ಬೀಡ್: ಕಠಿಣ ಪರಿಶ್ರಮ ಹಾಗೂ ಸಾಧಿಸುವ ಛಲ ಒಂದಿದ್ದರೆ ಏನನ್ನು ಬೇಕಾದರೂ ಜಯಿಸಬಹುದು ಎಂಬುದಕ್ಕೆ ನಮ್ಮ ಕಣ್ಣ ಮುಂದೆ ಹಲವು ನಿದರ್ಶನಗಳಿವೆ. ಈ ಮಾತನ್ನು ಯುವಕನೋರ್ವ ಅಕ್ಷರಶಃ ನಿಜ ಎಂದು ತೋರಿಸಿಕೊಟ್ಟಿದ್ದು, ಈತನ ಸಾಧನೆಗೆ ಮೆಚಚಿ ಇಡೀ ಊರಿಗೆ ಊರೇ ಸಂಭ್ರಮಿಸಿರುವ ಘಟನೆ ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಪರಲಿ ತಾಲ್ಲೂಕಿನಲ್ಲಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ಕೃಷ್ಣ ನಾಮ್ದೇವ್ ಮುಂಡೆ ಎಂಬ ಹೆಸರಿನ ವ್ಯಕ್ತಿಯು 2018ರಲ್ಲಿ 10ನೇ ತರಗತಿ ಅನುತ್ತೀರ್ಣರಾಗಿದ್ದ. ಯುವಕ ಪ್ರತಿ ಬಾರಿಯೂ ಎಸ್ಎಸ್ಎಲ್ಸಿ ಬೋರ್ಡ್ ಪರೀಕ್ಷೆ ಬರೆದಾಗಲೂ ಅನುತ್ತೀರ್ಣನಾಗುತ್ತಿದ್ದ. ತಾಳ್ಮೆ ಕಳೆದುಕೊಳ್ಳದೆ, ಪರೀಕ್ಷೆಯಲ್ಲಿ ಪಾಸ್ ಆಗೇ ಆಗುತ್ತೇನೆ ಎಂದು ಛಲ ಬಿಡದೆ ಸತತವಾಗಿ ಪರೀಕ್ಷೆ ಬರೆದು ತನ್ನ ಹನ್ನೊಂದನೇ ಪ್ರಯತ್ನದಲ್ಲಿ 10 ನೇ ತರಗತಿ ಪರೀಕ್ಷೆಯನ್ನು ಪಾಸ್ ಮಾಡಿದ್ದಾನೆ. ಈತ ಪರಲಿ ತಾಲ್ಲೂಕಿನ ರತ್ನೇಶ್ವರ ಶಾಲೆಯ ವಿದ್ಯಾರ್ಥಿ ಎಂದು ತಿಳಿದು ಬಂದಿದೆ.
ಈತ ಪ್ರತಿ ಬಾರಿ ಪರೀಕ್ಷೆ ಬರೆದಾಗಲೂ ಫೇಲ್ ಆಗುತ್ತಿದ್ದ. 10 ನೇ ಬಾರಿ ಬರೆದ ಪರೀಕ್ಷೆಯಲ್ಲಿ ಆತ ಇತಿಹಾಸ ವಿಷಯದಲ್ಲಿ ಫೇಲ್ ಆಗಿದ್ದ. ಆದರೆ 11 ನೇ ಪ್ರಯತ್ನದಲ್ಲಿ ಕೃಷ್ಣ ಎಲ್ಲಾ ವಿಷಯಗಳಲ್ಲೂ ಉತ್ತಮ ಅಂಗಗಳೊಂದಿಗೆ ತೇರ್ಗಡೆಯಾಗಿದ್ದಾನೆ. ಕೃಷ್ಣನ ಈ ಯಶಸ್ಸನ್ನು ಆತನ ಕುಟುಂಬ ಮಾತ್ರವಲ್ಲದೇ ಇಡೀ ಗ್ರಾಮವೇ ಸಂಭ್ರಮಿಸಿದೆ. ಆತನ ತಂದೆ ಹಾಗೂ ಗ್ರಾಮಸ್ಥರು ಡೋಲು ಬಾರಿಸುತ್ತಾ ಕೃಷ್ಣನನ್ನು ಹೆಗಲ ಮೇಲೆ ಹೊತ್ತು ಮೆರವಣಿಗೆ ಮಾಡುವ ಮೂಲಕ ಖುಷಿಯನ್ನು ಸಂಭ್ರಮಿಸಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹಲವರು ಯುವಕನ ಪರಿಶ್ರಮಕ್ಕೆ ಮೆಚ್ಚುಗೆಯನ್ನು ಸೂಚಿಸಿದ್ದಾರೆ. ಛಲ ಒಂದಿದ್ದರೆ ಸಾಕು ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಈತನೇ ಜೀವಂತ ಉದಾಹರಣೆ ಎಂದು ಕಮೆಂಟ್ ಮಾಡಿ ಶ್ಲಾಘಿಸಿದ್ದಾರೆ.