ನ್ಯೂಸ್

ಕ್ಯಾಮರಾ ಕಣ್ಗಾವಲಿನಲ್ಲಿ ಶಿಕ್ಷಕರ ನೇಮಕ ಪರೀಕ್ಷೆ: 2 ಹಂತದಲ್ಲಿ ಅಭ್ಯರ್ಥಿಗಳ ತಪಾಸಣೆ; ಮೊಬೈಲ್​ಫೋನ್​, ವಾಚ್​ಗೆ ನಿರ್ಬಂಧ

ಬೆಂಗಳೂರು: ಪ್ರಾಥಮಿಕ ಶಾಲಾ (ಪದವೀಧರ) ಶಿಕ್ಷಕರ 15,000 ಹುದ್ದೆಗಳ ನೇಮಕಾತಿಗಾಗಿ ಮೇ 21 ಮತ್ತು 22 ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದ್ದು, 1.06 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪಿಎಸ್​ಐ ನೇಮಕಕ್ಕೆ ಸಂಬಂಧಿಸಿದ ಲಿಖಿತ ಪರೀಕ್ಷೆ, ಪದವಿ ಕಾಲೇಜು ಉಪನ್ಯಾಸಕರ ಪರೀಕ್ಷೆಯಲ್ಲಿ ಅವ್ಯವಹಾರ ನಡೆದಿರುವ ಆರೋಪದ ಹಿನ್ನೆಲೆಯಲ್ಲಿ ಈ ಪರೀಕ್ಷೆಯನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ವಿಶೇಷ ಕಣ್ಗಾವಲು ವ್ಯವಸ್ಥೆ ಮಾಡುವ ಮೂಲಕ ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸಲು ಸಿದ್ಧತೆ ಮಾಡಿಕೊಂಡಿದೆ. ಈ ಕುರಿತು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ನಿಗದಿತ ದಿನಾಂಕಗಳಂದೇ ಪರೀಕ್ಷೆ ನಡೆಯಲಿದೆ. ಯಾವುದೇ ವದಂತಿಗಳಿಗೆ ಅಭ್ಯರ್ಥಿಗಳು ಕಿವಿಗೊಡಬಾರದು ಎಂದು ಮನವಿ ಮಾಡಿದರು. ಈ ಸಲ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. 1,06,083 ಅಭ್ಯರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸಲು ಪೊಲೀಸ್ ಅಧಿಕಾರಿಗಳ ಜತೆ ಸಭೆ ನಡೆಸಿದ್ದೇವೆ. ಅವರಿಂದಲೂ ಒಂದಷ್ಟು ಮಾಹಿತಿ ಪಡೆದಿದ್ದೇವೆ. ಪರೀಕ್ಷಾ ಕೇಂದ್ರಗಳಲ್ಲಿ ಎರಡು ಹಂತದಲ್ಲಿ ತಪಾಸಣೆ ನಡೆಯಲಿದೆ. ಪೋಲೀಸರು ಮೊದಲ ಹಂತದಲ್ಲಿ ನಂತರ ಶಿಕ್ಷಣ ಇಲಾಖೆಯವರು ತಪಾಸಣೆ ನಡೆಸಲಿದ್ದಾರೆ ಎಂದು ತಿಳಿಸಿದರು. 435 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.

ಎಲೆಕ್ಟ್ರಾನಿಕ್ ವಸ್ತು ಒಯ್ಯುವಂತಿಲ್ಲ: ಮೊಬೈಲ್ ಸೇರಿ ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳನ್ನು ಪರೀಕ್ಷಾ ಕೇಂದ್ರಕ್ಕೆ ತರುವಂತಿಲ್ಲ. ಅರ್ಧ ಗಂಟೆಗೂ ಮೊದಲೇ ತಪಾಸಣೆ ನಡೆಯಲಿದೆ ಎಂದು ಸಚಿವರು ತಿಳಿಸಿದರು. ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ನಡೆಸುವ ಸಂಬಂಧ ಸಿಎಂ ಕೂಡ ಸ್ಪಷ್ಟ ಸೂಚನೆ ಕೊಟ್ಟಿದ್ದಾರೆ. ಯಾವುದೇ ಕೇಂದ್ರದಲ್ಲಿ ಗೊಂದಲವಾದರೂ ಆಯಾ ಜಿಲ್ಲೆಯ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದರು.

ಚಿಕ್ಕೋಡಿಯಲ್ಲಿ ಅತೀ ಹೆಚ್ಚು ಅಭ್ಯರ್ಥಿಗಳು!: ಚಿಕ್ಕೋಡಿಯಲ್ಲಿ 11,199 ಅಭ್ಯರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ಅತಿ ಕಡಿಮೆ ಎಂದರೆ ಚಿಕ್ಕಮಗಳೂರಿನಲ್ಲಿ 490 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದಾರೆ.

ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿನಿ ಅಸ್ವಸ್ಥ

ಹನೂರು: ರಾಮಾಪುರ ಪರೀಕ್ಷಾ ಕೇಂದ್ರದಲ್ಲಿ ಮಂಗಳವಾರ ಪಿಯುಸಿ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿನಿ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದಾರೆ. ತಾಲೂಕಿನ ಮಾರ್ಟಳ್ಳಿ ಗ್ರಾಮದ ಎಲೆನ್​ಲೇನ್ಸಿ (17) ರಾಸಾಯನಶಾಸ್ತ್ರ ವಿಷಯದ ಪರೀಕ್ಷೆ ಬರೆಯಲು ರಾಮಾಪುರದ ಜೆಎಸ್​ಎಸ್ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ್ದರು. ಪರೀಕ್ಷೆ ಬರೆಯಲು ಕೊಠಡಿಯಲ್ಲಿ ಕುಳಿತ್ತಿದ್ದಾಗ ಅಸ್ವಸ್ಥಗೊಂಡು ಕುಸಿದು ಬಿದ್ದರು. ತಕ್ಷಣ ಸಮೀಪದ ರಾಮಾಪುರ ಸಮುದಾಯ ಆರೋಗ್ಯಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ತಂದೆ ತೀರಿಕೊಂಡರೂ ಪರೀಕ್ಷೆ ಬರೆದ ವಿದ್ಯಾರ್ಥಿನಿ: ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದ ಬಳ್ಳಾರಿ ಕ್ಯಾಂಪಿನ ವಿದ್ಯಾರ್ಥಿನಿ ನಿಜಮಾ ಮಂಗಳವಾರ ದ್ವಿತೀಯ ಪಿಯು ಭೌತಶಾಸ್ತ್ರ ಪರೀಕ್ಷೆ ಬರೆದಿದ್ದಾಳೆ. ಕಂದಗಲ್ಲು ಗ್ರಾಮದ ಶಿಕ್ಷಕ ಮಹಮ್ಮದ್ ಇಷಾಕ್ (45) ಸೋಮವಾರ ರಾತ್ರಿ ಮನೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಮನೆ ಮಂದಿಯೆಲ್ಲ ದುಃಖದಲ್ಲಿದ್ದರು. ಚೆನ್ನಾಗಿ ಓದಬೇಕೆಂದು ತನ್ನ ಅಪ್ಪ ಹೇಳುತ್ತಿದ್ದ ಮಾತಿನಂತೆ ಉಕ್ಕುತ್ತಿದ್ದ ದುಃಖದ ನಡುವೆಯೂ ಸೋಮವಾರ ರಾತ್ರಿ ಪೂರ್ತಿ ಕಣ್ಣೀರು ಹಾಕುತ್ತಲೇ ಕಳೆದು, ಮಂಗಳವಾರ ಪರೀಕ್ಷೆ ಬರೆದಿದ್ದಾಳೆ.