ನ್ಯೂಸ್

ತೆಲಂಗಾಣದಲ್ಲಿ ಫಲಿಸಲಿಲ್ಲ ಪವನ್ ಕಲ್ಯಾಣ್ ಪ್ರಯತ್ನ: ಠೇವಣಿ ಕಳೆದುಕೊಂಡ ಜನಸೇನಾ ಅಭ್ಯರ್ಥಿಗಳು

ಹೈದರಾಬಾದ್​: ತೆಲಂಗಾಣ ವಿಧಾನಸಭೆ ಚುನಾವಣೆ ಫಲಿತಾಂಶದಲ್ಲಿ ನಟ ಪವನ್ ಕಲ್ಯಾಣ್​ ಅವರ ಜನಸೇನಾಗೆ ಅನಿರೀಕ್ಷಿತ ಆಘಾತ ಎದುರಾಗಿದೆ. ಬಿಜೆಪಿ ಜೊತೆಗಿನ ಮೈತ್ರಿಯ ಭಾಗವಾಗಿ 8 ಸ್ಥಾನಗಳಲ್ಲಿ ಸ್ಪರ್ಧಿಸಿದ್ದು, ಕನಿಷ್ಠ ಒಂದು ಸ್ಥಾನದಲ್ಲೂ ಗೆಲ್ಲಲಿಲ್ಲ. ಎಲ್ಲಿಯೂ ಖಾತೆ ತೆರೆಯದ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ.

ಕುಕಟ್‌ಪಲ್ಲಿಯಲ್ಲಿ ಪ್ರೇಮ್‌ಕುಮಾರ್‌, ತಾಂಡೂರಿನಲ್ಲಿ ಶಂಕರ್‌ಗೌಡ್‌, ನಾಗರಕರ್ನೂಲ್‌ನಲ್ಲಿ ಲಕ್ಷ್ಮಣ್‌ಗೌಡ್‌, ಕೋಡದಲ್ಲಿ ಮೇಕಲ ಸತೀಶ್‌ ರೆಡ್ಡಿ, ಖಮ್ಮಂನಲ್ಲಿ ರಾಮಕೃಷ್ಣ, ವೈರಾದಲ್ಲಿ ಸಂಪತ್‌ ನಾಯ್ಕ್‌, ಕೊಟ್ಟಗುಡ್ಡೆಯಲ್ಲಿ ಸುರೇಂದರ್‌ ರಾವ್‌, ಅಶ್ವರಾವ್‌ಪೇಟೆಯಲ್ಲಿ ಉಮಾದೇವಿ ಠೇವಣಿ ಕಳೆದುಕೊಂಡಿದ್ದಾರೆ.

ತೆಲಂಗಾಣದಲ್ಲಿ ಬಿಜೆಪಿ ಮತ್ತು ಜನಸೇನಾ ಮೈತ್ರಿಕೂಟದ ಪರವಾಗಿ ಪವನ್ ಕಲ್ಯಾಣ್ ಪ್ರಚಾರ ಸಹ ನಡೆಸಿದ್ದರು. ಹೈದರಾಬಾದ್‌ನ ಕೂಕಟ್‌ಪಲ್ಲಿಯಲ್ಲಿ ವಾರಂಗಲ್, ಸೂರ್ಯಪೇಟ್, ಕೊತಗುಡೆಂ ಸಭೆಗಳ ಜತೆಗೆ ರೋಡ್ ಶೋ ನಡೆಸಿ ಮತಯಾಚಿಸಿದ್ದರು. ಆದಾಗ್ಯೂ, ಅವರ ಪ್ರಚಾರವು ಯಾವುದೇ ಪರಿಣಾಮ ಬೀರಲು ವಿಫಲವಾಗಿದೆ.

ಇನ್ನು ಜನಸೇನೆ ಮಾತ್ರವಲ್ಲ, ಬಿಜೆಪಿ ನಾಯಕರಿಗೂ ಅನಿರೀಕ್ಷಿತ ಆಘಾತ ಎದುರಾಗಿದೆ. ಕೇಸರಿ ಸೇನೆಯಲ್ಲಿರುವ ಘಟಾನುಘಟಿಗಳೆಲ್ಲ ಸೋಲಿನತ್ತ ಸಾಗುತ್ತಿದ್ದಾರೆ. ಕರೀಂನಗರದಲ್ಲಿ ಬಂಡಿ ಸಂಜಯ್, ಕೋರೂಟಿನಲ್ಲಿ ಧರ್ಮಪುರಿ ಅರವಿಂದ್, ದುಬ್ಬಾಕದಲ್ಲಿ ರಘುನಂದನ್ ರಾವ್, ಗೋಶಾಮಹಲ್‌ನಲ್ಲಿ ರಾಜಾಸಿಂಗ್ ಕೂಡ ಹಿನ್ನಡೆಯಲ್ಲಿದ್ದಾರೆ.