ಹೇಗ್ಹೇಗೋ ಮುಟ್ಟುತ್ತಾ 'ಪರೀಕ್ಷೆ' ನಡೆಸುತ್ತಿದ್ದ ನರ್ಸಿಂಗ್ ಇನ್ಸ್​​ಟಿಟ್ಯೂಟ್ ಮುಖ್ಯಸ್ಥನ ಬಂಧನ

molest
Published on

ರಾಂಚಿ : 'ಸಹಿಷ್ಣುತೆಯ ಮಟ್ಟ ಪರೀಕ್ಷಿಸುವ' ನೆಪದಲ್ಲಿ ನರ್ಸಿಂಗ್ ವಿದ್ಯಾರ್ಥಿನಿಯರನ್ನು ಹೇಗೆಹೇಗೋ ಮುಟ್ಟುತ್ತಾ ಲೈಂಗಿಕ ಶೋಷಣೆ ಮಾಡುತ್ತಿದ್ದ ಎನ್​ಜಿಒ ಒಂದರ ನಿರ್ದೇಶಕನನ್ನು ಜಾರ್ಖಂಡ್ ಪೊಲೀಸರು ಬಂಧಿಸಿದ್ದಾರೆ. ತನ್ನ ಎನ್​ಜಿಒ ನಡೆಸುತ್ತಿದ್ದ ನರ್ಸಿಂಗ್ ಇನ್ಸ್​​ಟಿಟ್ಯೂಟ್​ನ ವಿದ್ಯಾರ್ಥಿನಿಯರಿಗೆ ದೀರ್ಘ ಕಾಲದಿಂದ ಲೈಂಗಿಕ ಕಿರುಕುಳ ನೀಡುತ್ತಿದ್ದ ಬಬ್ಲು ಅಲಿಯಾಸ್ ಪರ್ವೇಜ್ ಆಲಂ ಎಂಬುವನೇ ಆ ಕಾಮುಕ.

ಜಾರ್ಖಂಡ್​ನ ಖುಂಟಿ ಜಿಲ್ಲೆಯ ಟಿರ್ಲಾದಲ್ಲಿರುವ ನರ್ಸಿಂಗ್ ಇನ್ಸ್​ಟಿಟ್ಯೂಟ್​ನ ಹಲವು ವಿದ್ಯಾರ್ಥಿನಿಯರು ಸಂಸ್ಥೆಯ ನಿರ್ದೇಶಕ ಬಬ್ಲು ತಮಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪಿಸಿದ್ದಾರೆ. ಸಂತ್ರಸ್ತರ ಪ್ರಕಾರ, ಆರೋಪಿಯು ವಿದ್ಯಾರ್ಥಿಗಳನ್ನು ಹಿಡಿದುಕೊಂಡು ಅವರ 'ಸಹಿಷ್ಣುತೆಯ ಪರೀಕ್ಷೆ' ನಡೆಸುವೆ ಎಂದು, ಎಲ್ಲೆಲ್ಲೋ ಮುಟ್ಟುತ್ತಾ ಅವರ ಬಟ್ಟೆಯ ಒಳಗೆ ಕೈ ಹಾಕುತ್ತಿದ್ದ ಎನ್ನಲಾಗಿದೆ.

ಈ ರೀತಿಯಾಗಿ ಅವನು ನರ್ಸಿಂಗ್​ ಟ್ರೈನಿಗಳನ್ನು ದೀರ್ಘ ಕಾಲದಿಂದ ಟಾರ್ಗೆಟ್ ಮಾಡುತ್ತಾ ಬಂದಿದ್ದು, ವಿದ್ಯಾರ್ಥಿನಿಯರು ಇತ್ತೀಚೆಗೆ ತಮ್ಮ ಕಷ್ಟವನ್ನು ಸಾಮಾಜಿಕ ಕಾರ್ಯಕರ್ತರೊಂದಿಗೆ ಹಂಚಿಕೊಂಡಾಗ ವಿಚಾರ ಬೆಳಕಿಗೆ ಬಂದಿದೆ. ವಿದ್ಯಾರ್ಥಿನಿಯರು ನೀಡಿದ ಮೌಖಿಕ ದೂರಿನ ಆಧಾರದ ಮೇಲೆ ಸಾಮಾಜಿಕ ಕಾರ್ಯಕರ್ತೆಯಾದ ಲಕ್ಷ್ಮಿ ಬಖ್ಲಾ ಎಂಬುವರು ರಾಜ್ಯಪಾಲರಿಗೆ ಪತ್ರ ಬರೆದರು.

ಪತ್ರವನ್ನು ಆಧರಿಸಿ ಬ್ಲಾಕ್ ಡೆವಲಪ್​ಮೆಂಟ್ ಆಫೀಸರ್​(ಬಿಡಿಒ) ನೇತೃತ್ವದಲ್ಲಿ ತನಿಖೆ ನಡೆಸಿದ್ದು, ಸ್ಥಳೀಯ ಮಹಿಳಾ ಪೊಲೀಸ್ ಠಾಣೆಯ ತಂಡವೊಂದು ಇನ್ಸ್​​ಟಿಟ್ಯೂಟ್​ಗೆ ಭೇಟಿ ನೀಡಿತು. ಭೇಟಿಯ ನಂತರ ಸಲ್ಲಿಸಿದ ತನಿಖಾ ವರದಿಯ ಆಧಾರದ ಮೇಲೆ ಬಬ್ಲು ವಿರುದ್ಧ ಮೊಕದ್ದಮೆ ದಾಖಲಿಸಿ ಬಂಧಿಸಲಾಗಿದೆ ಎಂದು ಖುಂಟಿ ಎಸ್ಪಿ ಆಶುತೋಶ್ ಶೇಖರ್​​ ತಿಳಿಸಿದ್ದಾರೆ.(ಏಜೆನ್ಸೀಸ್) ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net