ಹೈದರಾಬಾದ್: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸರ್ಕಾರಿ ಉದ್ಯೋಗ ಪಡೆಯಲು ಪೈಪೋಟಿ ನಡೆಸುವವರೇ ಹೆಚ್ಚಾಗಿದ್ದಾರೆ. ಆದರೆ, ಸರ್ಕಾರಿ ನೌಕರಿ ಸಿಗುವುದು ಸುಲಭವೇನಲ್ಲ. ಇದಕ್ಕಾಗಿ ಕೆಲವರು ವರ್ಷಗಟ್ಟಲೆ ತಯಾರಿ ನಡೆಸುತ್ತಾರೆ. ಆದರೂ ಕೆಲವರಿಗೆ ಸರ್ಕಾರಿ ನೌಕರಿ ಕಬ್ಬಿಣದ ಕಡಲೆಯಾದರೆ, ಇನ್ನೂ ಕೆಲವರಿಗೆ ಎರಡ್ಮೂರು ಸರ್ಕಾರಿ ಕೆಲಸಗಳು ಒಟ್ಟಿಗೆ ಸಿಗುವುದನ್ನು ನೋಡಿದ್ದೇವೆ. ಇದುವರೆಗೆ ಇಂತಹ ಹಲವು ಸುದ್ದಿಗಳನ್ನು ಓದಿದ್ದೇವೆ. ಆದರೆ ಈಗ ಹೇಳಹೊರಟಿರುವ ಯಶೋಗಾಥೆಯನ್ನು ಕೇಳಿದರೆ ಎಲ್ಲರೂ ಅಚ್ಚರಿ ಪಡಲೇಬೇಕು. ಏಕೆಂದರೆ, ಈ ಯುವಕ ಒಂದಲ್ಲ ಎರಡಲ್ಲ 15 ಸರ್ಕಾರಿ ಉದ್ಯೋಗಗಳನ್ನು ಗಿಟ್ಟಿಸಿದ್ದಾನೆ.
ನಾವೀಗ ಹೇಳುತ್ತಿರುವುದು ತೆಲಂಗಾಣ ರಾಜ್ಯದ ಸೂರ್ಯಪೇಟ್ ಜಿಲ್ಲೆಯ ನೆರೆಡುಚರ್ಲಾ ಮಂಡಲದ ರಮಾವತ್ ಮಧುಸೂದನ್ ಎಂಬ ಯುವಕನ ಬಗ್ಗೆ. ಶೇ. 60 ಅಂಕಗಳೊಂದಿಗೆ ಬಿ.ಟೆಕ್ ಪಾಸಾದ ನಂತರ ಒಂದು ವರ್ಷ ಬ್ಯಾಂಕ್ ಉದ್ಯೋಗಕ್ಕಾಗಿ ಶ್ರಮಿಸಿದ. ಆದರೆ, ಮೊದಲ ಪ್ರಯತ್ನದಲ್ಲಿ ಯಶಸ್ವಿಯಾಗಲಿಲ್ಲ. ಆದರೂ ಎದೆಗುಂದದೆ ತಮ್ಮ ಅಧ್ಯಯನ ಮುಂದುವರಿಸಿದರು. ಪರೀಕ್ಷೆಗಳಿಗೆ ತುಂಬಾ ಸಿದ್ಧರಾಗಿ ಕೇವಲ ಮೂರೇ ವರ್ಷದಲ್ಲಿ 15 ಸರ್ಕಾರಿ ನೌಕರಿಗಳನ್ನು ಗಿಟ್ಟಿಸಿದ್ದಾರೆ.
ಆರ್ಆರ್ಬಿ, ಐಬಿಪಿಎಸ್, ಎಸ್ಬಿಐನಲ್ಲಿ ಪಿಒ ಹುದ್ದೆಗಳು, ಎಲ್ಐಸಿಯಲ್ಲಿ ಎಎಒ, ಎನ್ಐಎಸಿಎಲ್ನಲ್ಲಿ ಎಒ, ಜನರಲ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದಲ್ಲಿ ಸಹಾಯಕ ಮ್ಯಾನೇಜರ್, ಎಫ್ಸಿಐನಲ್ಲಿ ಸಹಾಯಕ ಗ್ರೇಡ್-3, ಐಡಿಬಿಐನಲ್ಲಿ ಸಹಾಯಕ ವ್ಯವಸ್ಥಾಪಕ ಹುದ್ದೆಗಳು ಮಾತ್ರವಲ್ಲದೆ, ಆರ್ಆರ್ಬಿ, ಈಬಿಪಿಎಸ್, ಎಸ್‌ಬಿಐ ಮತ್ತು ಐಡಿಬಿಐ ಇಲಾಖೆಗಳಲ್ಲಿ ಗುಮಾಸ್ತ ಉದ್ಯೋಗಗಳು, ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್‌ನಲ್ಲಿ ಕಾರ್ಯನಿರ್ವಾಹಕ ಕ್ಲೆರಿಕಲ್ ಉದ್ಯೋಗಗಳು ಮತ್ತು ತೆಲಂಗಾಣ ಸ್ಟೇಟ್ ಕ್ಯಾಬ್‌ನಲ್ಲಿ ಮ್ಯಾನೇಜರ್ ಉದ್ಯೋಗಗಳಿಗೆ ಆಯ್ಕೆಯಾದರು.
ಆದರೆ ಮಧುಸೂದನ್ ಅವರಿಗೆ ಮಂಜೂರಾಗಿರುವ ಹುದ್ದೆಯ ಸ್ಥಳ, ಪರಿಸರ ಹಾಗೂ ಬೇರೆ ಬೇರೆ ಕಾರಣಗಳಿಂದ ಇದುವರೆಗೆ ಯಾವುದೇ ಕೆಲಸವನ್ನು ಆಯ್ಕೆ ಮಾಡಿಕೊಂಡಿಲ್ಲ. ಪ್ರಸ್ತುತ, ಅವರು 'ಸ್ಟಾಫ್ ಸೆಲೆಕ್ಷನ್ ಕಮಿಷನ್ - CGL (SSC CGL)' ನಲ್ಲಿ ಕೆಲಸ ಪಡೆಯಲು ತಯಾರಿ ನಡೆಸುತ್ತಿದ್ದಾರೆ. ಇದಕ್ಕೂ ಮುನ್ನ ಕರ್ನಾಟಕದಲ್ಲಿ ಎಸ್‌ಬಿಐ ಪಿಒ ಆಗಿ ಆಯ್ಕೆಯಾದ ನಂತರ ಕೆಲಸಕ್ಕೆ ಸೇರಿದರು.
ಆದರೆ, ಕೆಲವು ದಿನಗಳ ನಂತರ ತೆಲಂಗಾಣದಲ್ಲಿ ಗ್ರೂಪ್ ನೋಟಿಫಿಕೇಶನ್‌ಗಳು ಬಿಡುಗಡೆಯಾಗುತ್ತಿದ್ದಂತೆ, ಅವರು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ಮತ್ತೆ ತಯಾರಿ ಆರಂಭಿಸಿದರು. ದಿಲ್‌ಸುಖ್‌ನಗರದ ಕೋಚಿಂಗ್ ಸೆಂಟರ್‌ಗೆ ಸೇರುವ ಮೂಲಕ ಈ ಸಾಧನೆಗಳು ಸಾಧ್ಯವಾಯಿತು ಎನ್ನುತ್ತಾರೆ ಮಧುಸೂದನ್. ಇದೀಗ ಸ್ಟಾಫ್ ಸೆಲೆಕ್ಷನ್ ಕಮಿಷನ್ ಕೆಲಸಕ್ಕೆ ತಯಾರಿ ನಡೆಸುತ್ತಿದ್ದು, ಆ ಕೆಲಸವು ಸಿಗುತ್ತದೆ ಎಂದು ಮಧುಸೂದನ್ ಆತ್ಮವಿಶ್ವಾಸದಿಂದ ಹೇಳುತ್ತಾರೆ.
ಮಧುಸೂಧನ್ ತಂದೆ-ತಾಯಿಯ ವಿಚಾರವೇನೆಂದರೆ ತಂದೆ ಪಾಂಡು ಅವರು ಕೃಷಿ ಮಾಡುತ್ತಿದ್ದಾರೆ. ತಾಯಿ ನಾಗಮಣಿ ಶಾಲಾ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಸದ್ಯ ಯಾವುದೇ ಆರ್ಥಿಕ ಸಮಸ್ಯೆ ಇಲ್ಲದ ಕಾರಣ ಪೋಷಕರ ಪ್ರೋತ್ಸಾಹದಿಂದ ಗುರಿಯತ್ತ ಹೆಜ್ಜೆ ಹಾಕುತ್ತಿರುವುದಾಗಿ ಯುವಕ ಬಹಿರಂಗಪಡಿಸಿದ್ದಾನೆ. (ಏಜೆನ್ಸೀಸ್)