ನ್ಯೂಸ್

ಬಿಜೆಪಿಯೊಂದಿಗೆ ದೃಢವಾಗಿ ನಿಂತಿದ್ದೇನೆ: ತೇಜಸ್ವಿನಿ ಅನಂತ್‍ ಕುಮಾರ್ ಸ್ಪಷ್ಟನೆ

ಬೆಂಗಳೂರು: ಕೆಲ ದಿನಗಳಿಂದ ರಾಜ್ಯ ಬಿಜೆಪಿಯ ಉಪಾಧ್ಯಕ್ಷೆ ತೇಜಸ್ವಿನಿ ಅನಂತ್ ಕುಮಾರ್ ಬಿಜೆಪಿಯ ನಡೆಗಳಿಂದ ನೊಂದಿದ್ದಾರಾ? ಬಿಜೆಪಿ ಬಿಟ್ಟು ಬೇರೊಂದು ಪಕ್ಷಕ್ಕೆ ಹಾರುತ್ತಾರಾ ಎನ್ನವ ರೀತಿಯ ಊಹಾಪೋಹಗಳು ಹರಿದಾಡುತ್ತಿದ್ದವು. ಈಗ ಅವೆಲ್ಲದ್ದಕ್ಕೂ ಅವರು ಟ್ವೀಟ್ ಮೂಲಕ ಬ್ರೇಕ್‍ ಹಾಕಿದ್ದಾರೆ.

ಈ ಹಿಂದೆಯೂ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ ಮಾಡಿದ್ದ ಟ್ವೀಟ್ ಭಾರೀ ಚರ್ಚೆಗೆ ಕಾರಣವಾಗಿತ್ತು. ತಮ್ಮ ಪತಿ ಅನಂತಕುಮಾರ್‌, ಲಾಲ್‌ಬಾಗ್‌ನಲ್ಲಿ ನೆಟ್ಟ ಗಿಡ ಬಾಡಿ ಹೋಗಿರುವ ಬಗ್ಗೆ ಟ್ವೀಟ್ ಮಾಡಿದ್ದರು.

“2015ರ ಜೂನ್‌ 5ರಂದು ಲಾಲ್‌ಬಾಗ್‌ ಪಶ್ಚಿಮ ದ್ವಾರದ ಬಳಿ ಅನಂತಕುಮಾರ್‌ ಅವರು ಈ ಗಿಡ ನೆಟ್ಟಿದ್ದರು. ಯಾಕೋ ಮುದುರಿ ಹೋಗಿದೆ. ಲಾಲ್‌ಬಾಗ್‌ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದೇವೆ. ಅನಂತಕುಮಾರ ಅವರ ಅನುಪಸ್ಥಿತಿಯಲ್ಲಿ ಈ ಗಿಡವನ್ನು ಉಳಿಸುವ ಜವಾಬ್ದಾರಿ ನಮ್ಮದು ಎಂಬುದು ನನ್ನ ಭಾವನೆ’ಎಂದಿದ್ದರು. ಇದಕ್ಕೂ ನೂರೆಂಟು ಅರ್ಥಗಳನ್ನು ಕಲ್ಪಿಸಲಾಗಿತ್ತು.

ಅದಾದ ಬಳಿಕ ಅವರು, ಏಪ್ರಿಲ್ 17ರಂದು, “ಮಾತು ಬೆಳ್ಳಿ ಹೌದೋ ಅಲ್ಲವೋ ಗೊತ್ತಿಲ್ಲ, ಆದರೆ ಮೌನ ಮಾತ್ರ ಬಂಗಾರ. ಏನಂತಿರಿ?” ಎಂದು ಟ್ವೀಟ್ ಮಾಡಿದ್ದರು.

ಇದೀಗ ಅವರು, “ದಯವಿಟ್ಟು ಊಹಾಪೋಹಗಳಿಗೆ ಕಿವಿಗೊಡಬೇಡಿ. ನಾನು ಭಾರತೀಯ ಜನತಾ ಪಕ್ಷದ ಜೊತೆಗೆ ಧೃಡವಾಗಿ ಇದ್ದೇನೆ. ಇಂಗ್ಲಿಷಿನಲ್ಲಿ ಹೇಳಬಹುದಾದರೆ, I am wedded to the party and ideology - no compromise " ಎಂದು ಟ್ವೀಟ್ ಮಾಡುವ ಮೂಲಕ ತಾವು ಯಾವುದೇ ಕಾರಣಕ್ಕೂ ಪಕ್ಷ ಬಿಡುವುದಿಲ್ಲ ಎನ್ನುವುದನ್ನು ಸ್ಪಷ‍್ಟಪಡಿಸಿದ್ದಾರೆ.