ಹೈದರಾಬಾದ್: ಕೃಷಿ ಮಾರ್ಗದರ್ಶನ ನೀಡುವ ಮೂಲಕ ಮಾರುಕಟ್ಟೆಯಲ್ಲಿ ಬೇಡಿಕೆಯಿರುವ ಕೃಷಿ ಉತ್ಪನ್ನಗಳನ್ನು ಉತ್ಪಾದಿಸುವಂತೆ ರೈತರನ್ನು ಸಿದ್ಧಗೊಳಿಸಲು ತೆಲಂಗಾಣ ಸರ್ಕಾರ ಮುಂದಾಗಿದೆ.
ಯಾವ ಬೆಳೆಗಳನ್ನು ಯಾವ ಪ್ರಮಾಣದಲ್ಲಿ ಬೆಳೆಯಬೇಕೆಂದು ಮಾರ್ಗದರ್ಶನ ಮಾಡಲು ನಿರ್ಧರಿಸಿರುವ ತೆಲಂಗಾಣದ ಈ ನಡೆ ಬಹುಶಃ ದೇಶದಲ್ಲೇ ಮೊದಲ ಪ್ರಯತ್ನ ಎನ್ನಬಹುದು.
ಮಾರುಕಟ್ಟೆಯಲ್ಲಿ ಬೇಡಿಕೆಯಲ್ಲಿರುವ ಉತ್ಪನ್ನಗಳನ್ನು ಉತ್ಪಾದಿಸುವಂತೆ ರೈತರನ್ನು ಸಿದ್ಧಗೊಳಿಸುವುದು ಈ ಯೋಜನೆಯ ಉದ್ದೇಶವಾಗಿದೆ ಎನ್ನುತ್ತಾರೆ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್.
ಖಾರೀಫ್ ಋತುವಿನ ಆರಂಭದಲ್ಲಿ ರಾಜ್ಯದಲ್ಲಿ ಬೆಳೆ ಪದ್ಧತಿಯನ್ನು ನಿಯಂತ್ರಿಸಲಾಗುತ್ತದೆ. ಆರಂಭಿಕ ಯೋಜನೆಗಳ ಪ್ರಕಾರ ರೈತರಿಗೆ 50 ಲಕ್ಷ ಎಕರೆಯಲ್ಲಿ ಭತ್ತ (10 ಲಕ್ಷ ಎಕರೆ ಭೂಮಿಯಲ್ಲಿ ತೆಲಂಗಾಣ ಸೋನಾ ಪ್ರಬೇಧ ಸೇರಿ), 50 ಲಕ್ಷ ಎಕರೆಯಲ್ಲಿ ಹತ್ತಿ ಮತ್ತು 10 ಎಕರೆ ತೊಗರಿ ಬೆಳೆಯಲು ರೈತರಿಗೆ ತಿಳಿಸಲಾಗುತ್ತದೆ.
ಇದನ್ನೂ ಓದಿ: ಹೆಡ್ಲೈನ್ ಹುಡುಕಿದಂತಿದೆ ಪ್ಯಾಕೇಜ್ ಎಂದ ಕಾಂಗ್ರೆಸ್; ಸ್ವಾವಲಂಬಿ ಭಾರತವನ್ನಾಗಿಸುತ್ತೆ ಎಂದ ಬಿಜೆಪಿ
ನಗರ ಪ್ರದೇಶಗಳಿಗೆ ಸಮೀಪವಿರುವ ಕೃಷಿ ಭೂಮಿಯಲ್ಲಿ ಬೇಡಿಕೆ ಸೃಷ್ಟಿಸಲು ತರಕಾರಿ ಹಾಗೂ ತೋಟಗಾರಿಕೆ ಬೆಳೆಗಳನ್ನು ಬೆಳೆಸಲಾಗುತ್ತದೆ. ಯಾವ ರೀತಿಯ ತರಕಾರಿಗಳು ಮತ್ತು ಹಣ್ಣುಗಳನ್ನು ಬೆಳೆಯಬೇಕು ಮತ್ತು ಎಷ್ಟು ಪ್ರಮಾಣದಲ್ಲಿ ಬೆಳೆಯಬೇಕು ಎಂಬುದನ್ನು ಸರ್ಕಾರ ಮೌಲ್ಯಮಾಪನ ಮಾಡಿ ಘೋಷಿಸುತ್ತದೆ.
ವಿವರವಾದ ಬೆಳೆ ನಕ್ಷೆಯನ್ನು ಶೀಘ್ರದಲ್ಲೇ ಬಿಡುಗಡೆಗೊಳಿಸಿ ಅದಕ್ಕೆ ಅನುಗುಣವಾಗಿ ಬೀಜ ಮಾರಾಟ ಮಾಡಲಾಗುತ್ತದೆ.
ಸರ್ಕಾರದ ಯೋಜನೆಗಳನ್ನು ತಿಳಿಸಲು ಮತ್ತು ಅವರ ಪ್ರತಿಕ್ರಿಯೆ ಪಡೆಯಲು ಮುಖ್ಯಮಂತ್ರಿ ಮೇ 15 ರಂದು ಕ್ಷೇತ್ರಮಟ್ಟದ ಕೃಷಿ ಅಧಿಕಾರಿಗಳು ಸೇರಿ ಎಲ್ಲ ಪಾಲುದಾರರೊಂದಿಗೆ ಸಭೆ (ವಿಡಿಯೋ ಕಾನ್ಫರೆನ್ಸ್) ನಡೆಸಲಿದ್ದಾರೆ. ಸರ್ಕಾರ ಹೆಚ್ಚುವರಿ ಜವಾಬ್ದಾರಿಗಳನ್ನು ನಿಭಾಯಿಸಲು ಕೃಷಿ ಇಲಾಖೆಯಲ್ಲಿ ಕೆಲ ಮಹತ್ವದ ಬದಲಾವಣೆಗಳನ್ನು ತರಲಿದೆ. (ಏಜನ್ಸೀಸ್)