ನ್ಯೂಸ್

ಸ್ಟಾರ್​ ಮಕ್ಕಳನ್ನು ನೋಡಿಕೊಳ್ಳಲು ಈಕೆ 2.5 ಲಕ್ಷ ರೂ. ಪಡೆಯುತ್ತಾರಾ? ಕೊನೆಗೂ ಸಂಬಳ ರಹಸ್ಯ ಬಿಚ್ಚಿಟ್ಟ ಲಲಿತಾ!

ನವದೆಹಲಿ: ಸೈಫ್​ ಅಲಿ ಖಾನ್​ ಮತ್ತು ಕರೀನಾ ಕಪೂರ್​​​ ಮಕ್ಕಳಾದ ತೈಮೂರ್​ ಮತ್ತು ಜೆಹ್​ ಅಲಿ ಖಾನ್​ ಕೇರ್​ಟೇಕರ್​ ಆಗಿರುವ ಹಾಗೂ ಮುಕೇಶ್​ ಅಂಬಾನಿ ಪುತ್ರ ಅನಂತ್​ ಅಂಬಾನಿಯನ್ನು ಬಾಲ್ಯದಲ್ಲಿ ನೋಡಿಕೊಳ್ಳುತ್ತಿದ್ದ ನರ್ಸ್​ ಲಲಿತಾ ಡಿಸಿಲ್ವಾ​ ಅವರು ಇತ್ತೀಚೆಗಷ್ಟೇ ಸೆಲೆಬ್ರಿಟಿಗಳ ಜತೆಗಿನ ತಮ್ಮ ಕೆಲಸದ ಅನುಭವವನ್ನು ಮಾಧ್ಯಮಗಳ ಬಳಿ ಹಂಚಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ 2.5 ಲಕ್ಷ ರೂಪಾಯಿ ಸಂಬಳದ ವದಂತಿಗೂ ತೆರೆ ಎಳೆದಿದ್ದಾರೆ.

ಹಿಂದಿಯ ರಶ್‌ ಮಾಧ್ಯಮದೊಂದಿಗೆ ನಡೆದ ಸಂದರ್ಶನದಲ್ಲಿ ಲಲಿತಾ ಮುಕ್ತವಾಗಿ ಮಾತನಾಡಿದ್ದಾರೆ. ಸ್ಟಾರ್ ಮಕ್ಕಳನ್ನು ನೋಡಿಕೊಳ್ಳುವಾಗ ಎಷ್ಟು ಸಂಭಾವನೆ ಪಡೆದಿದ್ದಾರೆ ಮತ್ತು 2.5 ಲಕ್ಷ ರೂ. ಸಂಬಳ ನಿಜವಾದ ಸಂಬಳವೇ ಎಂದು ಪ್ರಶ್ನಿಸಲಾಯಿತು. ಇದಕ್ಕೆ ಉತ್ತರಿಸಿದ ಲಲಿತಾ, 2.5 ಲಕ್ಷ ರೂಪಾಯಿನಾ? ನಾನು ನಿಜಕ್ಕೂ ಬಯಸುತ್ತೇನೆ. ನಿಮ್ಮ ಮಾತುಗಳು ನಿಜವಾಗಲಿ ಎಂದು ಹೇಳುತ್ತಾ ಜಾಲತಾಣದಲ್ಲಿ ಹರಿದಾಡುತ್ತಿರುವ 2.5 ಲಕ್ಷ ರೂ. ಸಂಬಳ ಕೇವಲ ವದಂತಿಯಷ್ಟೇ ಎಂದು ಸ್ಪಷ್ಟಪಡಿಸಿದರು. ಆದರೆ, ನಿಜವಾದ ಸಂಬಳ ಎಷ್ಟು ಎಂಬುದನ್ನು ಬಹಿರಂಗಪಡಿಸಲಿಲ್ಲ.

ನಂತರ ಲಲಿತಾ ಅವರು ಸೈಫ್ ಮತ್ತು ಕರೀನಾ ಬಗ್ಗೆ ಮಾತನಾಡಿದರು. ಇಬ್ಬರು ತುಂಬಾ ಸರಳ ಜನರು. ಅವರ ಬೆಳಗಿನ ದಿನಚರಿ ಅಂದರೆ, ಮನೆಯ ಸಿಬ್ಬಂದಿ, ಕರೀನಾ ಮತ್ತು ಸೈಫ್ ಎಲ್ಲರೂ ಒಂದೇ ರೀತಿಯ ಆಹಾರವನ್ನು ಸೇವಿಸುತ್ತಾರೆ. ಸಿಬ್ಬಂದಿಗೆ ಅಂತ ಪ್ರತ್ಯೇಕವಾದ ಆಹಾರವಿಲ್ಲ. ಒಂದೇ ಆಹಾರ ಮತ್ತು ಒಂದೇ ಗುಣಮಟ್ಟ ಇರುತ್ತದೆ. ಎಷ್ಟೋ ಬಾರಿ ನಾವೆಲ್ಲರೂ ಒಟ್ಟಿಗೆ ಊಟ ಮಾಡಿದ್ದೇವೆ ಎಂದು ಲಲಿತಾ ಹೇಳಿದರು.

ಕರೀನಾ ಅವರು ಓರ್ವ ಅದ್ಭುತ ತಾಯಿ ಎಂದು ಇದೇ ಸಂದರ್ಭದಲ್ಲಿ ಲಲಿತಾ ಶ್ಲಾಘಿಸಿದರು. ಕರೀನಾ ಅವರು ತುಂಬಾ ಶಿಸ್ತಿನವರು. ಮಕ್ಕಳಲ್ಲೂ ಸಹ ಅದೇ ಶಿಸ್ತು ಇದೆ. ಕರೀನಾ ಅವರು ಸಮಯಪಾಲನೆ ಮಾಡುತ್ತಾರೆ ಮತ್ತು ಮಕ್ಕಳಿಗೂ ನಿತ್ಯದ ವೇಳಾಪಟ್ಟಿಯನ್ನು ಸಿದ್ಧಪಡಿಸುತ್ತಾರೆ. ಮಕ್ಕಳೊಂದಿಗೆ ಎಷ್ಟು ಸಾಧ್ಯವೋ ಅಷ್ಟು ಸಮಯವನ್ನು ಕಳೆಯಲು ಪ್ರಯತ್ನಿಸುತ್ತಾರೆ. ನಾವು ಆಗಾಗ ತೈಮೂರ್ ಮತ್ತು ಜೆಹ್ ಅವರನ್ನು ಶೂಟಿಂಗ್‌ ಸ್ಥಳಕ್ಕೆ ಕರೆದೊಯ್ಯುತ್ತೇವೆ. ಕರೀನಾ ಅವರ ವಿರಾಮದ ಸಮಯದಲ್ಲಿ ನಾವು ಒಟ್ಟಿಗೆ ಊಟ ಮಾಡುತ್ತೇವೆ ಎಂದು ಲಲಿತಾ ಹೇಳಿದರು.

ಇನ್ನು ಸೈಫ್ ಅವರು ತಮ್ಮ ಮಕ್ಕಳೊಂದಿಗೆ ತುಂಬಾ ಬೆರೆಯುತ್ತಾರೆ ಮತ್ತು ಸಾಕಷ್ಟು ಸಮಯ ಕಳೆಯುತ್ತಾರೆ ಎಂದು ಲಲಿತಾ ಹೇಳಿದರು. ಕರೀನಾ ಅವರು ತಮ್ಮ ಪತಿ ಸೈಫ್ ಅಲಿ ಖಾನ್ ಜೊತೆಗೆ ಆಗಾಗ ತೈಮೂರ್ ಮತ್ತು ಜೆಹ್ ಇಬ್ಬರನ್ನು ವಿಹಾರಕ್ಕೆ ಕರೆದುಕೊಂಡು ಹೋಗುತ್ತಾರೆ. ಸೈಫ್ ಮತ್ತು ಕರೀನಾ ಇಬ್ಬರೂ ತಮ್ಮ ಕೆಲಸ ಮತ್ತು ಮನೆಯ ಜೀವನವನ್ನು ತಮ್ಮ ಮಕ್ಕಳೊಂದಿಗೆ ಬ್ಯಾಲೆನ್ಸ್​ ಮಾಡಲು ಶ್ರಮಿಸುತ್ತಾರೆ ಎಂದು ಲಲಿತಾ ತಿಳಿಸಿದರು. (ಏಜೆನ್ಸೀಸ್​)