ನ್ಯೂಸ್

ತಮಿಳುನಾಡು : ಅರವಕುರಿಚಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಅಣ್ಣಾಮಲೈ ಐಪಿಎಸ್

ನವದೆಹಲಿ: ತಮಿಳುನಾಡು ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಹೊರಬಿದ್ದಿದೆ. ರಾಜ್ಯದಲ್ಲಿ ಎಐಎಡಿಎಂಕೆಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಎನ್​ಡಿಎ ಸರ್ಕಾರ ತರುವ ಅಪೇಕ್ಷೆಯಲ್ಲಿರುವ ಪಕ್ಷವು, 20 ಕ್ಷೇತ್ರಗಳಿಂದ ಚುನಾವಣೆಯಲ್ಲಿ ಸ್ಪರ್ಧಿಸಲಿದೆ. ಇವುಗಳಲ್ಲಿ 17 ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ಅರುಣ್ ಸಿಂಗ್ ಭಾನುವಾರ ಬಿಡುಗಡೆ ಮಾಡಿದ್ದಾರೆ.

ಮಾಜಿ ಐಪಿಎಸ್ ಅಧಿಕಾರಿ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಕೆ.ಅಣ್ಣಾಮಲೈ, ತಮ್ಮ ಸ್ವಕ್ಷೇತ್ರವಾದ ಕರೂರು ಜಿಲ್ಲೆಯ ಅರವಕುರಿಚಿಯಿಂದ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಯುವ ನಾಯಕರಾದ ಅಣ್ಣಾಮಲೈ, ಈಗಾಗಲೇ ಅರವಕುರಿಚಿಯ ಪ್ರವಾಸದಲ್ಲಿ ತೊಡಗಿದ್ದು, ವೈದ್ಯಕೀಯ ಶಿಬಿರ ಮುಂತಾದ ಸಾರ್ವಜನಿಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಮಾರ್ಚ್​ 11 ರಂದು ಇಡೀ ದಿನ ಸುಮಾರು 90 ಕಿಲೋಮೀಟರ್ ಸೈಕಲ್ ಯಾತ್ರೆ ನಡೆಸಿ ಕ್ಷೇತ್ರದ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿದ್ದರು.

ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಮೂರು ಮಹಿಳಾ ಅಭ್ಯರ್ಥಿಗಳಿದ್ದು, ನಟಿ ಖುಷಬೂ ಸುಂದರ್ ತೌಸಂಡ್​ ಲೈಟ್ಸ್​ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ರಾಜ್ಯ ಬಿಜೆಪಿ ಅಧ್ಯಕ್ಷ ಎಲ್.ಮುರುಗನ್ ಧರಂಪುರ ಮೀಸಲು ಕ್ಷೇತ್ರದ ಅಭ್ಯರ್ಥಿಯಾಗಿದ್ದರೆ, ಹಿರಿಯ ನಾಯಕ ಹೆಚ್.ರಾಜ ಕರೈಕುಡಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ