ನ್ಯೂಸ್

Bigg Boss ಮನೆಗೆ ಎಂಟ್ರಿ ಕೊಟ್ಟ ಟಾಕಿಂಗ್​ ಸ್ಟಾರ್​; ಈ ವಾರ ಮನೆಯಿಂದ ಆಚೆ ಹೋಗಿದ್ದು ಯಾರು ಗೊತ್ತಾ?

ಬೆಂಗಳೂರು: ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್​ಬಾಸ್​ 11ನೇ ಆವೃತ್ತಿ (Bigg Boss 11th Season) ಶುರುವಾಗಿ ಇಂದಿಗೆ (ಅಕ್ಟೋಬರ್ 27) ನಾಲ್ಕು ವಾರಗಳು ಕಳೆದಿದ್ದು, ಸಾಕಷ್ಟು ವಿವಾದ ಹಾಗೂ ಸ್ಫರ್ಧಿಗಳ ನಡುವಿನ ಜಗಳದಿಂದಲೇ ಹೆಚ್ಚು ಸುದ್ದಿಯಾಗಿದೆ. ಈಗಾಗಲೇ ಕಾರ್ಯಕ್ರಮ ಸಾಕಷ್ಟು ಜನಮನ್ನಣೆ ಪಡೆದಿದ್ದು, ಶನಿವಾರದ ಸಂಚಿಕೆಯಲ್ಲಿ ಖ್ಯಾತ ನಟ, ನಿರ್ದೇಶಕ ಯೋಗರಾಜ್​ ಭಟ್​ ಅವರ ಆಗಮಿಸಿ ಸ್ಫರ್ಧಿಗಳ ಜೊತೆ ಸಮಯ ಕಳೆದಿದ್ದರು. ಇಂದಿನ ಸಂಚಿಕೆಯಲ್ಲಿ ಟಾಕಿಂಗ್​ ಸ್ಟಾರ್​ ಸೃಜನ್​ ಲೋಕೇಶ್​ (Srujan Lokesh) ಅವರ ಆಗಮನವಾಗಿದೆ.

ಮಾತೃ ವಿಯೋಗದಿಂದ ಈ ವಾರ ನಿರೂಪಕ ಸುದೀಪ್​ ಅವರು ವಾರದ ಕತೆಯನ್ನು ನಡೆಸಿಕೊಡುತ್ತಿಲ್ಲ. ಈ ಕಾರಣಕ್ಕೆ ಬಿಗ್​ಬಾಸ್​ (Bigg Boss) ಮನೆಗೆ ಶನಿವಾರದ ಸಂಚಿಕೆಯಲ್ಲಿ ಯೋಗರಾಜ್​ ಭಟ್​ ಅವರನ್ನು ಹಾಗೂ ಭಾನುವಾರದ ಎಪಿಸೋಡ್​ನಲ್ಲಿ ಸೃಜನ್​ ಲೋಕೇಶ್​ ಅವರನ್ನು ಈ ವಾರದ ಪಂಚಾಯ್ತಿ ನಡೆಸಿಕೊಡಲು ವಾಹಿನಿ ಕಳಿಸಿಕೊಟ್ಟಿದ್ದು,ಶನಿವಾರದ ಸಂಚಿಕೆಯಲ್ಲಿ ಮನೆಯ ಸದಸ್ಯರ ಕೈಲಿ ಕೆಲವು ತಮಾಷೆಯ ಟಾಸ್ಕ್​ಗಳನ್ನು ಮಾಡಿದ್ದರು. ಕೆಲವರಿಗೆ ಬುದ್ಧಿವಾದ ಹೇಳಿದ್ದರು. ಭಾನುವಾರದ ಎಪಿಸೋಡ್​ಗೆ ಸೃಜನ್ ಬಂದಿದ್ದು, ಪ್ರೋಮೋ ನೋಡಿ ಪ್ರೇಕ್ಷಕರು ಭರ್ಜರಿ ಮನರಂಜನೆ ಫಿಕ್ಸ್​ ಎಂದು ಹೇಳುತ್ತಿದ್ದಾರೆ.

ಈ ಹಿಂದೆ ಸೃಜನ್​ ಲೋಕೇಶ್​ ಬಿಗ್​ಬಾಸ್​ (Bigg Boss) ಎರಡನೇ ಆವೃತ್ತಿಯ ರನರ್​ಅಪ್​ ಆಗಿದ್ದರು. ಇದಲ್ಲದೆ ಕಲರ್ಸ್​ ವಾಹಿನಿಯಲ್ಲಿ ಹಲವು ರಿಯಾಲಿಟಿ ಶೋಗಳನ್ನು ನಡೆಸುತ್ತಿದ್ದಾರೆ. 11ನೇ ಆವೃತ್ತಿಯಲ್ಲಿ ಅತಿಥಿಯಾಗಿ ಬಂದಿರುವ ಸೃಜನ್  ತಮ್ಮೊಟ್ಟಿಗೆ ಎರಡು ಟಾಟಾ ಕರ್ವ್ ಕಾರುಗಳನ್ನು ಸಹ ತಂದಿದ್ದರು. ಮನೆಗೆ ಬಂದಿದ್ದ ಖಾಲಿ ಕಾರುಗಳು ಎಲಿಮಿನೇಟ್ ಆದ ಒಬ್ಬ ಸ್ಪರ್ಧಿಯನ್ನು ಮನೆಯಿಂದ ಹೊರಗೆ ಕರೆದುಕೊಂಡು ಹೋಗಿವೆ.  ಮೊದಲಿಗೆ ಸ್ಪರ್ಧಿಗಳಿಗೆ ವಿವಿಧ ಟಾಸ್ಕ್​ಗಳನ್ನು ನೀಡಿದ್ದಾರೆ. ಕೆಲವು ತಮಾಷೆಯ ಆಟಗಳನ್ನು ಆಡಿಸಿದ್ದಾರೆ. ಆ ನಂತರ ಮನೆಯಿಂದ ಯಾರು ಹೊರಗೆ ಹೋಗಬೇಕು ಮತ್ತು ಏಕೆ ಎಂದು ಕಾರಣ ನೀಡಿ ಎಂದು ಸ್ಪರ್ಧಿಗಳಲ್ಲಿ ಹೇಳಿದ್ದಾರೆ.​ ಬಳಿಕ ಸ್ಫರ್ಧಿಗಳ ಅಭಿಪ್ರಾಯ ಕೇಳಿರುವ ಸೃಜನ್​ ಮತಗಳ ಆಧಾರದ ಮೇಲೆ ಒಬ್ಬ ಸ್ಪರ್ಧಿಯನ್ನು ಇಂದು ಬಿಗ್​ಬಾಸ್ ಮನೆಯಿಂದ ಎಲಿಮಿನೇಟ್​ ಮಾಡಲಾಗಿದೆ. ಸುದ್ದಿ ಮೂಲಗಳ ಪ್ರಕಾರ ಮಾನಸ ಅವರು ಮನೆಯಿಂದ ಎಲಿಮಿನೇಟ್ ಆಗಿದ್ದಾರೆ ಎಂದು ಹೇಳಲಾಗಿದ್ದು, ಈ ಬಗ್ಗೆ ಇನ್ನಷ್ಟೇ ಅಧಿಕೃತವಾಗಬೇಕಿದೆ.

ಮಾತೃವಿಯೋಗದಿಂದ ನಿರೂಪಕ ಸುದೀಪ್​ ಕಳೆದ ವಾರ ಶೋ ನಡೆಸಿಕೊಟ್ಟಿರಲಿಲ್ಲ. ಹೀಗಾಗಿ ಎಲಿಮಿನೇಷನ್​ ಆಗಿರಲಿಲ್ಲ. ಇದಲ್ಲದೆ ಸ್ಫರ್ಧಿಗಳ ನಡುವಿನ ಜಗಳದಿಂದಾಗಿ ಜಗದೀಶ್​ ಹಾಗೂ ರಂಜಿತ್​ ಮನೆಯಿಂದ ಎಲಿಮಿನೇಟ್​ ಆಗಿದ್ದರು. ಈ ವಾರವೂ ಸಹ ಸುದೀಪ್ ಅವರು ಬರಲಿಲ್ಲವಾದ್ದರಿಂದ ಈ ವಾರವೂ ಯಾರೂ ಎಲಿಮಿನೇಟ್ ಆಗಲ್ಲ ಎಂದು ಪ್ರೇಕ್ಷಕರು ನಿರೀಕ್ಷಿಸಿದ್ದರು. ಆದರೆ ಈ ವಾರ ಎಲಿಮಿನೇಷನ್ ನಡೆದಿದೆ. ಆದರೆ ಯಾರು ಎಲಿಮಿನೇಟ್ ಆಗಿದ್ದಾರೆ ಎಂದು ತಿಳಿಯಲು ಇಂದಿನ ಸಂಚಿಕೆ ಪ್ರಸಾರವಾಗುವವರೆಗೂ ಕಾದು ನೋಡಬೇಕಿದೆ.