಚಚಿಸುತ್ತ, ಕರ್ನಾಟಕದ ಕಾಫಿಯ ಬಗ್ಗೆ ಹಲವು ಬಾರಿ ಪ್ರಸ್ತಾಪಿಸಿದೆ.

ಉದ್ಯೋಗಸೃಷ್ಟಿಯ ಮಾಧ್ಯಮ: ಕಾಫಿ ಬೀಜವನ್ನು ದೇಶಕ್ಕೆ ಪರಿಚಯಿಸಿದ್ದು ಸೂಫಿ ಸಂತ ಬಾಬಾ ಬುಡನ್. 17ನೇ ಶತಮಾನದಲ್ಲಿ ಮೆಕ್ಕಾ ಯಾತ್ರೆಯಿಂದ ಮರಳುವಾಗ 7 ಕಾಫಿ ಬೀಜಗಳನ್ನು ತಂದು ಚಿಕ್ಕಮಗಳೂರಿನ ಚಂದ್ರದೋಣ ಗಿರಿಯಲ್ಲಿ ನೆಟ್ಟರು. ಅಂದು ನೆಟ್ಟ ಕಾಫಿ ಇಂದು ಕರ್ನಾಟಕ ಸೇರಿ ದಕ್ಷಿಣ ಭಾರತದ ರಾಜ್ಯಗಳನ್ನು ವ್ಯಾಪಿಸಿ, ಈಶಾನ್ಯ ರಾಜ್ಯಗಳಿಗೂ ಕಾಲಿಟ್ಟಿದೆ. ದೇಶದಲ್ಲಿ ಅತಿ ಹೆಚ್ಚು ಕಾಫಿ ಬೆಳೆಯುವ ರಾಜ್ಯ ಎಂಬ ಹಿರಿಮೆ ಕರ್ನಾಟಕದ್ದಾಗಿದ್ದು ನಂತರದ ಸ್ಥಾನ ಕೇರಳ ಮತ್ತು ತಮಿಳುನಾಡು ಇದೆ. ಕೊಡಗಿನ ಕಾಫಿ ಹೊರದೇಶಗಳಿಗೂ ರಫ್ತಾಗುತ್ತಿದೆ.

ಬೆಂಗಳೂರಿಗೆ ಕಾಫಿ ತಂದ ಸಾಕಮ್ಮ: ಬೆಂಗಳೂರಿಗೆ ಕಾಫಿಯನ್ನು ಪರಿಚಯಿಸಿದ್ದು ಮಹಿಳಾ ಉದ್ಯಮಿ ದೊಡ್ಡಮನೆ ಸಾಕಮ್ಮ. ತುಮಕೂರಿನಲ್ಲಿ ಹುಟ್ಟಿ ಬೆಂಗಳೂರಿನಲ್ಲಿ ಬೆಳೆದು ಕೊಡಗಿನ ಸೊಸೆಯಾಗಿ ಕಾಫಿ ಬೀಜವನ್ನು ಬೆಂಗಳೂರಿಗೆ ತಂದು ಅಲ್ಲೇ ಹುರಿದು ಪುಡಿ ಮಾಡುವ ಮೊದಲ ಮಿಲ್ ಸ್ಥಾಪಿಸಿ ಮನೆ-ಮನೆಗಳಿಗೂ ಕಾಫಿ ಮಾರಾಟ ಮಾಡಿದ ದೊಡ್ಡಮನೆ ಸಾಕಮ್ಮ ಬೆಂಗಳೂರಿನ ಬಸವನಗುಡಿಯಲ್ಲಿ 1920ನೇ ಇಸವಿಯಲ್ಲಿ ಮೊದಲ ಕಾಫಿ ಕ್ಯೂರಿಂಗ್ ಹಾಗೂ ಪೌಡರಿಂಗ್ ಘಟಕ ಸ್ಥಾಪಿಸಿದರು. ಇವರನ್ನು ಕರ್ನಾಟಕದ ಪ್ರಥಮ ಮಹಿಳಾ ಉದ್ಯಮಿ ಎಂದೂ ಹೇಳಲಾಗುತ್ತದೆ. 1880ರಲ್ಲಿ ತುಮಕೂರು ಜಿಲ್ಲೆಯ ಬಿದರೆ ಎಂಬ ಊರಿನಲ್ಲಿ ಜನಿಸಿದ ಸಾಕಮ್ಮ ಜೀವನೋಪಾಯಕ್ಕಾಗಿ ಬೆಂಗಳೂರಿಗೆ ಬಂದು ನೆಲೆಸಿದ್ದರು. ಸಾಕಮ್ಮ ಜಾಣ್ಮೆಯಿಂದ ನೂರಾರು ಎಕರೆ ಕಾಫಿ ತೋಟದ ಉಸ್ತುವಾರಿ ವಹಿಸಿಕೊಂಡು ಕಾಫಿ ಇಳುವರಿ ಹೆಚ್ಚಾಗಲು ಕಾರಣರಾದರು. ನಂತರ ಉತ್ಪನ್ನದ ವಿಲೇವಾರಿಗೆ ಯೋಜನೆಗಳನ್ನು ಮಾಡಲಾರಂಭಿಸಿದರು. ಕಾಫಿ ಉದ್ಯಮದ ಏಳು-ಬೀಳುಗಳನ್ನು ಅರಿತ ಬಳಿಕ ಸಾಕಮ್ಮನವರು 1920ರಲ್ಲಿ ಬಸವನಗುಡಿ ರಸ್ತೆ ಯಲ್ಲಿ ಕಾಫಿ ಕ್ಯೂರಿಂಗ್ ಹಾಗೂ ಪೌಡರಿಂಗ್ ಘಟಕ ಸ್ಥಾಪಿಸಿದರು. ಬೆಂಗಳೂರಿಗರ ಮನಸ್ಸು ಗೆದ್ದು ಜನಪ್ರಿಯವಾಗಿ ಕಾಫಿ ಪುಡಿ ಸಾಕಮ್ಮ ಎಂಬ ಹೆಸರೂ ಅವರಿಗೆ ಬರಲು ಕಾರಣವಾಯಿತು. ಇವರಿಂದ ಕಾಫಿ ಪುಡಿ ಖರೀದಿಸಿ ಅನೇಕರು ನಗರದ ವಿವಿಧೆಡೆಗಳಲ್ಲಿ ಕಾಫಿ ಮಾರಾಟ ಕೇಂದ್ರವನ್ನು ತೆರೆದರು. ಕನ್ನಡದ ಜನಪ್ರಿಯ ಸಾಹಿತಿಗಳಾದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಮತ್ತು ಡಿ.ವಿ. ಗುಂಡಪ್ಪ ತಮ್ಮ ಸಾಹಿತ್ಯ ರಚನೆಗಳಲ್ಲಿ ಸಾಕಮ್ಮ ಅವರ ಕಾಫಿ ಬಗ್ಗೆ ಉಲ್ಲೇಖಿಸಿರುವುದು ವಿಶೇಷ.

ಕಾಫಿ ಬೆಳೆಯುವ ಪ್ರದೇಶಗಳು: ರಾಜ್ಯದಲ್ಲಿ ಅರೇಬಿಕಾ ಮತ್ತು ರೋಬೊಸ್ಟಾ ತಳಿಯ ಕಾಫಿಯನ್ನು ಚಿಕ್ಕಮಗಳೂರು, ಕೊಡಗು, ಹಾಸನ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳೆಯಲಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ 85,465 ಹೆಕ್ಟೇರ್ ಪ್ರದೇಶದಲ್ಲಿ ಕಾಫಿ ಬೆಳೆಯಲಾಗುತ್ತಿದ್ದು, 15 ಸಾವಿರ ಕಾಫಿ ಬೆಳೆಗಾರರಿದ್ದಾರೆ. ಈ ಪೈಕಿ ಶೇ.96ರಷ್ಟು ಸಣ್ಣ ಬೆಳೆಗಾರರು.

ದಿನಚರಿಯ ಅವಿಭಾಜ್ಯ ಅಂಗ: ಉಲ್ಲಾಸ ತುಂಬುವ ಪೇಯವಾಗಿ. ದಿನಚರಿಯ ಅವಿಭಾಜ್ಯ ಅಂಗವಾಗಿರುವ ಕಾಫಿಗೆ ಕನ್ನಡದ ಪೂಜಾರಿ ಹಿರೇಮಗಳೂರು ಕಣ್ಣನ್ ಕವಿತೆಯ ಮೂಲಕ ಗೌರವ ಸಲ್ಲಿಸಿದ್ದಾರೆ. ಕಾಫಿ ದೇವನೆ ದೇಹ ಪಾಲನೆ ತೇ ನಮೋಸ್ತು ನಮೋಸ್ತು ತೆ ನೀನು ಬಾರದೆ ಬೆಳಗು ಜಾರದೆ/ ತೇ ನಮೋಸ್ತು ನಮೋಸ್ತು ತೆ...

ಗಣರಾಜ್ಯೋತ್ಸವದ ಕಾಫಿ ಸ್ತಬ್ಧಚಿತ್ರ: ರಾಜಧಾನಿ ನವದೆಹಲಿಯಲ್ಲಿ ಗಣರಾಜ್ಯೋತ್ಸವದ ಪರೇಡ್​ನ ಟ್ಯಾಬ್ಲೋಗಳಲ್ಲಿ ಕೊಡಗಿನ ಕಾಫಿಯ ಸ್ತಬ್ಧಚಿತ್ರ (2016) ಗಮನ ಸೆಳೆಯಿತು. ಕಾಫಿ ಬೀಜ ಸಂಸ್ಕರಣೆಗೊಂಡು ಕಾಫಿ ಪುಡಿಯಾಗಿ ನಂತರ ಸ್ವಾದಿಷ್ಟ ಕಾಫಿಯಾಗಿ ಕಪ್​ಗೆ ಬರುವ ವಿವಿಧ ಹಂತಗಳನ್ನು ಈ ಟ್ಯಾಬ್ಲೋದಲ್ಲಿ ತೋರಿಸಲಾಯಿತು.