ಥೈಲಾಂಡ್: ಆಗಸ್ಟ್ 23ರಂದು ತೈಚ್8 ನ್ಯೂಸ್ ವರದಿಯ ಪ್ರಕಾರ, ಕೂದಲು ಇಷ್ಟೇ ಇರಬೇಕು ಎಂಬ ಕಾಲೇಜಿನ ನಿಯಮ ಉಲ್ಲಂಘಿಸುವ ವಿದ್ಯಾರ್ಥಿಗಳ ಕೇಶರಾಶಿಯನ್ನು ಬೋಳಿಸುವುದೇ ಈ ಶಿಕ್ಷಕ ವಿಧಿಸುವ ಅತ್ಯಂತ ಕಠಿಣ ಶಿಕ್ಷೆಯಾಗಿದೆ. ಶಾಲೆಯ ಕೂದಲು ನೀತಿಯನ್ನು ಉಲ್ಲಂಘಿಸಿದ 66 ವಿದ್ಯಾರ್ಥಿಗಳಿಗೆ ಈಗಾಗಲೇ ಕೂದಲು ಕತ್ತರಿಸಿರುವ ಈ ಶಿಕ್ಷಕನಿಗೆ ವಿದ್ಯಾರ್ಥಿಗಳ ಪೋಷಕರು ಹಿಡಿಶಾಪ ಹಾಕುತ್ತಿದ್ದಾರೆ.
ಇದನ್ನೂ ಓದಿ: ನಾವೇನು ಮಾಡಿದ್ದೀವಿ ಅಂತ ನಮ್ಮನ್ನು ಕೇಳಿ, ನಾವೇ ಹೇಳ್ತೀವಿ; ವಿಡಿಯೋ ಮಾಡಿ ಕ್ಲಾರಿಟಿ ಕೊಟ್ಟ ನಟ ವರುಣ್ ಆರಾಧ್ಯ
ಕೂದಲು ಬೋಳಿಸುವುದನ್ನೇ ಕಠಿಣ ಶಿಕ್ಷೆಯಾಗಿ ರೂಢಿಸಿಕೊಂಡು ಬಂದ ಪಶ್ಚಿಮ ಥೈಲ್ಯಾಂಡ್‌ನ ಮಾಸೋಡ್ ತಾಂತ್ರಿಕ ಕಾಲೇಜಿನ ಶಿಕ್ಷಕನನ್ನು ಇದೀಗ ಕೆಲಸದಿಂದ ವಜಾಗೊಳಿಸಲಾಗಿದೆ. ಕೂದಲು ತುಂಬ ಉದ್ದವಿದೆ, ಇಷ್ಟೇ ಇರಬೇಕು, ನಾನು ತಿಳಿಸಿದ್ದಕ್ಕಿಂತ ಸ್ವಲ್ಪ ಹೆಚ್ಚಿರುವಂತಿಲ್ಲ ಎಂದು ಈತ ವಿದ್ಯಾರ್ಥಿಗಳಿಗೆ ಹೆದರಿಸಿ, ಹೆಚ್ಚು ಕೇಶರಾಶಿಯಿದ್ದವರಿಗೆ ಕೂದಲು ಬೋಳಿಸಿದ್ದಾನೆ. ಒಟ್ಟು 66 ವಿದ್ಯಾರ್ಥಿಗಳ ತಲೆ ಬೋಳಿಸಿದ ಶಿಕ್ಷಕನ ವಿರುದ್ಧ ಅಸಮಾಧಾನ ಹೊರಹಾಕಿದ ವಿದ್ಯಾರ್ಥಿಗಳು, ತಮ್ಮ ಪೋಷಕರ ಬಳಿ ಕಣ್ಣೀರಿಟ್ಟಿದ್ದಾರೆ.
ವಿದ್ಯಾರ್ಥಿಗಳ ಕೇಶರಾಶಿಯನ್ನು ಬೋಳಿಸುವ ವಿಡಿಯೋ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ನೆಟ್ಟಿಗರು ತೀವ್ರ ಕಿಡಿಕಾರಿದ್ದು, ಶಿಕ್ಷಕನ ವರ್ತನಗೆ ಛೀಮಾರಿ ಹಾಕಿದ್ದಾರೆ. ಮಾಸ್ಟರ್ ವಿರುದ್ಧ ಅಸಮಾಧಾನ ಹೊರಹಾಕಿರುವ ವಿದ್ಯಾರ್ಥಿಗಳ ಗುಂಪು, ಆತನಿಗೆ ತಕ್ಕ ಶಿಕ್ಷೆ ವಿಧಿಸಬೇಕು ಎಂದು ಕಾಲೇಜಿನ ಆಡಳಿತ ಮಂಡಳಿಗೆ ಆಗ್ರಹಿಸಿದ್ದಾರೆ. ಆದ್ರೆ, ವಜಾಗೊಳಿಸಿದ್ದನ್ನು ಬಿಟ್ಟರೆ ಇಲ್ಲಿಯವರೆಗೆ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎನ್ನಲಾಗಿದೆ,(ಏಜೆನ್ಸೀಸ್).