ಚೆನ್ನೈ: ತಮಿಳುನಾಡಿನ ಮಾಜಿ ಸಿಎಂ, ಪುರುಚ್ಚಿ ತಲೈವಿ ಎಂದೇ ಕರೆಯಲಾಗುತ್ತಿದ್ದ ಜೆ. ಜಯಲಲಿತಾ ಮನೆ ಸ್ಮಾರಕವನ್ನಾಗಿಸಲ್ಲ ಎಂದು ತಮಿಳುನಾಡು ಸರ್ಕಾರ ಹೈಕೋರ್ಟ್ಗೆ ಮಾಹಿತಿ ನೀಡಿದೆ.
ಎಐಎಡಿಎಂಕೆ ನೇತೃತ್ವದ ಸರ್ಕಾರ ಪೋಯಸ್ ಗಾರ್ಡನ್ನಲ್ಲಿರುವ ಮೂರು ಅಂತಸ್ತಿನ ವಿಶಾಲ ಮನೆ ವೇದಾ ನಿಲಯವನ್ನು ಜಯಲಲಿತಾ ನೆನಪಿನಲ್ಲಿ ಸ್ಮಾರಕವಾಗಿಸಲು ಯೋಜನೆ ರೂಪಿಸಿತ್ತು. ಇದಕ್ಕಾಗಿ ಪುರುಚ್ಚಿ ತಲೈವಿ ಡಾ. ಜೆ. ಜಯಲಲಿತಾ ಸ್ಮಾರಕ ಪ್ರತಿಷ್ಠಾನವನ್ನು ರಚಿಸಿತ್ತು.
ಆದರೆ, ಇದಕ್ಕಾಗಿ ಮನೆಯಲ್ಲಿದ್ದವರನ್ನು ತೆರವು ಮಾಡುವುದಿಲ್ಲ, ಯಾವುದೇ ವಸ್ತುಗಳ ಸ್ಥಳಾಂತರಕ್ಕೂ ಅವಕಾಶವಿಲ್ಲ ಎಂದು ಹೇಳಿ ಅಧಿಸೂಚನೆ ಹೊರಡಿಸಿತ್ತು. ಇದಕ್ಕೆ ರಾಜ್ಯಪಾಲ ಭನ್ವಾರಿಲಾಲ್ ಅನುಮೋದನೆ ಕೂಡ ನೀಡಿದ್ದರು.
ಜಯಲಲಿತಾ 2016ರ ಡಿಸೆಂಬರ್ನಲ್ಲಿ ಮೃತಪಟ್ಟಿದ್ದರು. ಆಗಿನಿಂದಲೂ ಮನೆ ಯಾರ ಅಧೀನಕ್ಕೆ ಸೇರಲಿದೆ ಎಂಬ ಬಗ್ಗೆ ಭಾರಿ ಕುತೂಹಲ ಮೂಡಿತ್ತು. ಆಸ್ತಿ ಬಗ್ಗೆ ಕಲಹಗಳು ಉಂಟಾಗಿದ್ದವು. ಜತೆಗೆ ಸ್ಮಾರಕ ಸ್ಥಾಪನೆಗೆ ಹೈಕೋರ್ಟ್ ತಡೆ ನೀಡಿತ್ತು.
ಇದೀಗ, ಸ್ಮಾರಕ ನಿರ್ಮಾಣ ಯೋಜನೆ ಕೈಬಿಟ್ಟಿರುವ ತಮಿಳುನಾಡು ಸರ್ಕಾರ ವೇದಾ ನಿಲಯವನ್ನು ಸಿಎಂ ಅಧಿಕೃತ ನಿವಾಸವನ್ನಾಗಿ ಬಳಸಿಕೊಳ್ಳಲು ನಿರ್ಧರಿಸಿದೆ. ಹೈಕೋರ್ಟ್ಗೆ ಈ ಬಗ್ಗೆ ಮಾಹಿತಿಯನ್ನು ರವಾನಿಸಿದೆ.