ನ್ಯೂಸ್

ಬಿಜೆಪಿ ಶಿಸ್ತಿನ ನಡೆ ಸಸ್ಪೆನ್ಸ್; ಎಲ್ಲ ಬಗೆಹರಿಯುತ್ತದೆ ಎಂದ ಬಿಎಸ್​ವೈ, ದೆಹಲಿಯತ್ತ ಚಿತ್ತ

ನವದೆಹಲಿ/ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿನ ಗುಂಪುಗಾರಿಕೆ, ಅಂತಃಕಲಹ ಕೂಗು ವರಿಷ್ಠರ ಅಂಗಳ ತಲುಪಿದ ಬೆನ್ನಲ್ಲೇ ರಾಷ್ಟ್ರೀಯ ನಾಯಕರ ಶಿಸ್ತಿನ ಪಾಠ ಆರಂಭವಾಗಿದೆ. ಅಶಿಸ್ತಿನ ಕಾರಣಕ್ಕೆ ಬಿಜೆಪಿ ಹೈಕಮಾಂಡ್ ನೀಡಿದ ನೋಟಿಸ್ ಅನ್ನೇ ನಕಲಿ ಆಗಿರಬಹುದೆಂದು ಶಂಕಿಸಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬುಧವಾರ ಪಕ್ಷದ ಕೇಂದ್ರ ಶಿಸ್ತು ಸಮಿತಿ ಸದಸ್ಯ ಕಾರ್ಯದರ್ಶಿ ಓಂ ಪಾಠಕ್ ಮುಂದೆ ಹಾಜರಾಗಿ ಒಂದು ತಾಸಿಗೂ ಹೆಚ್ಚು ಕಾಲ ಮೌಖಿಕ ಸಮಜಾಯಿಷಿ ನೀಡುವ ಜತೆಗೆ ಆರು ಪುಟಗಳ ಲಿಖಿತ ಉತ್ತರ ನೀಡಿದ್ದಾರೆ. ಆದರೆ ಈ ವಿಚಾರದಲ್ಲಿ ವರಿಷ್ಠರು ನಿಗೂಢತೆ ಕಾಪಾಡಿಕೊಂಡಿರುವುದು ಕುತೂಹಲ ಮೂಡಿಸಿದೆ. ಮತ್ತೊಂದೆಡೆ ಯತ್ನಾಳ್ ಏನು ಹೊರಗಿನವರಲ್ಲ, ಎಲ್ಲ ಸಮಸ್ಯೆಯನ್ನೂ ವರಿಷ್ಠರು ಬಗೆಹರಿಸುತ್ತಾರೆನ್ನುವ ಮೂಲಕ ಮಾಜಿ ಸಿಎಂ ಯಡಿಯೂರಪ್ಪ ಸಂಧಾನ ಸಾಧ್ಯತೆಯ ಸುಳಿವು ಹೊರಹಾಕಿದ್ದಾರೆ. ಶಿಸ್ತು ಸಮಿತಿ ಎದುರು ಹೋಗುವ ಮುನ್ನ ಯತ್ನಾಳ್ ಮಾಧ್ಯಮಗಳ ಮುಂದೆ ಎಂದಿನ ಶೈಲಿಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದಕ್ಕೂ ಮುನ್ನ ಕೇಂದ್ರ ಸಚಿವ ರಾಜನಾಥ್ ಸಿಂಗ್​ರನ್ನು ಭೇಟಿಯಾಗಿದ್ದರು. ಶಿಸ್ತು ಸಮಿತಿ ಮುಂದೆ ಹಾಜರಾಗಿ ಹೊರ ಬಂದ ನಂತರ ಯತ್ನಾಳ್ ಮೆದುವಾಗಿದ್ದರು.

‘ಪಕ್ಷದ ವಿಚಾರ ಮಾಧ್ಯಮದವರ ಮುಂದೆ ಹೇಳಬೇಡ, ಒಳ್ಳೆಯ ಭವಿಷ್ಯವಿದೆ, ಶಾಂತವಾಗಿರು ಎಂದು ಹೇಳಿದ್ದಾರೆ. ಅದರಂತೆಯೇ ನಡೆಯುವೆ’ ಎಂದರು. ಆದರೆ ಯು ಟರ್ನ್ ಹೊಡೆಯುವುದು ಯತ್ನಾಳ್​ಗೆ ಹೊಸತೇನಲ್ಲ. ಇತ್ತೀಚೆಗೆ ಸಂಘದ ಪ್ರಮುಖರ ಸಮಕ್ಷಮ ನಡೆದಿದ್ದ ಸಮನ್ವಯ ಸಭೆಯಲ್ಲಿ ಎಲ್ಲರೂ ಒಂದಾಗಿರುತ್ತೇವೆ ಎಂದಿದ್ದರು. ಮರುದಿನವೇ ಪ್ರತ್ಯೇಕ ಗುಂಪು ಕಟ್ಟಿಕೊಂಡು ರಾಜಭವನಕ್ಕೆ ತೆರಳಿ ವಾಲ್ಮೀಕಿ ನಿಗಮದ ಹಗರಣ ವಿಚಾರವಾಗಿ ಮನವಿ ಸಲ್ಲಿಸಿದ್ದರು. ಹೀಗಾಗಿ ಯತ್ನಾಳ್ ನಡೆ ಕುತೂಹಲ ಮೂಡಿಸಿದೆ.

ಯತ್ನಾಳ್ ನಮ್ಮವರೇ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊರಗಿನವರಲ್ಲ, ನಮ್ಮವರೇ. ಯಾವುದೋ ಕಾರಣಕ್ಕೆ ಆ ರೀತಿ ಮಾತನಾಡುತ್ತಿದ್ದಾರೆ. ಎಲ್ಲವನ್ನೂ ಹೈಕಮಾಂಡ್ ಬಗೆಹರಿಸುತ್ತದೆಂಬ ವಿಶ್ವಾಸ ಇದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಎಲ್ಲರೂ ಒಟ್ಟಾಗಿ ಪಕ್ಷವನ್ನು ಮುಂದೆ ತೆಗೆದುಕೊಂಡು ಹೋಗುತ್ತೇವೆ. ಏನೇ ಭಿನ್ನಾಭಿಪ್ರಾಯವಿದ್ದರೂ ಎದುರು ಕುಳಿತು ಒಟ್ಟಾಗಿ ಹೋಗುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಎಲ್ಲವೂ ಸರಿಯಾಗುತ್ತದೆ ಎಂದು ಮಾಜಿ ಸಿಎಂ ವಿಶ್ವಾಸ ವ್ಯಕ್ತಪಡಿಸಿದರು.

ಹಿರಿಯ ನಾಯಕರ ಕಸರತ್ತು: ಯತ್ನಾಳ್ ಟೀಮ್ ಹಾಗೂ ಅವರಿಗೆ ಸೆಡ್ಡು ಹೊಡೆದು ವಿಜಯೇಂದ್ರ ಬೆಂಬಲಕ್ಕೆ ನಿಂತಿರುವ ಮಾಜಿ ಶಾಸಕ ರೇಣುಕಾಚಾರ್ಯ ತಂಡದ ಕಲಹ ಯಾರೊಂದಿಗೂ ಗುರುತಿಸಿಕೊಳ್ಳದ ತಟಸ್ಥರ ಗುಂಪನ್ನು ತಳಮಳಕ್ಕೀಡು ಮಾಡಿತ್ತು. ಈ ನಡುವೆ ಬಿಕ್ಕಟ್ಟು ಶಮನಕ್ಕೆ ಕಸರತ್ತು ನಡೆಸುತ್ತಿರುವ ಹಿರಿಯ ನಾಯಕರು ವರಿಷ್ಠರ ಹಕೀಕತ್ತು ತಿಳಿಯದೆ ಒಳಗೊಳಗೆ ಚಡಪಡಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಹಿರಿಯರ ಅಸಹನೆ: ಗುಂಪುಗಾರಿಕೆಯನ್ನು ಪ್ರಾರಂಭಿಕ ಹಂತದಲ್ಲೇ ಚಿವುಟಿ ಹಾಕಬಹುದಿತ್ತು ಎಂದು ಕೆಲವು ಸಂಸದರು ತಮ್ಮ ಅಸಹನೆ ಹೊರಹಾಕಿದ್ದಾರೆಂದು ತಿಳಿದು ಬಂದಿದೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ನಿವಾಸದಲ್ಲಿ ಸೋಮವಾರ ರಾತ್ರಿ ಭೋಜನ ಕೂಟದ ವೇಳೆ ಈ ಬಗ್ಗೆ ಅನೌಪಚಾರಿಕ ಮಾತುಕತೆಯಾಗಿದೆ. ಈ ಮಧ್ಯೆ ರಾಜ್ಯ ಮೂಲದ ಸಚಿವರೊಬ್ಬರು, ಅಮಿತ್ ಷಾ ಅವರನ್ನು ಭೇಟಿಯಾಗಿ ನಿರ್ದಾಕ್ಷಿಣ್ಯ ಕ್ರಮದ ಬದಲು ಯತ್ನಾಳ್, ವಿಜಯೇಂದ್ರ ಜತೆ ಮುಖಾಮುಖಿ ರ್ಚಚಿಸಿ, ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸಲು ಸಾಧ್ಯವಿದೆ ಎಂಬ ಅಭಿಪ್ರಾಯ ದಾಖಲಿಸಿದ್ದಾರೆ ಎನ್ನಲಾಗುತ್ತಿದೆ.

ಅಶೋಕ್ ದೆಹಲಿಗೆ ದೌಡು: ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಬುಧವಾರ ಬೆಳಗ್ಗೆ ದಿಢೀರ್ ದೆಹಲಿಗೆ ದೌಡಾಯಿಸಿದರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರೇ ಆಹ್ವಾನ ನೀಡಿದ್ದರು ಎಂದು ಪಕ್ಷದ ಮೂಲಗಳು ತಿಳಿಸಿವೆ. ಹಿರಿಯ ನಾಯಕರೊಂದಿಗೆ ರ್ಚಚಿಸಿದ ಅಶೋಕ್, ನಂತರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾರನ್ನು ಭೇಟಿಯಾಗಿದ್ದರು. ಸಮಸ್ಯೆಯ ಮೂಲ, ಇತ್ಯರ್ಥ ಸೂತ್ರದ ಬಗ್ಗೆ ಆರ್.ಅಶೋಕ್ ಮನದಲ್ಲೇನಿದೆ ಎಂದು ತಿಳಿಯುವುದಕ್ಕಾಗಿ ಕರೆಯಿಸಿಕೊಂಡಿರುವ ಸಾಧ್ಯತೆಗಳಿವೆ ಎಂದು ರ್ತಸಲಾಗುತ್ತಿದೆ.

ಸಂಧಾನಕ್ಕೆ ಭೂಮಿಕೆಯೇ?: ವರಿಷ್ಠರ ಸೂಚನೆಗೆ ಶಾಸಕ ಯತ್ನಾಳ್ ವಿಧೇಯತೆ, ಉಚ್ಚಾಟನೆ ಹೊರತಾಗಿ ಬಿಕ್ಕಟ್ಟು ಇತ್ಯರ್ಥಕ್ಕೆ ಹಿರಿಯ ನಾಯಕರ ಬಯಕೆ, ಕೇಂದ್ರ ನಾಯಕತ್ವದೆಡೆ ಬೊಟ್ಟು ತೋರಿಸಿ ವಿಜಯೇಂದ್ರ ಮೌನಕ್ಕೆ ಶರಣಾಗಿರುವುದನ್ನು ಅವಲೋಕಿಸಿದರೆ, ರಾಜಿ ಸಂಧಾನಕ್ಕೆ ಭೂಮಿಕೆ ಸಿದ್ಧವಾಗುತ್ತಿದೆಯೆ ಎಂಬ ಸಂದೇಹ ಚಿಗುರೊಡೆದಿದೆ.

ಯತ್ನಾಳ್ ನಿಲುವೇನು ?

  • ರಾಷ್ಟ್ರೀಯ ಸಿದ್ಧಾಂತ, ಹಿಂದುತ್ವವಾದಿ ಬಿಜೆಪಿ ತೊರೆಯುವ ಪ್ರಶ್ನೆಯೇ ಇಲ್ಲ
  • ತಟಸ್ಥ ರಾಷ್ಟ್ರೀಯ ನಾಯಕರನ್ನು ಕಳುಹಿಸಿ ಎಲ್ಲರ ಅಭಿಪ್ರಾಯ ಸಂಗ್ರಹಿಸಿ
  • ಹಿಂದುತ್ವದಲ್ಲಿ ರಾಜಿಯಿಲ್ಲ, ಹೊಂದಾಣಿಕೆ, ಕುಟುಂಬ ರಾಜಕೀಯ ಸಲ್ಲದು

ವಿಜಯೇಂದ್ರ ಚಿಂತನೆ

  • ಯತ್ನಾಳ್​ಗೆ ಶೋಕಾಸ್ ನೋಟಿಸ್ ನೀಡಿ ಉಳಿದವರಿಗೂ ಸ್ಪಷ್ಟ ಸಂದೇಶ
  • ರಾಷ್ಟ್ರೀಯ ನಾಯಕರ ವಿವೇಚನೆಗೆ ಗುಂಪುಗಾರಿಕೆ, ಅಂತಃಕಲಹ ಶಮನ
  • ಕಾರ್ಯಕರ್ತರಿಗೆ ಆತ್ಮಸ್ಥೈರ್ಯ, ಸಂಘಟನಾತ್ಮಕ ಚಟುವಟಿಕೆಗಳಿಗೆ ಒತ್ತು

 ಯತ್ನಾಳ್ ವಿಚಾರ ವರಿಷ್ಠರ ಅಂಗಳದಲ್ಲಿದೆ. ಇದು ಸುಖಾಂತ್ಯವಾಗಲಿದ್ದು, ಕಾರ್ಯಕರ್ತರಿಗೆ ಖುಷಿಯಾಗುವ ತೀರ್ವನವನ್ನು ಹೈಕಮಾಂಡ್ ತೆಗೆದುಕೊಳ್ಳಲಿದೆ. ವರಿಷ್ಠರು ಕೈಗೊಂಡ ನಿರ್ಧಾರ ಪಾಲಿಸುವುದಷ್ಟೇ ಈ ಅಶೋಕನ ಕೆಲಸ.

| ಆರ್.ಅಶೋಕ್ ವಿಧಾನಸಭೆ ಪ್ರತಿಪಕ್ಷ ನಾಯಕ

 ನಮ್ಮ ವಿಶ್ವಾಸ ಪಕ್ಷ, ಮೋದಿ ಮೇಲಿದೆ. ಬಿಜೆಪಿ ನಮ್ಮ ಆಶಾಕಿರಣ. ಪಕ್ಷ ಬಿಡುವ ಮೂರ್ಖತನದ ಕೆಲಸ ಮಾಡುವುದಿಲ್ಲ. ವರಿಷ್ಠರ ಮಧ್ಯ ಪ್ರವೇಶವಾಗಿದ್ದು, ಕಾರ್ಯಕರ್ತರ ಭಾವನೆ ಅರಿತು ನಿರ್ಧಾರವಾಗಲಿ.

| ಬಸನಗೌಡ ಪಾಟೀಲ ಯತ್ನಾಳ್ ಶಾಸಕ