ಕಾರವಾರ: ಆರು ತಿಂಗಳಿಂದ ವಿದ್ಯುತ್ ಇಲ್ಲ, ಸಂಜೆಯಾಗುತ್ತಿದ್ದಂತೆ ಕಾರ್ಗತ್ತಲಲ್ಲಿ ಮುಳುಗುವ ಈ ಗ್ರಾಮದಲ್ಲಿ ಜನರ ಜೀವಕ್ಕೂ ಖಾತ್ರಿಯಿಲ್ಲ, ಅಕ್ಕಿ, ಬೇಳೆ ಬೇಕೆಂದರೆ 8 ಕಿ.ಮೀ ದೂರದಲ್ಲಿರುವ ಸ್ಥಳೀಯ ಗ್ರಾಮ ಪಂಚಾಯಿತಿಗೆ ಬೆಟ್ಟ, ಗುಡ್ಡದ ದಾರಿಯಲ್ಲಿ ನಡೆದುಹೋಗಬೇಕು. ಇದು ಕಾರವಾರ ತಾಲೂಕಿನ ಗೋಟೆಗಾಳಿ ಗ್ರಾಪಂ ವ್ಯಾಪ್ತಿಯ ಕಮರಗಾಂವ ಎಂಬ ಕುಗ್ರಾಮದ ಕತೆ, ವ್ಯಥೆ! ಗ್ರಾಮದ ಸುಮಾರು 6 ಕಿಮೀ ಕಡಿದಾದ ಕಾಡಿನ ಹಾದಿಯಲ್ಲಿ ವಿದ್ಯುತ್ ಲೈನ್ ಹಾಕಲಾಗಿದೆ. ಈ ವರ್ಷ ಸುರಿದ ಭಾರಿ ಗಾಳಿ, ಮಳೆಗೆ ಜೂನ್ನಲ್ಲೇ 15 ಕ್ಕೂ ಹೆಚ್ಚು ಕಂಬಗಳು ಬಿದ್ದು, ಒಂದು ಟ್ರಾನ್ಸ್ಫಾರ್ಮರ್ ಹಾಳಾಗಿತ್ತು. ಆದರೆ ಇವು ಇನ್ನೂ ದುರಸ್ತಿ ಆಗಿಲ್ಲ.
ಸೀಮೆಎಣ್ಣೆಯೂ ಸಿಗದು!: ಕಮರಗಾಂವದವರು ಪಡಿತರಕ್ಕೆ ಕಚ್ಚಾ ರಸ್ತೆಯಲ್ಲಿ 8 ಕಿಮೀ ನಡೆದು ಬರಬೇಕು. ಆದರೆ ಇದು ಕಷ್ಟವಾದ್ದರಿಂದ ಗ್ರಾಮಸ್ಥರು ಬಾಡಿಗೆ ವಾಹನ ಮಾಡಿಕೊಂಡು ಗೋವಾ ಮಾರ್ಗದ ಮೂಲಕ 35 ಕಿಮೀ ಪ್ರಯಾಣಿಸಿ ಗ್ರಾಪಂ ಕೇಂದ್ರಕ್ಕೆ ಬಂದು ಪಡಿತರ ಸಾಮಗ್ರಿ ಒಯ್ಯುತ್ತಾರೆ. ಈ ಹಿಂದೆ ಸೀಮೆ ಎಣ್ಣೆಯನ್ನು ಪಡಿತರದ ಜತೆ ನೀಡುತ್ತಿದ್ದರು. ಆದರೀಗ ಅದೂ ಇಲ್ಲ. ಹೀಗಾಗಿ ಕತ್ತಲಾಗುವ ಮುಂಚೆಯೇ ಊಟ ಮಾಡಿ ಮಲಗುವ ಪರಿಸ್ಥಿತಿ ಇದೆ ಎನ್ನುತ್ತಾರೆ ಗ್ರಾಮಸ್ಥರು. ಕುಣಬಿ ಜನಾಂಗದವರಿರುವ ಈ ಊರಲ್ಲಿ 35 ಮನೆಗಳಿದ್ದು, 125 ಮತದಾರರಿದ್ದಾರೆ. ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಇದ್ದರೂ ಅದು ಬಂದ್ ಆಗಿ ಕೆಲವು ವರ್ಷ ಕಳೆದಿವೆ. ಚುನಾವಣೆ ನಡೆದಾಗಲಷ್ಟೇ ನಾವು ಕರ್ನಾಟಕದವರೆಂಬುದು ಸರ್ಕಾರಕ್ಕೆ ನೆನಪಾಗುತ್ತದೆ. ಇಲ್ಲದೇ ಇದ್ದರೆ, ನಮಗೆ ಸರ್ಕಾರದಿಂದ ಮೂಲ ಸೌಲಭ್ಯ ಸಿಗದು ಎಂಬುದು ಗ್ರಾಮಸ್ಥರ ಗೋಳು. ಗ್ರಾಮಕ್ಕೆ ಶೀಘ್ರ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಗ್ರಾಪಂ ಅಧ್ಯಕ್ಷೆ ವರ್ಷಾ ವಿಜಯ ಪಡುವಳಕರ್, ಉಪಾಧ್ಯಕ್ಷ ಪ್ರಶಾಂತ ಗಾಂವಕರ್, ಸುಭಾಷ ಗುನಗಿ, ಸಂಜಯ ಸಾಳುಂಕೆ, ಇತರರು ಅಪರ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ.
ಸರ್ಕಾರ ಉಚಿತ ವಿದ್ಯುತ್ ಸಂಪರ್ಕ ಕೊಡುವುದಾಗಿ ಹೇಳುತ್ತದೆ. ಆದರೆ, ಮಳೆಯಿಂದ ಕಡಿತವಾಗಿರುವ ವಿದ್ಯುತ್ ಸಂಪರ್ಕ ಕಲ್ಪಿಸಲು ಹೆಸ್ಕಾಂ ಬಳಿ ಹಣವಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.
| ಅನಿಲ ನಾರಾಯಣ ಗ್ರಾಪಂ ಸದಸ್ಯ
ರಸ್ತೆ ಸಮರ್ಪಕವಾಗಿಲ್ಲದ ಕಾರಣ ಕಮರಗಾಂವ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲು ಸಾಧ್ಯವಾಗಿಲ್ಲ. ಕಂಬಗಳನ್ನು ಎಳೆದುಕೊಂಡು ಹೋದರೆ ಮುರಿದು ಹೋಗುತ್ತದೆ. ಏನಾದರೂ ಪ್ರಯತ್ನ ಮಾಡುವಂತೆ ಗುತ್ತಿಗೆದಾರರಿಗೆ ತಿಳಿಸಿದ್ದೇವೆ. ಒಂದೆರಡು ವಾರದಲ್ಲಿ ಪುನಃ ವಿದ್ಯುತ್ ಸಂಪರ್ಕ ಕಲ್ಪಿಸಲು ಪ್ರಯತ್ನ ಮಾಡುತ್ತೇವೆ.
| ರೋಶನಿ ಪೆಡ್ನೇಕರ್, ಹೆಸ್ಕಾಂ ಇಇ