ನ್ಯೂಸ್

ಪಾಕಿಸ್ತಾನದ ಮಸೀದಿಯಲ್ಲಿ ಬಾಂಬ್ ಸ್ಫೋಟ ಪ್ರಕರಣ; ಬಲಿಯಾದವರ ಸಂಖ್ಯೆ 90ಕ್ಕೆ ಏರಿಕೆ

ಕರಾಚಿ: ಪೇಶಾವರದ ಮಸೀದಿಯೊಂದರಲ್ಲಿ ನಿನ್ನೆ ಮಧ್ಯಾಹ್ನ 1.40ರ ಹೊತ್ತಿಗೆ ಬಾಂಬ್​ ಸ್ಫೋಟಗೊಂಡಿತ್ತು. ಪ್ರಾಥಮಿಕ ಮಾಹಿತಿಯ ಪ್ರಕಾರ 28 ಜನರು ಸಾವನ್ನಪ್ಪಿದ್ದು, 150ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿತ್ತು. ಇದೀಗ ಬಾಂಬ್​ ಸ್ಫೋಟದಲ್ಲಿ ಸಾವಿನ ಸಂಖ್ಯೆ 90ಕ್ಕೆ ಏರಿಕೆಯಾಗಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಬಾಂಬ್ ದಾಳಿ ನಡೆಸಿದ ಶಂಕಿತ ಆತ್ಮಾಹುತಿ ದಾಳಿ ಮಾಡಿದ್ದಾನೆ ಎಂದು ಘಟನೆಯ ಬಗ್ಗೆ ಪಾಕಿಸ್ತಾನದ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದವು. ಬಾಂಬ್ ಸ್ಫೋಟಗೊಂಡಾದ ಮಸೀದಿಯ ಒಳಗೆ ಸುಮಾರು 400 ಜನರು ಹಾಜರಿದ್ದರು. ಸದ್ಯ ಮೃತಪಟ್ಟಿರುವ 90 ಜನರಲ್ಲಿ 27 ಪೊಲೀಸ್ ಅಧಿಕಾರಿಗಳು ಸೇರಿದ್ದಾರೆ.

ಭಾರಿ ಭದ್ರತೆಯ ನಡುವೆ ಸೋಮವಾರ ಮಧ್ಯಾಹ್ನದ ಪ್ರಾರ್ಥನೆಗಾಗಿ ಜನರು ಮಸೀದಿಯಲ್ಲಿ ಸೇರಿದ್ದರು. ಈ ವೇಳೆ ಪಾಕ್ ತಾಲಿಬಾನ್ ಉಗ್ರ ಆತ್ಮಾಹುತಿ ದಾಳಿ ನಡೆಸಿದ್ದಾನೆ. ಸ್ಫೋಟದಲ್ಲಿ ಪೊಲೀಸರು, ಭದ್ರತಾ ಸಿಬ್ಬಂದಿ, ಆರೋಗ್ಯ ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿ ಗಾಯಗೊಂಡು ಸಾವನ್ನಪ್ಪಿದ್ದಾರೆ.

ತೆಹ್ರಿಕ್-ಎ-ಎತಾಲಿಬಾನ್ ಪಾಕಿಸ್ತಾನ್ ಕಮಾಂಡರ್ ಉಮರ್ ಖಾಲಿದ್ ಖುರಾಸಾನಿಯಯ ಹತ್ಯೆಗೆ ಪ್ರತೀಕಾರವಾಗಿ ಈ ದಾಳಿ ನಡೆಸಲಾಗಿದೆ ಎಂದು ಖಾಲಿದ್​ನ ಸೋದರನೊಬ್ಬ ಹೇಳಿದ್ದಾನೆ. ಕಳೆದ ವರ್ಷ ಆಗಸ್ಟ್​​ನಲ್ಲಿ ಅಫ್ಘಾನಿಸ್ತಾನದಲ್ಲಿ ನಡೆದ ಸ್ಫೋಟದಲ್ಲಿ ಖಾಲಿದ್ ಮೃತಪಟ್ಟಿದ್ದ. (ಏಜೆನ್ಸೀಸ್)