

ನವದೆಹಲಿ: ಕರೊನಾ ವೈರಸ್ ವಕ್ಕರಿಸುವ ಈ ಸಂದರ್ಭವನ್ನು ಯುದ್ಧಕ್ಕೆ ಹೋಲಿಸಿರುವ ಪ್ರಧಾನಿ ನರೇಂದ್ರ ಮೋದಿಯವರು, ಸಾಮಾಜಿಕ ಅಂತರ(ಸೋಷಿಯಲ್ ಡಿಸ್ಟನ್ಸ್) ಕಾಯ್ದುಕೊಳ್ಳಿ ಎಂದು ಜನರಿಗೆ ಕರೆ ನೀಡಿದ್ದಾರೆ. ಹಾಗೇ ಆದಷ್ಟು ಮನೆಯಿಂದ ಹೊರಬರುವುದನ್ನು ನಿಲ್ಲಿಸಿ ಎಂದೂ ಸಲಹೆ ನೀಡಿದ್ದಾರೆ.
ಕರೊನಾ ವೈರಸ್ ಪಸರಿಸುವ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಮಾ.22, ಭಾನುವಾರ ಮುಂಜಾನೆ 7ಗಂಟೆಯಿಂದ ರಾತ್ರಿ 9ಗಂಟೆವರೆಗೆ 'ಜನತಾ ಕರ್ಫ್ಯೂ'ಗೆ ಕರೆ ನೀಡಿದ್ದಾರೆ. ಅವತ್ತು ಒಂದು ದಿನದ ಮಟ್ಟಿಗೆ ಯಾರೂ ಮನೆಯಿಂದ ಹೊರಬರಬೇಡಿ. ಈ ಜನತಾ ಕರ್ಫ್ಯೂ ಬಗ್ಗೆ ಇಂದಿನಿಂದಲೇ ನಿಮ್ಮ ಸುತ್ತಲಿನ 10 ಜನರಿಗೆ ಅರಿವು ಮೂಡಿಸಿ. ನಿರ್ಲಕ್ಷ್ಯದಿಂದ ಇರದೆ, ನಮಗೆ ನಾವೇ ಸಂಯಮ ವಹಿಸಿಕೊಂಡು ಮನೆಯಿಂದ ಹೊರಬರುವುದನ್ನು ಬಿಡಬೇಕು. ಜನತಾ ಕರ್ಫ್ಯೂಗೆ ಪ್ರತಿ ನಾಗರಿಕನೂ ಕಡ್ಡಾಯವಾಗಿರಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.