ರಷ್ಯಾ-ಯೂಕ್ರೇನ್, ಇಸ್ರೇಲ್-ಹಮಾಸ್ ಸೇರಿದಂತೆ ಜಗತ್ತಿನ ಹಲವು ದೇಶಗಳು ಈ ವರ್ಷವೂ ಯುದ್ಧದಲ್ಲಿ ನಿರತವಾಗಿದ್ದರಿಂದ, ಅದರ ವ್ಯತಿರಿಕ್ತ ಪರಿಣಾಮ ಇತರ ರಾಷ್ಟ್ರಗಳ ಆರ್ಥಿಕತೆಯ ಮೇಲೂ ಆಯಿತು. ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆದು, ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಎದುರಾಳಿ ಕಮಲಾ ಹ್ಯಾರಿಸ್ರನ್ನು ಪರಾಭವಗೊಳಿಸಿದರು. ಪಾಕಿಸ್ತಾನ, ಬ್ರಿಟನ್ನಲ್ಲೂ ಆಡಳಿತ ಬದಲಾಯಿತು. ಹೀಗೆ ಜಗದಗಲ ಬದಲಾವಣೆಯ ಗಾಳಿ ಬೀಸಿದರೂ, ಹಿಂಸಾಚಾರ, ಸಾವು-ನೋವು ಬಿಟ್ಟೂಬಿಡದೆ ಕಾಡಿದ್ದು ಮಾತ್ರ ಕಳವಳಕಾರಿ.
ರವೀಂದ್ರ ಎಸ್. ದೇಶಮುಖ್ ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧ ಇನ್ನೂ ಮುಗಿದಿಲ್ಲ. ಹಮಾಸ್ 7 ಸಾವಿರ ಕ್ಷಿಪಣಿಗಳ ಮೂಲಕ ದಾಳಿಯೆಸಗಿ, ಗಡಿಯೊಳಗೂ ನುಗ್ಗಿ 1,200 ನಾಗರಿಕರನ್ನು ಕೊಂದು, 250 ಜನರನ್ನು ಬಂಧಿಗಳಾಗಿ ಗಾಝಾದೊಳಕ್ಕೆ ಎಳೆದುಕೊಂಡು ಹೋದ ಘಟನೆ ಯುದ್ಧಕ್ಕೆ ನಾಂದಿಯಾಯಿತು. ಇಸ್ರೇಲ್ ತೆಗೆದುಕೊಂಡ ಪ್ರತೀಕಾರದಿಂದ ಕಳೆದೊಂದು ವರ್ಷದಲ್ಲಿ ಗಾಝಾ ಸರಿಸುಮಾರು ಸ್ಮಶಾನಸದೃಶವಾಗಿದೆ. ಅಲ್ಲಿನ 42,000 ನಾಗರಿಕರು ಹತರಾಗಿದ್ದಾರೆ, 67% ಕಟ್ಟಡಗಳು ಪೂರ್ಣವಾಗಿ ನೆಲಸಮವಾಗಿವೆ. 17 ಸಾವಿರ ಹಮಾಸ್ ಉಗ್ರರನ್ನು ಇಸ್ರೇಲ್ ಹೊಡೆದುರುಳಿಸಿದೆ. ಅವರಲ್ಲಿ ಹಮಾಸ್ ನಾಯಕ ಇಸ್ಮಾಯಿಲ್ ಹಾನಿಯೇ ಸೇರಿದಂತೆ ಇಪ್ಪತ್ತೊಂದು ಮುಖ್ಯ ನಾಯಕರೂ ಸೇರಿದ್ದಾರೆ. ಇಷ್ಟಾದರೂ, ಹಮಾಸ್ ಪೂರ್ಣವಾಗಿ ನೆಲಕಚ್ಚಿಲ್ಲ. ಈ ನಡುವೆ, ‘ಹಮಾಸ್ ಸರ್ವನಾಶವಾಗುವವರೆಗೆ ಯುದ್ಧವನ್ನು ನಿಲ್ಲಿಸುವುದಿಲ್ಲ. ಶಾಂತಿ ಸ್ಥಾಪನೆಯಾಗಬೇಕಾದರೆ ಹಮಾಸ್ ಸಂಪೂರ್ಣ ನಾಶವಾಗಬೇಕು’ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.
ಹಿಜ್ಬುಲ್ಲಾ ವಿರುದ್ಧ ಪ್ರಹಾರ: ಹಿಜ್ಬುಲ್ಲಾ ಸಂಘಟನೆ ವಿರುದ್ಧವೂ ಇಸ್ರೇಲ್ ನಿರ್ಣಾಯಕ ಸಮರ ಕೈಗೊಂಡಿದ್ದು ಈ ವರ್ಷದ ಮಹತ್ವದ ಬೆಳವಣಿಗೆ. ಹಿಜ್ಬುಲ್ಲಾದ ಮುಖ್ಯ ಕೇಂದ್ರಗಳು ಮತ್ತು ಶಸ್ತ್ರಸಂಗ್ರಹಗಳನ್ನು ನಾಶಗೊಳಿಸಿದ್ದಲ್ಲದೆ, ಮೂರು ದಶಕಗಳಿಂದಲೂ ಅದರ ಮೇರುನಾಯಕನಾಗಿದ್ದ ಸೈಯದ್ ಇಸ್ಮಾಯಿಲ್ ನಸರುಲ್ಲಾನನ್ನು ಇಸ್ರೇಲಿ ಸೇನೆ ಸಂಹರಿಸಿತು. ಹಿಜ್ಬುಲ್ಲಾ ನಾಯಕತ್ವ ವಹಿಸಿಕೊಂಡ ಹಾಶಿಮ್ ಸಫೆದ್ದೀನ್ ಸಹ ಕೆಲವೇ ದಿನಗಳಲ್ಲಿ ಐಡಿಎಫ್ ದಾಳಿಗೆ ಬಲಿಯಾದ.
ಇರಾನ್-ಇಸ್ರೇಲ್ ಸಮರ: ಇಸ್ರೇಲ್ ಮೇಲೆ 2024ರ ಅಕ್ಟೋಬರ್ 1ರಂದು ಇರಾನ್ 181 ಕ್ಷಿಪಣಿಗಳಿಂದ ದಾಳಿ ನಡೆಸಿತು. ಇರಾನ್ನ ಈ ಕೃತ್ಯ ಇಸ್ರೇಲ್ ಅನ್ನು ಇನ್ನಷ್ಟು ಕೆರಳಿಸಿದ್ದು, ಪ್ರತೀಕಾರಕ್ಕಾಗಿ ಕಾಯುತ್ತಿದೆ.
ಸಿರಿಯಾದಲ್ಲಿ ಜನತಾ ದಂಗೆ: ಸಿರಿಯಾ ಅಧ್ಯಕ್ಷರಾಗಿದ್ದ ಬಶರ್ ಅಲ್ ಅಸಾದ್ ಜನತಾ ದಂಗೆಯ ಪರಿಣಾಮ ಅಧಿಕಾರ ಕಳೆದುಕೊಂಡಿದ್ದು ಮಾತ್ರವಲ್ಲ, ದೇಶ ಬಿಟ್ಟು ಪಲಾಯನ ಮಾಡಿದ್ದಾರೆ. ಪ್ರತಿಭಟನಾಕಾರರನ್ನು ಬಶರ್ ಅಲ್ ಸರ್ಕಾರದ ಸೇನಾ ಮುಖಂಡರು ನಿರ್ದಯವಾಗಿ ಹತ್ತಿಕ್ಕಲು ಯತ್ನಿಸುತ್ತಿದ್ದಂತೆ, ಜನರಲ್ಲಿನ ಆಕ್ರೋಶ ಇನ್ನಷ್ಟು ತೀವ್ರಗೊಂಡಿತು. ನಾಗರಿಕ ಯುದ್ಧ ಸ್ಪೋಟಗೊಂಡು ಕೊನೆಗೂ ಬಶರ್ ಅಧಿಕಾರ ತ್ಯಜಿಸಬೇಕಾಯಿತು. ಆದರೆ, ಈಗ ಸಿರಿಯಾದಲ್ಲಿ ಮೂಲಭೂತವಾದಿ ಸಂಘಟನೆಗಳ ಕೈಮೇಲಾಗುವ ಆತಂಕ ತಲೆದೋರಿದೆ.
ರಷ್ಯಾ-ಯೂಕ್ರೇನ್ ಯುದ್ಧ: ರಷ್ಯಾ ಮತ್ತು ಯೂಕ್ರೇನ್ ನಡುವಿನ ಸಮರ ಮೂರನೇ ವರ್ಷವೂ ಮುಂದುವರಿದಿದ್ದು, ಇದರಲ್ಲಿ ಸಾವಿರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಲಕ್ಷಾಂತರ ಜನರ ಆಸ್ತಿಪಾಸ್ತಿಗೆ ಹಾನಿಯಾಗಿದೆ. ಸಮರದ ಪರಿಣಾಮ, 25 ಲಕ್ಷಕ್ಕೂ ಅಧಿಕ ಜನರು ಯೂಕ್ರೇನ್ ತೊರೆದು, ಆಶ್ರಯ ಕೋರಿ ವಿವಿಧ ದೇಶಗಳಿಗೆ ಹೋಗಿದ್ದಾರೆ. ರಷ್ಯಾದ ಸಾವಿರಾರು ಜನರು ಯುದ್ಧವನ್ನು ಪ್ರತಿಭಟಿಸಿ ಮತ್ತು ಯುದ್ಧವನ್ನು ಕೂಡಲೇ ನಿಲ್ಲಿಸುವಂತೆ ಆಗ್ರಹಿಸಿ ಹೋರಾಟ ನಡೆಸಿದ್ದಾರೆ.ಜಾಗತಿಕ ಒತ್ತಡ, ಹಲವು ರಾಷ್ಟ್ರಗಳ ಒತ್ತಾಯದ ನಂತರವೂ ಯುದ್ಧ ಕೊನೆಗೊಳಿಸಲು ಎರಡೂ ರಾಷ್ಟ್ರಗಳು ತಯಾರಿಲ್ಲ. ಈ ಮಧ್ಯೆ, ಉದ್ಯೋಗ ಕೊಡಿಸುವ ನೆಪದಲ್ಲಿ ಕೆಲ ದುಷ್ಟ ಜಾಲಗಳು ಭಾರತೀಯ ಯುವಕರನ್ನು ಮೋಸಗೊಳಿಸಿ, ರಷ್ಯಾ ಸೇನೆಗೆ ಸೇರಿಸಿದ್ದು ಕಳವಳಕ್ಕೆ ಕಾರಣವಾಯಿತು. ಪ್ರಧಾನಿ ನರೇಂದ್ರ ಮೋದಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರೊಂದಿಗಿನ ಮಾತುಕತೆ ವೇಳೆ ಈ ವಿಷಯ ಪ್ರಸ್ತಾಪಿಸಿದ ಬಳಿಕ, ರಷ್ಯಾ ಸೇನೆಗೆ ಸೇರಿಸಲಾಗಿದ್ದ ಹಲವು ಭಾರತೀಯ ಯುವಕರನ್ನು ತಾಯ್ನಾಡಿಗೆ ಕರೆ ತರಲಾಯಿತು.
ಪಾಕ್ನಲ್ಲಿ ಹೊಸ ಸರ್ಕಾರ: ಈ ವರ್ಷದ ಫೆಬ್ರವರಿಯಲ್ಲಿ ಪಾಕಿಸ್ತಾನ ಸಂಸತ್ಗೆ ಚುನಾವಣೆ ನಡೆದರೂ, ಯಾವ ಪಕ್ಷಕ್ಕೂ ಬಹುಮತ ಬಾರದೆ ಒಂದಿಷ್ಟು ಸಮಯ ರಾಜಕೀಯ ಅಸ್ಥಿರತೆ ಮುಂದುವರಿದಿತ್ತು. ಮಾಜಿ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್ ಇ-ಇನ್ಸಾಫ್ (ಪಿಟಿಐ) ಪಕ್ಷವನ್ನು ಚುನಾವಣೆ ಸ್ಪರ್ಧೆಗೆ ನಿರ್ಬಂಧಿಸಿದ್ದು, ಹಿಂಸಾಚಾರಕ್ಕೆ ಕಾರಣವಾಯಿತು. ಮಾಜಿ ಪ್ರಧಾನಿ ನವಾಜ್ ಷರೀಫ್ ಸೋದರ ಶಹಬಾಜ್ ಷರೀಫ್ ಮಾರ್ಚ್ನಲ್ಲಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು. ಈ ಮೂಲಕ ಪಾಕಿಸ್ತಾನ್ ಮುಸ್ಲಿಂ ಲೀಗ್ (ಎನ್) ಅಧಿಕಾರ ಗದ್ದುಗೆ ಹಿಡಿಯಿತು. ಆದರೆ, ಆಂತರಿಕ ಸಮಸ್ಯೆಗಳಿಂದ ಹೈರಾಣಾಗಿರುವ ಪಾಕಿಸ್ತಾನ ಪ್ರಸ್ತುತ ತಾಲಿಬಾನ್ ಉಪಟಳದ ವಿರುದ್ಧ ಹೋರಾಡುತ್ತಿದೆ. ಇದರ ಭಾಗವಾಗಿ ಅಪ್ಘಾನಿಸ್ತಾನದ ಮೇಲೆ ವೈಮಾನಿಕ ದಾಳಿಯನ್ನೂ ನಡೆಸಿತು. ಮತ್ತೊಂದೆಡೆ, ಬೆಲೆಯೇರಿಕೆ, ಆರ್ಥಿಕ ಸಂಕಷ್ಟ ಇನ್ನಿಲ್ಲದಂತೆ ಕಾಡುತ್ತಿದೆ. ಶಹಬಾಜ್ ಷರೀಫ್ ಭಾರತದೊಂದಿಗಿನ ಸಂಬಂಧ ಸುಧಾರಣೆಗೆ ಅಷ್ಟೇನು ಆಸಕ್ತಿ ತೋರದ ಕಾರಣ, ಭಾರತವೂ ಪಾಕ್ನೊಂದಿಗಿನ ರಾಜತಾಂತ್ರಿಕ ಸಂಬಂಧವನ್ನು ಯಥಾಸ್ಥಿತಿಯಲ್ಲಿ ಇರಿಸಿದೆ.
ಶ್ವೇತಭವನಕ್ಕೆ ಮತ್ತೆ ಟ್ರಂಪ್: ಜಗತ್ತಿನ ಬಲಿಷ್ಠ ಆರ್ಥಿಕ ಮತ್ತು ಸೇನಾ ಶಕ್ತಿ ಅಮೆರಿಕದ ನಲವತ್ತೇಳನೆಯ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಆಯ್ಕೆಯಾಗಿದ್ದು, (ನ.6), 2025ರ ಜನವರಿ 20ರಂದು ಮತ್ತೊಂದು ಅವಧಿಗೆ ಶ್ವೇತಭವನ ಪ್ರವೇಶಿಸಲಿದ್ದಾರೆ. ಈ ಬಾರಿಯ ಅಮೆರಿಕ ಅಧ್ಯಕ್ಷೀಯ ಚುನಾವಣೆ ಭಾರಿ ಕುತೂಹಲ ಮೂಡಿಸುವ ಜತೆಗೆ, ಜಿದ್ದಾಜಿದ್ದಿ ಸೃಷ್ಟಿಸಿತ್ತು. ಚುನಾವಣೆಗೆ ಮೂರು ತಿಂಗಳಿರುವಾಗ ಜೋ ಬೈಡೆನ್ ಕಣದಿಂದ ಹಿಂದೆ ಸರಿದ ಪರಿಣಾಮ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಡೆಮಾಕ್ರಟಿಕ್ ಪಕ್ಷದಿಂದ ಅಧ್ಯಕ್ಷೀಯ ಅಭ್ಯರ್ಥಿಯಾದರು. ಅಮೆರಿಕ ಮೊದಲ ಮಹಿಳಾ ಅಧ್ಯಕ್ಷರನ್ನು ಹೊಂದಲಿದೆಯೇ ಎಂಬ ಚರ್ಚೆ ನಡುವೆಯೇ ಟ್ರಂಪ್ ಜಯಭೇರಿ ಬಾರಿಸಿದರು. 2017-21ರ ಮೊದಲ ಅಧ್ಯಕ್ಷಾವಧಿಯಲ್ಲಿ ಟ್ರಂಪ್ ಚೀನಾ ಮತ್ತು ಪಾಕಿಸ್ತಾನಗಳೆರಡನ್ನೂ ದೂರವಿಟ್ಟು ಭಾರತದೊಂದಿಗಿನ ಸಂಬಂಧಗಳನ್ನು ಘನಿಷ್ಟಗೊಳಿಸಿಕೊಳ್ಳುವುದಕ್ಕೆ ಮಹತ್ವ ನೀಡಿದ್ದರು. ಈ ಅವಧಿಯಲ್ಲಿ ಅವರ ನೀತಿನಿರ್ಧಾರಗಳು ಹೇಗಿರುತ್ತವೆ ಎಂಬುದು ಕುತೂಹಲಕರ.
ಬಾಂಗ್ಲಾದೇಶ ಅಯೋಮಯ: ಇತ್ತೀಚಿನ ಕೆಲ ವರ್ಷಗಳಲ್ಲಿ ಆರ್ಥಿಕ ಸುಧಾರಣೆ ಹಾಗೂ ಉದ್ಯೋಗಸೃಷ್ಟಿ ರಂಗದಲ್ಲಿ ಬೆಳವಣಿಗೆ ಕಾಣುತ್ತಿದ್ದ ಬಾಂಗ್ಲಾದೇಶ ರಾಜಕೀಯ ಅಸ್ಥಿರತೆ ಮತ್ತು ಆಂತರಿಕ ಬಂಡಾಯದಿಂದ ಮತ್ತೆ ಸಂಕಷ್ಟಕ್ಕೆ ಸಿಲುಕಿದೆ. ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಪ್ರಧಾನಿ ಶೇಖ್ ಹಸೀನಾ ಆಗಸ್ಟ್ 5ರಂದು ಬಾಂಗ್ಲಾದೇಶವನ್ನು ತೊರೆದು, ಭಾರತಕ್ಕೆ ಬಂದು ಆಶ್ರಯ ಪಡೆದಿದ್ದಾರೆ. ಆದರೆ, ನೊಬೆಲ್ ಪ್ರಶಸ್ತಿ ಪುರಸ್ಕೃತ ಮಹಮದ್ ಯೂನುಸ್ ನೇತೃತ್ವದಲ್ಲಿ ಉಸ್ತುವಾರಿ ಸರ್ಕಾರ ಸ್ಥಾಪನೆಗೊಂಡಿದ್ದು, 2026ರವರೆಗೆ ಚುನಾವಣೆ ನಡೆಯುವ ಸಾಧ್ಯತೆಗಳಿಲ್ಲ. ಅಲ್ಲದೆ, ಯೂನುಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಅಲ್ಪಸಂಖ್ಯಾತ ಹಿಂದು ಮತ್ತು ಕ್ರೖೆಸ್ತರ ವಿರುದ್ಧ ಹಿಂಸಾಚಾರ ತೀವ್ರಗೊಂಡಿದೆ. ಅನೇಕ ಹಿಂದು ಮಂದಿರಗಳ ಮೇಲೆ ದಾಳಿ ನಡೆಸಲಾಗಿದ್ದು, ಹಿಂದುಗಳನ್ನೇ ಗುರಿಯಾಗಿಸಿ ದೌರ್ಜನ್ಯ ಎಸಗಲಾಗುತ್ತಿದೆ. ಹಿಂದು ಸಾಧುಸಂತರನ್ನು ಬಂಧಿಸಿ ಜೈಲಿಗೆ ಹಾಕಲಾಗಿದೆ. ಇದರಿಂದ ಹಿಂದುಗಳು ಮತ್ತು ಕ್ರೖೆಸ್ತರು ಭಯದಲ್ಲೇ ಬದುಕುವಂತಾಗಿದೆ. ಭಾರತದೊಂದಿಗಿನ ರಾಜತಾಂತ್ರಿಕ ಬಾಂಧವ್ಯಕ್ಕೂ ಧಕ್ಕೆ ತಂದುಕೊಂಡಿರುವ ಬಾಂಗ್ಲಾದೇಶ ಈಗ ಆರ್ಥಿಕ ಹಿಂಜರಿತದ ಸಂಕಷ್ಟವನ್ನೂ ಮೈಮೇಲೆ ಎಳೆದುಕೊಳ್ಳುತ್ತಿದೆ.
ಮೊಜಾಂಬಿಕಾದಲ್ಲಿ ಹಿಂಸಾಚಾರ: ಆಫ್ರಿಕಾ ಖಂಡದ ಪೂರ್ವ ರಾಷ್ಟ್ರವಾದ ಮೊಜಾಂಬಿಕಾದಲ್ಲಿ ಸಾರ್ವತ್ರಿಕ ಚುನಾವಣೆಯ ಬಳಿಕ ನಡೆದ ಹಿಂಸಾಚಾರದಲ್ಲಿ 151 ಜನರು ಪ್ರಾಣ ಕಳೆದುಕೊಂಡರು. ದೇಶದ ಅಧ್ಯಕ್ಷೀಯ ಸ್ಥಾನಕ್ಕೆ ಅ.11ರಂದು ಚುನಾವಣೆ ನಡೆದಿತ್ತು. ಇದರಲ್ಲಿ ಆಡಳಿತಾರೂಢ ಫ್ರಿಮಿಲೊ ಪಕ್ಷದ ಡೇನಿಯಲ್ ಚಾಪೋ ಜಯಗಳಿಸಿದರು. ಆದರೆ, ಆಡಳಿತಾರೂಢ ಪಕ್ಷ ಚುನಾವಣೆಯಲ್ಲಿ ಅಕ್ರಮ ನಡೆಸಿದೆ ಎಂದು ಪ್ರತಿಪಕ್ಷಗಳು ಆರೋಪಿಸಿದ ಬೆನ್ನಲ್ಲೇ ಹಿಂಸಾಚಾರ ಭುಗಿಲೆದ್ದಿತು. ಕೊನೆಗೆ, ಪ್ರಕರಣ ನ್ಯಾಯಾಲಯದ ಮೆಟ್ಟಿಲು ಏರಿತು. ಡೇನಿ ಯಲ್ ಚಾಪೋ ಗೆಲುವು ಸಕ್ರಮವಾಗಿದೆ ಎಂದು ಕೋರ್ಟ್ ಡಿ.22ರಂದು ತೀರ್ಪು ನೀಡಿತು.
ಹೆಚ್ಚಿದ ಸ್ನೇಹಸಂಬಂಧ: ಭಾರತ ಈ ವರ್ಷವೂ ಹಲವು ರಾಷ್ಟ್ರಗಳೊಂದಿಗೆ ದ್ವಿಪಕ್ಷೀಯ ಸಂಬಂಧಗಳನ್ನು ವೃದ್ಧಿಸಿಕೊಂಡಿದೆ. ಬ್ರಿಕ್ಸ್ ಶೃಂಗಸಭೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್, ಅಮೆರಿಕ ಅಧ್ಯಕ್ಷ ಜೋ ಬೈಡೆನ್, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರೊಂದಿಗೆ ಮಾತುಕತೆ ನಡೆಸಿ, ಬ್ರಿಕ್ಸ್ ಪರಿಣಾಮಕಾರಿ ಒಕ್ಕೂಟವಾಗಲಿ ಎಂದು ಆಶಿಸಿದರು. ಶ್ರೀಲಂಕಾದ ನೂತನ ಅಧ್ಯಕ್ಷ ಅನುರಾ ಕುಮಾರ ದಿಸ್ಸನಾಯಕೆ ಭಾರತಕ್ಕೆ ಭೇಟಿ ನೀಡಿ, ಬಾಂಧವ್ಯವೃದ್ಧಿಗೆ ಬದ್ಧ ಎಂದು ಸಾರಿದರು. ಅಲ್ಲದೆ, ‘ಭಾರತವಿರೋಧಿ ಚಟುವಟಿಕೆಗೆ ಶ್ರೀಲಂಕಾದಲ್ಲಿ ಅವಕಾಶ ಇಲ್ಲ’ ಎಂದು ಸ್ಪಷ್ಟವಾಗಿ ಹೇಳುವ ಮೂಲಕ ದಿಸ್ಸನಾಯಕೆ ಚೀನಾಗೆ ಪರೋಕ್ಷ ಸಂದೇಶ ರವಾನಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕುವೈತ್ನ ಅತ್ಯುನ್ನತ ಗೌರವ ‘ದಿ ಆರ್ಡರ್ ಆಫ್ ಮುಬಾರಕ್ ಅಲ್ ಕಬೀರ್’ ಪ್ರಶಸ್ತಿಯನ್ನು ಕುವೈತ್ನ ಅಮೀರ್ ಶೇಖ್ ಮೆಶಲ್ ಅಲ್-ಅಹ್ಮದ್ ಅಲ್-ಜಾಬರ್ ಅಲ್ ಸಬಾಹ್ ಅವರು ಡಿ.22ರಂದು ಪ್ರದಾನ ಮಾಡಿದರು. ಭಾರತದ ಪ್ರಧಾನಿಯೊಬ್ಬರು ಕೊಲ್ಲಿ ರಾಷ್ಟ್ರಕ್ಕೆ 43 ವರ್ಷಗಳ ನಂತರ ಭೇಟಿ ನೀಡಿದ್ದು ಇದೇ ಮೊದಲಾಗಿತ್ತು. ‘ಕುವೈತ್ನ ಭೇಟಿ ಐತಿಹಾಸಿಕವಾಗಿತ್ತು’ ಎಂದು ಮೋದಿ ಪ್ರತಿಕ್ರಿಯಿಸಿದ್ದು, ಬಾಂಧವ್ಯವೃದ್ಧಿಗೆ ಸಾಕ್ಷಿಯಾಗಿತ್ತು. ಮುಖ್ಯವಾಗಿ, ಜಾಗತಿಕ ವೇದಿಕೆಗಳಲ್ಲಿ ಭಾರತದ ದನಿಗೆ ಮನ್ನಣೆ ಸಿಗುತ್ತಿದ್ದು, ಅಂತಾರಾಷ್ಟ್ರೀಯ ವಲಯವು ಪ್ರಮುಖ ವಿಷಯಗಳಲ್ಲಿ ಭಾರತದ ಸಹಭಾಗಿತ್ವವನ್ನು ಬಯಸುತ್ತಿದೆ.
ಬ್ರಿಕ್ಸ್ನಿಂದ ಪರ್ಯಾಯ ಕರೆನ್ಸಿ ತರಲು ಯತ್ನ: ಅಮೆರಿಕ ಡಾಲರ್ ಅವಲಂಬನೆ ತಗ್ಗಿಸಲು ಮುಂದಾಗಿರುವ ಬ್ರಿಕ್ಸ್ , ಸದಸ್ಯ ರಾಷ್ಟ್ರಗಳ ನಡುವಿನ ವ್ಯವಹಾರಕ್ಕಾಗಿ ಕರೆನ್ಸಿ ಸೃಷ್ಟಿ ಕುರಿತು ಪ್ರಯತ್ನ ಆರಂಭಿಸಿದೆ. ಅಮೆರಿಕದ ನಿರ್ಬಂಧ ಹಾಗೂ ವಿತ್ತೀಯ ನೀತಿಗಳ ಚಂಚಲತೆಯಿಂದ ರಕ್ಷಿಸಿಕೊಳ್ಳಲು ಈ ಕರೆನ್ಸಿ ನೆರವಾಗಲಿದೆ ಎಂಬುದು ಸಂಬಂಧಿತ ರಾಷ್ಟ್ರಗಳ ಲೆಕ್ಕಾಚಾರ. ಆದರೆ ಇಂಥ ಒಂದು ಕರೆನ್ಸಿ ಚಲಾವಣೆಗೆ ಬಂದರೆ ಅದು ಜಾಗತಿಕ ವ್ಯವಹಾರ ಮತ್ತು ಹಣಕಾಸಿನಲ್ಲಿ ಡಾಲರ್ನ ಅಧಿಪತ್ಯಕ್ಕೆ ನೇರ ಸವಾಲು ಎಂದು ವಿಶ್ಲೇಷಿಸಲ್ಪಟ್ಟಿದೆ. ಹಾಗಾಗಿಯೇ, ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಂಥ ಪ್ರಯತ್ನದ ವಿರುದ್ಧದ ಕಿಡಿಕಿಡಿಯಾಗಿದ್ದು, ಬ್ರಿಕ್ಸ್ ರಾಷ್ಟ್ರಗಳಿಗೆ ಹೆಚ್ಚಿನ ಸುಂಕ ವಿಧಿಸುವ ಎಚ್ಚರಿಕೆ ನೀಡಿದ್ದಾರೆ.