ನ್ಯೂಸ್

ಭಯೋತ್ಪಾದನಾ ಚಟುವಟಿಕೆ ಶಂಕೆ; ತೀರ್ಥಹಳ್ಳಿಯಲ್ಲಿ ಎನ್​ಐಎ ದಾಳಿ

lakshmihegde

ತೀರ್ಥಹಳ್ಳಿ: ಪಟ್ಟಣದ ಇಬ್ಬರು ಯುವಕರು ಭಯೋತ್ಪಾದನಾ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದಾರೆ ಎಂಬ ಅನುಮಾನದ ಮೇಲೆ ಎನ್​ಐಎ (ರಾಷ್ಟ್ರೀಯ ತನಿಖಾ ದಳ) ಗುರುವಾರ ನಸುಕಿನಲ್ಲಿ ಮೀನು ಮಾರುಕಟ್ಟೆ ಪ್ರದೇಶದಲ್ಲಿರುವ ಎರಡು ಮನೆಗಳ ಮೇಲೆ ದಾಳಿ ನಡೆಸಿತು.

ಸ್ಥಳೀಯ ಪೊಲೀಸ್ ನೆರವಿನೊಂದಿಗೆ ಗುರುವಾರ ನಸುಕಿನ 4ಕ್ಕೆ ಎರಡೂ ಮನೆಗಳಿಗೆ ಮುತ್ತಿಗೆ ಹಾಕಿದ ಎನ್​ಐಎ ಅಧಿಕಾರಿಗಳು ಸತತ 4 ಗಂಟೆ ಕಾಲ ಮನೆಯ ಎಲ್ಲರನ್ನೂ ವಿಚಾರಣೆಗೊಳಪಡಿಸಿದರು. 1-2 ತಿಂಗಳ ಹಿಂದೆಯೂ ಎನ್​ಐಎ ಅಧಿಕಾರಿಗಳು ಇಲ್ಲಿಗೆ ಆಗಮಿಸಿ ಮಾಹಿತಿ ಸಂಗ್ರಹಿಸಿದ್ದರು. ಜತೆಗೆ ಕೆಲವರನ್ನು ಠಾಣೆಗೆ ಕರೆಸಿ ವಿಚಾರಣೆ ಮಾಡಲಾಗಿತ್ತು.

ಶಂಕಿತ ಆರೋಪಿಗಳಲ್ಲಿ ಓರ್ವ ವಿದ್ಯಾವಂತನಾಗಿದ್ದು ಮಾಜಿ ಯೋಧನ ಪುತ್ರ ಎನ್ನಲಾಗಿದೆ. ಈತ ಭಯೋತ್ಪಾದನಾ ಚಟುವಟಿಕೆಯಲ್ಲಿ ಸಕ್ರಿಯನಾಗಿದ್ದಾನೆಯೇ ಎಂಬ ಬಗ್ಗೆ ಇನ್ನೂ ಸ್ಪಷ್ಟನೆ ಸಿಗುತ್ತಿಲ್ಲ. ಇದರೊಂದಿಗೆ ಈತನ ಹತ್ತಿರದ ಸಂಬಂಧಿ ಬಗ್ಗೆಯೂ ರಾಷ್ಟ್ರೀಯ ತನಿಖಾ ದಳಕ್ಕೆ ಅನುಮಾನವಿದ್ದು, ಈ ಎರಡೂ ಕುಟುಂಬದ ಮೇಲೆ ಕಣ್ಣಿಡಲಾಗಿದೆ. ಊರಿನಲ್ಲಿ ಬಹಳ ಕಾಲದಿಂದ ನೆಲೆಸಿರುವ ಈ ಕುಟುಂಬಗಳು ಎಲ್ಲರಿಗೂ ಚಿರಪರಿಚಿತ. ಆದರೆ ಕಾಣೆಯಾಗಿರುವ ಈ ಯುವಕರ ಬಗ್ಗೆ ಮಾಹಿತಿ ಇಲ್ಲ. ಇದು ಅನುಮಾನಕ್ಕೆ ಪುಷ್ಟಿ ನೀಡುವಂತಿದೆ.