ನ್ಯೂಸ್

ಶಾಲೆಗೆ ತಡವಾಗಿ ಬಂದ ಬಾಲಕಿಯರಿಗೆ ನಿಮ್ಮ ಪೋಷಕರನ್ನು ಕರೆ ತನ್ನಿ ಎಂದ ಶಿಕ್ಷಕರು; ಬಳಿಕ ಬಾವಿಯಲ್ಲಿ ಇಬ್ಬರು ಬಾಲಕಿಯರ ಶವ ಪತ್ತೆ| Girls Death

Girls Death: ಜಾರ್ಖಂಡ್​ನ ಗಿರಿದಿಹ್ ಜಿಲ್ಲೆಯ ಶಾಲೆಯೊಂದರಲ್ಲಿ ಬಾಲಕಿಯರು ತಡವಾಗಿ ಬಂದಿದ್ದಕ್ಕೆ ಶಿಕ್ಷಕರು ನಿಮ್ಮ ಪೋಷಕರನ್ನು ಕರೆ ತನ್ನಿ ಎಂದು ವಾಪಸ್ ಕಳಿಸಿದ್ದಾರೆ. ಆ ಬಳಿಕ ಇಬ್ಬರು ಬಾಲಕಿಯರ ಶವಗಳು ಬಾವಿಯೊಂದರಲ್ಲಿ ಪತ್ತೆಯಾಗಿವೆ ಎಂದು ಶುಕ್ರವಾರ(ಸೆ. 19) ವರದಿಯಾಗಿದೆ.

ಬಾಲಕಿಯರನ್ನು ಜಹಿದಾ ಖಾತೂನ್(13), ಮತ್ತು ಗುಲಾಬ್ಶಾ ಪ್ರವೀಣ್ (14) ಎಂದು ಗುರುತಿಸಲಾಗಿದೆ. ಇಬ್ಬರೂ ಸರಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಚಿರುವಾ-ಕಪಿಲೊದ ಅಪ್‌ಗ್ರೇಡ್ ಹೈಸ್ಕೂಲ್‌ನ 8 ನೇ ತರಗತಿ ವಿದ್ಯಾರ್ಥಿಗಳು. ಶವಗಳು ಪತ್ತೆಯಾದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ಬಗೋದರ್ ಸರಿಯಾ ಎಸ್​​ಡಿಪಿಓ ಧನಂಜಯ್ ರಾಮ್ ಮಾಹಿತಿ ನೀಡಿದ್ದು, "ಗುರುವಾರ ಇಬ್ಬರೂ ಹುಡುಗಿಯರು ಶಾಲೆಗೆ ತಡವಾಗಿ ಬಂದಿದ್ದಾರೆ. ಶಿಕ್ಷಕರು ಮನೆಗೆ ವಾಪಸ್ ಹೋಗಿ ನಿಮ್ಮ ಪೋಷಕರೊಂದಿಗೆ ಬನ್ನಿ ಎಂದು ಸೂಚಿಸಿದ್ದಾರೆ. ಆಗ ಅವರು ಶಾಲೆಯಿಂದ ವಾಪಸ್ ಹೋದ ಬಳಿಕ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಕುಟುಂಬಸ್ಥರು ಯಾವುದೇ ದೂರು ನೀಡಿಲ್ಲ, ಆದರೆ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)