ನ್ಯೂಸ್

ಎರಡು ಭಾಗಗಳಲ್ಲಿ ತೆರೆಕಾಣಲಿದೆ ನಟ ತೇಜ ಸಜ್ಜ ಅಭಿನಯದ ಹೊಸ ಸಿನಿಮಾ

ಹೈದರಾಬಾದ್: ಕಳೆದ ಕೆಲವು ತಿಂಗಳ ಹಿಂದೆ ಬಹುತೇಕ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿದ್ದ ಪ್ಯಾನ್ ಇಂಡಿಯಾ 'ಹನು-ಮ್ಯಾನ್' ಚಿತ್ರವನ್ನು ಮೆಚ್ಚಿಕೊಂಡಿದ್ದ ಸಿನಿಪ್ರೇಕ್ಷಕರು, ಚಿತ್ರದಲ್ಲಿನ ಆಕರ್ಷಕ ವಿಎಫ್ಎಕ್ಸ್​ ಕೆಲಸಗಳಿಗೆ ಫಿದಾ ಆಗಿದ್ದರು. ಇನ್ನು ಹನು-ಮ್ಯಾನ್​ನಲ್ಲಿ ಸ್ಟಾರ್​ ಆಗಿ ಮಿಂಚಿದ ನಟ ತೇಜ ಸಜ್ಜ, ಇದೀಗ ತಮ್ಮ ಮುಂದಿನ ಸಿನಿಮಾ ಬಗ್ಗೆ ಹೊಸ ಅಪ್ಡೇಟ್​ವೊಂದನ್ನು ಹಂಚಿಕೊಂಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಚಲನಚಿತ್ರ ನಿರ್ಮಾಪಕರು ತಮ್ಮ ಸಿನಿಮಾಗಳನ್ನು ಎರಡು ಭಾಗಗಳಾಗಿ ಘೋಷಿಸುತ್ತಿರುವುದು ಹೊಸ ಸಂಪ್ರದಾಯವಾಗಿದೆ. ಈ ಸಾಲಿನಲ್ಲಿ ರಕ್ಷಿತ್ ಶೆಟ್ಟಿ ಅಭಿನಯದ 'ಸಪ್ತಸಾಗರದಾಚೆ ಎಲ್ಲೋ', ಪ್ರಭಾಸ್‌ನ 'ಸಲಾರ್', 'ಕಲ್ಕಿ 2898 AD' ಹಾಗೂ 'ದೇವರ', 'ಹರಿಹರ ವೀರ ಮಲ್ಲು', 'ಹನು-ಮ್ಯಾನ್' ಚಿತ್ರಗಳಿವೆ. ಇದೀಗ ತೇಜ ಸಜ್ಜ ನಟನೆಯ 'ಮಿರೈ' ಕೂಡ ಎರಡು ಭಾಗಗಳಾಗಿ ಬರಲಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.

ಇದು ಆ್ಯಕ್ಷನ್ ಜಾನರ್​ ಒಳಗೊಂಡ ಚಿತ್ರ ಎಂದು ಹೇಳಲಾಗಿದ್ದು, 8 ವರ್ಷಗಳ ಬಳಿಕ ಈ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಮ್​ಬ್ಯಾಕ್ ಮಾಡಿರುವ ಮಂಚು ಮನೋಜ್, ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಮತ್ತಷ್ಟು ವಿಶೇಷ. ಇತ್ತೀಚೆಗಷ್ಟೇ ನಿರ್ಮಾಪಕರು ಚಿತ್ರದ ಫಸ್ಟ್ ಲುಕ್ ಅನ್ನು ಅನಾವರಣಗೊಳಿಸಿದ್ದು, 'ಮಿರಾಯ್' ಎರಡು ಭಾಗಗಳಲ್ಲಿ ತೆರೆದುಕೊಳ್ಳುತ್ತದೆ ಎಂದು ತಿಳಿದುಬಂದಿದೆ. ಮೊದಲ ಭಾಗ ಏಪ್ರಿಲ್ 18, 2025ರಂದು ಬಿಡುಗಡೆಯಾಗುವ ನಿರೀಕ್ಷೆಯಿದೆ,(ಏಜೆನ್ಸೀಸ್).