ನ್ಯೂಸ್

ಕುಡಿದ ಮತ್ತಲ್ಲಿ ಮಹಿಳಾ ಸಿಬ್ಬಂದಿಯನ್ನು ಎಳೆದಾಡಿದ ವ್ಯಕ್ತಿ; ಮುಂದಾಗಿದ್ದು ಅವಾಂತರ!

ತಮಿಳುನಾಡು: ಆಸ್ಪತ್ರೆಯಲ್ಲಿ ಮಹಿಳಾ ಭದ್ರತಾ ಸಿಬ್ಬಂದಿಯೊಬ್ಬರು ಕುಡಿದ ವ್ಯಕ್ತಿಯನ್ನು ನಿರ್ಬಂಧಿತ ಕೊಠಡಿಗೆ ಪ್ರವೇಶಿಸದಂತೆ ತಡೆದದ್ದಕ್ಕೆ ಆತ ಮಹಿಳೆಯ ಕುತ್ತಿಗೆ ಹಿಡಿದು, ಎಳೆದಾಡಿದ ಘಟನೆ ತಮಿಳುನಾಡಿನ ತೂತುಕುಡಿ ತಮಿಳಿನ ಆಸ್ಪತ್ರೆಯಲ್ಲಿ ವರದಿಯಾಗಿದೆ.

ಕೋವಿಲ್‌ಪಟ್ಟಿಯಲ್ಲಿರುವ ಸರ್ಕಾರಿ ಆಸ್ಪತ್ರೆಯ ನವಜಾತ ಶಿಶುಗಳ ವಾರ್ಡ್‌ ಎದುರು ಈ ಘಟನೆ ನಡೆದಿದ್ದು, ಕುಡಿದ ಅಮಲಿನಲ್ಲಿದ್ದ 24 ವರ್ಷದ ಯುವಕನೊಬ್ಬ ಕೊಠಡಿಗೆ ತೆರಳಲು ಯತ್ನಿಸಿದಾಗ ಮಹಿಳಾ ಸಿಬ್ಬಂದಿ ಆತನಿಗೆ ಪ್ರವೇಶಿಸಲು ಅನುಮತಿ ನೀಡಿಲ್ಲ. ಇದಕ್ಕೆ ಕೆಂಡಾಮಂಡಲಗೊಂಡ ಕುಡುಕ, ಮಹಿಳೆಯ ಕತ್ತನ್ನು ಹಿಸುಕಿ, ಎಳೆದಾಡಿದ ದೃಶ್ಯ ಆಸ್ಪತ್ರೆಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಘಟನೆಯ ವಿವರ: ಕಾಳಿರಾಜ್ ಎಂದು ಗುರುತಿಸಲಾದ ಆರೋಪಿಯು ಮಹಿಳಾ ಭದ್ರತಾ ಸಿಬ್ಬಂದಿಗೆ ಹೊಡೆದು, ಆಕೆಯ ಕುತ್ತಿಗೆಯನ್ನು ಹಿಡಿದು ಥಳಿಸಿದ್ದಾನೆ. ಸ್ಥಳದಿಂದ ಪರಾರಿಯಾಗುವ ಮುನ್ನ ಆಕೆಯ ಕೈಗಳನ್ನು ತಿರುಚುವುದು ಕೂಡ ದೃಶ್ಯದಲ್ಲಿ ಸೆರೆಯಾಗಿದೆ. ರಾತ್ರಿ ನವಜಾತ ಶಿಶುಗಳ ವಾರ್ಡ್‌ಗೆ ಪ್ರವೇಶಿಸಲು ಯತ್ನಿಸುತ್ತಿದ್ದ ಕಾಳಿರಾಜ್​ನನ್ನು ಭದ್ರತಾ ಸಿಬ್ಬಂದಿ ಪದ್ಮಾಮತಿ ತಡೆಯಲು ಯತ್ನಿಸಿದರು. ಈ ವೇಳೆ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದೆ.

ಘಟನೆ ತೀವ್ರವಾದ ಬೆನ್ನಲ್ಲೇ ಕುಡುಕ ಸ್ಥಳದಿಂದ ಪರಾರಿಯಾಗಿದ್ದನು. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರು, ಎಫ್‌ಐಆರ್‌ ದಾಖಲಿಸಿಕೊಂಡು, ಕಾಳಿರಾಜ್‌ನನ್ನು ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ,(ಏಜೆನ್ಸೀಸ್).