ಒಂದು ದೇಶ-ಒಂದು ಚುನಾವಣೆಗೆ ಸಂಬಂಧಿಸಿದಂತೆ ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ ನೇತೃತ್ವದ ಉನ್ನತ ಮಟ್ಟದ ಸಮಿತಿಯು ಗುರುವಾರ ರಾಷ್ಟ್ರಪತಿ ದ್ರೌಪದಿ ಮುಮು ಅವರಿಗೆ 18,626 ಪುಟಗಳ ವಿಸõತ ವರದಿಯನ್ನು ಸಲ್ಲಿಸಿದೆ. ಮೊದಲ ಹಂತದಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ನಡೆಸಬೇಕು. ಅದಾದ 100 ದಿನಗಳಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಬೇಕು. ಹಲವು ಸಾಂವಿಧಾನಿಕ ತಿದ್ದುಪಡಿ ಮಾಡಬೇಕು ಎಂದು ಶಿಫಾರಸು ಮಾಡಿರುವ ಸಮಿತಿ, ಲೋಕಸಭೆ, ವಿಧಾನಸಭೆ, ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಒಂದೇ ಮತದಾರ ಪಟ್ಟಿ ಇರಬೇಕು ಎಂದೂ ಶಿಫಾರಸು ಮಾಡಿದೆ. 2023ರ ಸೆಪ್ಟೆಂಬರ್ 2ರಂದು ರಚಿಸಲಾದ ಸಮಿತಿಯು ಸಂಬಂಧಪಟ್ಟವರು, ತಜ್ಞರ ಜತೆ ಚರ್ಚೆ ನಡೆಸಿ 191 ದಿನಗಳಲ್ಲಿ ವರದಿ ಸಲ್ಲಿಸಿದೆ. ಏಕಕಾಲದಲ್ಲಿ ಚುನಾವಣೆ ನಡೆಸುವ ಬಗ್ಗೆ 62 ರಾಜಕೀಯ ಪಕ್ಷಗಳ ಬಳಿ ಅಭಿಪ್ರಾಯ ಕೇಳಲಾಗಿತ್ತಾದರೂ, ಈ ಪೈಕಿ 47 ಪಕ್ಷಗಳು ಪ್ರತಿಕ್ರಿಯಿಸಿವೆ. 32 ಪಕ್ಷಗಳು ಒಂದು ದೇಶ ಒಂದು ಚುನಾವಣೆಯ ಪರವಾಗಿ ಅಭಿಪ್ರಾಯ ತಿಳಿಸಿದ್ದರೆ, 15 ಪಕ್ಷಗಳು ವಿರೋಧ ವ್ಯಕ್ತಪಡಿಸಿವೆ. 15 ಪಕ್ಷಗಳು ಯಾವುದೇ ಅಭಿಪ್ರಾಯ ತಿಳಿಸಿಲ್ಲ. ಆದರೆ, ಒಂದು ದೇಶ-ಒಂದು ಚುನಾವಣೆ ನೀತಿಯ ಅನುಷ್ಠಾನ ಆರಂಭದಲ್ಲಿ ಸ್ವಲ್ಪ ಕಷ್ಟ ಎನಿಸಿದರೂ ಮುಂದೆ ಇದು ವ್ಯವಸ್ಥೆ ಸುಧಾರಣೆಯ ದೊಡ್ಡ ಮಾದರಿಯಾಗಲಿದೆ ಎಂಬ ವಿಶ್ವಾಸ ನೀತಿ ಆಯೋಗದ್ದು.
ಅಷ್ಟಕ್ಕೂ, ಒಂದು ದೇಶ-ಒಂದು ಚುನಾವಣೆಯ ಚಿಂತನೆ ಹೊಸದೇನಲ್ಲ. ಏಕೆಂದರೆ, ಭಾರತದಲ್ಲಿ ಮೊದಲಿಗೆ ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆ ಚುನಾವಣೆಗಳು ಒಟ್ಟಿಗೇ ನಡೆಯುತ್ತಿದ್ದವು. 1952, 1957, 1962, 1967ರಲ್ಲಿ ಒಟ್ಟಿಗೇ ಚುನಾವಣೆ ನಡೆದಿದ್ದವು. ಆಗ, ಮತದಾರನಿಗೆ ಎರಡು ಮತಪತ್ರಗಳನ್ನು ನೀಡಲಾಗುತ್ತಿತ್ತು. ಒಂದು ಲೋಕಸಭೆಗಾಗಿ, ಇನ್ನೊಂದು ವಿಧಾನಸಭೆಗಾಗಿ. 1968-69ರಲ್ಲಿ ಹಲವು ರಾಜ್ಯಗಳ ವಿಧಾನಸಭೆಗಳು ಮತ್ತು 1970ರಲ್ಲಿ ಅವಧಿಪೂರ್ವವೇ ಲೋಕಸಭೆ ವಿಸರ್ಜನೆಗೊಂಡಿದ್ದರ ಪರಿಣಾಮ, ಮುಂದೆ ಏಕಕಾಲಕ್ಕೆ ಚುನಾವಣೆ ನಡೆಸುವ ಪದ್ಧತಿ ನಿಂತುಹೋಯಿತು. ಕಳೆದ ಹಲವು ವರ್ಷಗಳಿಂದ ಚುನಾವಣೆ ನಡೆಸಲು ಏರುತ್ತಿರುವ ವೆಚ್ಚ, ಮಾನವ ಸಂಪನ್ಮೂಲದ ಬಳಕೆ, ಬಿಗಿಯಾದ ನೀತಿಸಂಹಿತೆಯಿಂದ ಅಭಿವೃದ್ಧಿ ಕಾರ್ಯಗಳಿಗೆ ಬೀಳುವ ಪೆಟ್ಟು- ಇದೆಲ್ಲವನ್ನು ಗಮನಿಸಿಯೇ ಏಕಕಾಲಕ್ಕೆ ಚುನಾವಣೆ ನಡೆಸಬೇಕು ಎಂಬ ಆಶಯ ಈಗಿನ ಕೇಂದ್ರ ಸರ್ಕಾರದ್ದು. 1983ರಲ್ಲಿ ಚುನಾವಣಾ ಆಯೋಗ ದೇಶದಲ್ಲಿ ಏಕಕಾಲದಲ್ಲಿ ಚುನಾವಣೆ ನಡೆಸಲು ಮನವಿ ಸಲ್ಲಿಸಿತ್ತಾದರೂ, ಆಗಿನ ಸರ್ಕಾರ ಅದಕ್ಕೆ ಸ್ಪಂದಿಸಲಿಲ್ಲ. ಆ ಬಳಿಕ, 1999ರಲ್ಲಿ ಕಾನೂನು ಆಯೋಗ ದೇಶದಲ್ಲಿ ಏಕಕಾಲಕ್ಕೆ ಚುನಾವಣೆ ನಡೆಸುವ ಬಗ್ಗೆ ತನ್ನ ವರದಿಯಲ್ಲಿ ಪ್ರಸ್ತಾಪಿಸಿತು.
ದೇಶದಲ್ಲಿ ಏಕಕಾಲಕ್ಕೆ ಚುನಾವಣೆಗಳು ನಡೆಯುವಂತಾದರೆ, ವೆಚ್ಚದ ನಿಯಂತ್ರಣ ಮಾತ್ರವಲ್ಲ, ಆಡಳಿತ ಸುಧಾರಣೆ ನಿಟ್ಟಿನಲ್ಲಿ ದೊಡ್ಡ ಮೈಲಿಗಲ್ಲನ್ನು ಸಾಧಿಸಿದಂತೆ ಎಂಬ ಅಭಿಪ್ರಾಯ ತಜ್ಞರದ್ದು. ಆದರೆ, ಯಾವುದೇ ಲೋಪದೋಷಗಳು ಇಲ್ಲದಂತೆ, ನ್ಯೂನತೆಗಳು ಕಾಣಿಸಿಕೊಳ್ಳದಂತೆ ಜಾರಿಗೆ ತರುವುದು ಅಗತ್ಯ. ಈ ನಿಟ್ಟಿನಲ್ಲಿ ಸಾಕಷ್ಟು ಸಿದ್ಧತೆಯನ್ನು ಮಾಡಿಕೊಂಡೇ ಅಂತಿಮ ನಿರ್ಧಾರಕ್ಕೆ ಬರುವುದು ಸೂಕ್ತ.