ನ್ಯೂಸ್

ಪಾಕ್ ಗೆ ಕುನಾರ್ ನೀರು ನಿರ್ಬಂಧಕ್ಕೆ ಮುಂದಾದ ತಾಲಿಬಾನ್ : ಅಣೆಕಟ್ಟು ನಿರ್ಮಿಸಲು ಚಿಂತನೆ Kunar river

ಕಾಬೂಲ್: ತಾಲಿಬಾನ್ ಆಳ್ವಿಕೆಯ ಅಫ್ಘಾನಿಸ್ತಾನವು ಪಾಕಿಸ್ತಾನಕ್ಕೆ ( Kunar river) ಹರಿಯುವ ನದಿಗಳ ನೀರನ್ನು ನಿಯಂತ್ರಿಸಲು ಅಣೆಕಟ್ಟುಗಳನ್ನು ನಿರ್ಮಿಸಲು ಯೋಜನೆ ನಡೆಸುತ್ತಿದೆ ಎಂದು ಅಫ್ಘಾನ್ ಮಾಹಿತಿ ಸಚಿವಾಲಯ ಅಧೀಕೃತವಾಗಿ ಶುಕ್ರವಾರ (ಅ.24) ಆದೇಶ ಹೊರಡಿಸಿದೆ ಎಂದು ವರದಿಯಾಗಿದೆ.

ಕುನಾರ್ ನದಿಗೆ ಸಾಧ್ಯವಾದಷ್ಟು ಬೇಗ ಅಣೆಕಟ್ಟು ನಿರ್ಮಿಸುವುದಾಗಿ ತಾಲಿಬಾನ್ ಸರ್ವೋಚ್ಚ ನಾಯಕ ಮೌಲವಿ ಹಿಬತುಲ್ಲಾ ಅಖುಂಡ್ಜಾದಾ ತಿಳಿಸಿದ್ದಾರೆ. ಇದು ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಯುದ್ಧದ ಸಮಯದಲ್ಲಿ ನೂರಾರು ಜನರು ಸಾವನ್ನಪ್ಪಿದ ನಂತರ ಈ ಆದೇಶ ಹೊರಬಿದ್ದಿದೆ.

ಪಾಕಿಸ್ತಾನದೊಂದಿಗೆ ನೀರು ಹಂಚಿಕೆ ಕುರಿತು ಭಾರತ ಸರ್ಕಾರ ತೆಗೆದುಕೊಂಡ ರೀತಿಯಲ್ಲೇ ಅಫ್ಘಾನಿಸ್ತಾನ ಈ ನಿರ್ಧಾರ ತೆಗೆದುಕೊಂಡಿದೆ. ಏಪ್ರಿಲ್ 22 ರಂದು ಪಹಲ್ಗಾಮ್‌ ದಾಳಿಯಲ್ಲಿ ಪಾಕಿಸ್ತಾನಿ ಉಗ್ರಗಾಮಿಗಳು 26 ನಾಗರಿಕರನ್ನು ಕೊಂದ ನಂತರ, 3 ಪಶ್ಚಿಮ ನದಿಗಳ ನೀರನ್ನು ಹಂಚಿಕೊಳ್ಳುವ ಸಿಂಧೂ ನದಿ ಜಲ ಒಪ್ಪಂದವನ್ನು ಭಾರತ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು.

ಈ ವಿಚಾರದ ಬಗ್ಗೆ ಅಫ್ಘಾನಿಸ್ತಾನದ ಮಾಹಿತಿ ಉಪ ಸಚಿವ ಮುಹಾಜರ್ ಫರಾಹಿ ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಮಾಡಿದ್ದು, ಕುನಾರ್​ ನದಿಗೆ ಅಣೆಕಟ್ಟು ನಿರ್ಮಾಣವನ್ನು ಸಾಧ್ಯವಾದಷ್ಟು ಬೇಗ ಪ್ರಾರಂಭಿಸಲು ಮತ್ತು ವಿದೇಶಿ ಕಂಪನಿಗಳಿಗಾಗಿ ಕಾಯದೆ ಸ್ಥಳೀಯ ಕಂಪನಿಗಳೊಂದಿಗೆ ಒಪ್ಪಂದಗಳಿಗೆ ಸಹಿ ಹಾಕಲು ಜಲ ಮತ್ತು ಇಂಧನ ಸಚಿವಾಲಯಕ್ಕೆ ಸೂಚನೆ ನೀಡಲಾಗಿದೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

ಕುನಾರ್ ನದಿ ಮತ್ತು ಅದರ ಮಹತ್ವ

ಕುನಾರ್ ನದಿ, ಆಫ್ಘಾನಿಸ್ಥಾನದ ಪೂರ್ವ ಭಾಗದಲ್ಲಿ ಹರಿಯುವ ಮುಖ್ಯ ನದಿಯಾಗಿದೆ. ಇದನ್ನು ಚಿತ್ರಾಲ್ ನದಿ ಎಂದು ಕರೆಯಲ್ಪಡುತ್ತಾರೆ. ಇದು ಒಟ್ಟು 480 ಕಿ.ಮೀ. ಉದ್ದದ ನದಿಯು ಹಿಂದೂಕುಶ್ ಪರ್ವತಗಳ ಶ್ರೇಣಿಯಿಂದ ಆರಂಭವಾಗಿ, ಆಫ್ಘಾನಿಸ್ಥಾನದ ಕುನಾರ್ ಪ್ರದೇಶವನ್ನು ಹಾದು ಹೋಗಿ, ಜಲಾಲಾಬಾದ್ ಬಳಿ ಕಾಬುಲ್ ನದಿಗೆ ಸೇರುತ್ತದೆ. ನಂತರ ಪಾಕಿಸ್ಥಾನದ ಕೈಬರ್ ಪಖ್ತೂನ್ವಾ ಪ್ರದೇಶವನ್ನು ದಾಟಿ ಇಂಡಸ್ ನದಿಗೆ ಸೇರುತ್ತದೆ.

ಕುನಾರ್ ನದಿಯ ನೀರು ಆಫ್ಘಾನ್‌ನ ಕೃಷಿ ಜೀವನಾಡಿಯಾಗಿದ್ದು, ಗೋಧಿ, ಅಕ್ಕಿ, ಹಣ್ಣುಗಳಂತಹ ಬೆಳೆಗಳಿಗೆ ನೀರಾವರಿ ನೀಡುತ್ತದೆ. ರೈತರ ಆರ್ಥಿಕತೆಯನ್ನು ಬೆಂಬಲಿಸುತ್ತದೆ. ಇದು ಹೈಡ್ರೋಪವರ್‌ಗೆ ಸಾಧ್ಯತೆಯಿದ್ದು, ಪರಿಸರದ ವೈವಿಧ್ಯತೆಯನ್ನು ಕಾಪಾಡಲು ಸಹಾಯ ಮಾಡುತ್ತದೆ.

ಪಾಕಿಸ್ತಾನಕ್ಕೆ ಹರಿಯುವ ಕಾಬೂಲ್ ಮತ್ತು ಕುನಾರ್ ನದಿಗಳು ಬಹಳ ಹಿಂದಿನಿಂದಲೂ ಪಾಕಿಸ್ತಾನದ ನೀರಿನ ಮೂಲಗಳಾಗಿವೆ ಎಂದು ಸಾಮಿ ಯೂಸಫ್‌ಜೈ ಮಾಜಿ ಪೋಸ್ಟ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. (ಏಜೆನ್ಸೀಸ್​)