

ಮುಂಬೈ: ಅಜಯ್ ದೇವಗನ್, ಅಕ್ಷಯ್ ಕುಮಾರ್, ಕತ್ರಿನಾ ಕೈಫ್ ಮತ್ತು ರಣವೀರ್ ಕಪೂರ್ ನಟಿಸಿರುವ ಭಾರೀ ಬಜೆಟ್ನ ಹಿಂದಿ ಚಿತ್ರ 'ಸೂರ್ಯವಂಶಿ'ಯ ಬಿಡುಗಡೆ ದಿನಾಂಕ ಕೊನೆಗೂ ಹೊರಬಿದ್ದಿದೆ. ಒಂದು ವರ್ಷದ ಹಿಂದೆ ತೆರೆಕಾಣಬೇಕಿದ್ದ ಚಿತ್ರ, ಕರೊನಾ ಅಪ್ಪಳಿಸಿದ ಹಿನ್ನೆಲೆಯಲ್ಲಿ ಬಿಡುಗಡೆ ಆಗಿರಲಿಲ್ಲ. ಇದೀಗ "ದ ವೇಯ್ಟ್ ಈಸ್ ಫೈನಲಿ ಓವರ್!" ಎನ್ನುತ್ತಾ ಚಿತ್ರದ ನಿರ್ಮಾಪಕ ಕರಣ್ ಜೋಹರ್ 'ಸೂರ್ಯವಂಶಿ' ಚಿತ್ರವು ಏಪ್ರಿಲ್ 30 ರಂದು ಸಿನಿಮಾ ಮಂದಿರಗಳಲ್ಲಿ ತೆರೆಕಾಣಲಿದೆ ಎಂದು ಘೋಷಿಸಿದ್ದಾರೆ.
ಚಿತ್ರದ ನಿರ್ದೇಶಕ ರೋಹಿತ್ ಶೆಟ್ಟಿಯವರ ಜನ್ಮದಿನವಾದ ಇಂದು (ಮಾರ್ಚ್ 14) ಸೂರ್ಯವಂಶಿ ಬಿಡುಗಡೆಯ ದಿನಾಂಕವನ್ನು ಘೋಷಿಸಲಾಗಿದೆ. ಈ ಬಗ್ಗೆ ನಿರ್ಮಾಪಕ ಕರಣ್ ಜೋಹರ್ಗೂ ಮುಂಚೆ ನಟ ಅಕ್ಷಯ್ ಕುಮಾರ್ ಕೂಡ ಟ್ವೀಟ್ ಮಾಡಿದ್ದು, ಚಿತ್ರದ ಕೆಲವು ದೃಶ್ಯಗಳನ್ನು ಒಳಗೊಂಡ ವಿಡಿಯೊ ತುಣುಕನ್ನು ಇಬ್ಬರೂ ಶೇರ್ ಮಾಡಿದ್ದಾರೆ.
"ಆ ರಹಿ ಹೇ ಪೊಲೀಸ್" ಎಂಬುದು ಚಿತ್ರದ ಕಾಚ್ಫ್ರೇಸ್ ಆಗಿದ್ದು, ಮೂವರು ಬಾಲಿವುಡ್ ನಟರು ಪೊಲೀಸ್ ಸಮವಸ್ತ್ರದಲ್ಲಿ ಸ್ಟೈಲಾಗಿ ನಡೆದು ಬರುವ ದೃಶ್ಯ ಆಕರ್ಷಕವಾಗಿದೆ. ಜೊತೆಗೆ ಬಿಳಿಯ ಚೂಡೀದಾರ್ನಲ್ಲಿ ಮುಖ್ಯ ನಟಿ ಕತ್ರೀನಾ ಕೈಫ್ ಕೂಡ ಇದ್ದಾರೆ. ನೀವೂ ಆ ವಿಡಿಯೊ ನೋಡಿ:
ಮಲ್ಟಿ ಸ್ಟಾರರ್ ಆ್ಯಕ್ಷನ್ ಮೂವಿಯಾದ ಸೂರ್ಯವಂಶಿ ಚಿತ್ರದ ಬಿಡುಗಡೆ ದಿನಾಂಕದ ಘೋಷಣೆ ಅಭಿಮಾನಿಗಳಿಗೆ ರೋಚಕ ಸುದ್ದಿಯಾಗಿದೆ. ಒಂದು ವರ್ಷದ ಹಿಂದೆ ಈ ಚಿತ್ರದ ಬಿಡುಗಡೆ 2020 ರ ಮಾರ್ಚ್ 24 ಕ್ಕೆ ಬಿಡುಗಡೆ ನಿಗದಿಯಾಗಿದ್ದು ಕೊನೇ ಕ್ಷಣದಲ್ಲಿ ಸ್ಥಗಿತಗೊಂಡಿತ್ತು. ಇದೀಗ ಪೂರ್ಣ ಸಾಮರ್ಥ್ಯದಲ್ಲಿ ಚಿತ್ರಮಂದಿರಗಳನ್ನು ನಡೆಸಲು ಸರ್ಕಾರ ಅನುಮತಿಸಿದ ನಂತರ, ಚಿತ್ರದ ಬಿಡುಗಡೆಗೆ ಸಕಾಲ ಬಂದಿದೆ ಎಂದಿದ್ದಾರೆ.
"ನಮ್ಮ ಧಮಾಕೇದಾರ್ ಚಿತ್ರಕ್ಕಾಗಿ ಇಡೀ ತಂಡಕ್ಕೆ ಶುಭ ಹಾರೈಸುತ್ತೇನೆ ಮತ್ತು ಬರ್ತ್ಡೇ ಬಾಯ್ ರೋಹಿತ್ ಶೆಟ್ಟಿಗೆ ನನ್ನ ಪ್ರೀತಿ. ನಿಮ್ಮೊಂದಿಗೆ ಕೆಲಸ ಮಾಡುವುದು ಯಾವಾಗಲೂ ಒಂದು ಬ್ಲಾಸ್ಟ್ !" ಎಂದು ಕರಣ್ ಜೋಹರ್ ಹೇಳಿದ್ದಾರೆ. "ಸೂರ್ಯವಂಶಿಯನ್ನು ಚಿತ್ರಮಂದಿರದಲ್ಲಿ ನೋಡುವ ಅನುಭವ ನೀಡುತ್ತೇವೆಂದು ಪ್ರಾಮಿಸ್ ಮಾಡಿದ್ದೆವು. ಇದೀಗ ನಿಮ್ಮ ಪ್ರತೀಕ್ಷೆಯ ಕ್ಷಣಗಳು ಮುಗಿದಿವೆ. ಆ ರಹಿ ಹೇ ಪೊಲೀಸ್!" ಎಂದು ಅಕ್ಷಯ್ಕುಮಾರ್ ಟ್ವೀಟ್ ಮಾಡಿದ್ದಾರೆ. (ಏಜೆನ್ಸೀಸ್) ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ