ನ್ಯೂಸ್

ಸುಶಾಂತ್​ ಸಿಂಗ್​ ರಜಪೂತ್​ ಆತ್ಮಹತ್ಯೆ; ನೆಟ್ಟಿಗರ ಕೋಪಕ್ಕೆ ಯಾವುದರ ಮೇಲೆ?

ಮುಂಬೈ: ಸುಶಾಂತ್​ ಸಿಂಗ್​ ರಜಪೂತ್​ ಆತ್ಮಹತ್ಯೆ ಸುದ್ದಿ ಹೊರಬೀಳುತ್ತಿದ್ದಂತೆ ಆತನ ಅಭಿಮಾನಿಗಳು ದುಃಖದಲ್ಲಿದ್ದಾರೆ. ಈ ಘಟನೆಯು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಜೋರಾದ ಚರ್ಚೆಗೆ ವೇದಿಕೆಯಾಗಿ ಪರಿಣಮಿಸಿದೆ.

ಖಿನ್ನತೆ ಎಂದರೆ ಮಾನಸಿಕ ಅಸ್ವಸ್ಥತೆ ಎಂದೇ ಪರಿಗಣಿಸಲಾಗುವ ಕಾರಣ ಈವರೆಗೆ ಇದರ ಬಗ್ಗೆ ಪಿಸುಮಾತಿನಲ್ಲೇ ಚರ್ಚೆಗಳು ನಡೆಯುತ್ತಿದ್ದವು. ಆದರೆ, ಸುಶಾಂತ್​ ಸಾವು ಖಿನ್ನತೆ ಬಗೆಗಿನ ಚರ್ಚೆಯನ್ನು ಬಹಿರಂಗವಾಗಿ, ಜೋರಾಗಿ ನಡೆಯುವಂತೆ ಮಾಡಿದೆ. ಖಿನ್ನತೆ ಎಂಬ ಪದ ಟ್ವಿಟರ್​ನಲ್ಲಿ ಟ್ರೆಂಡಿಂಗ್​ ಆಗಿದೆ.

ಸಮಸ್ಯೆ ಎಂಥದ್ದೇ ಆಗಿರಲಿ, ನಿಮ್ಮವರಿಗೆ ಕರೆ ಮಾಡಿ, ಅವರೊಂದಿಗೆ ಮಾತನಾಡಿ. ನಿಮ್ಮ ಜತೆಗಿರುವವರೊಂದಿಗೆ ಹಂಚಿಕೊಳ್ಳಿ ಎಂಬ ವಾದ ಸರಣಿ ಶುರುವಾಗಿದೆ. ಮಾನಸಿಕ ಆರೋಗ್ಯ ಎಷ್ಟು ಮುಖ್ಯ ಎನ್ನುವುದು ಈ ಘಟನೆಯಿಂದ ಸಾಬೀತಾಗುತ್ತಿದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

ಇದೇ ಮೊದಲ ಬಾರಿಗೆ ಆತ್ಮಹತ್ಯೆ ಹಾಗೂ ಮಾನಸಿಕ ಆರೋಗ್ಯದ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಈ ಮಟ್ಟಿಗಿನ ಚರ್ಚೆ ನಡೆಯುತ್ತಿದೆ ಎಂದೇ ವಿಶ್ಲೇಷಿಸಲಾಗಿದೆ.

ಎಷ್ಟೇ ಪ್ರತಿಭಾವಂತ, ಸಾಧಕನಾಗಿದ್ದರೂ, ಆತ ಅನುಭವಿಸುತ್ತಿದ್ದ ಸಂಕಟ ಈ ಬದುಕನ್ನು ಜೀವಿಸುವುದಕ್ಕಿಂತ ತೊರೆಯುವುದೇ ಲೇಸು ಎಂಬ ನಿರ್ಧಾರಕ್ಕೆ ಬರುವಂತೆ ಮಾಡಿದೆ. ಶಾಂತ ಮುಖಭಾವದ ಹಿಂದೆ ಮಾನಸಿಕ ಕ್ಷೋಭೆಯೇ ಅಡಗಿದೆ ಎಂಬುದು ಇದರಿಂದ ಗೊತ್ತಾಗುತ್ತದೆ ಎಂದು ನೆಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ.

ನಿಮ್ಮವರೊಂದಿಗೆ ಮಾತನಾಡಿ, ಕಷ್ಟ ಹಂಚಿಕೊಳ್ಳಿ, ಆಲಂಗಿಸಿ ಎನ್ನುತ್ತೀರಿ ಅದು ಅಷ್ಟು ಸುಲಭವೂ ಅಲ್ಲ ಎನ್ನುತ್ತಾರೆ ಮತ್ತೊಬ್ಬರು. ಫೋನ್​ ಮಾಡಿ ಮಾತನಾಡುವುದು ಮಾನಸಿಕ ಆನಾರೋಗ್ಯಕ್ಕೆ ಪರಿಹಾರವಲ್ಲ ಎನ್ನುವುದು ಮತ್ತೊಬ್ಬರ ಅಭಿಪ್ರಾಯ.

ಸಂತೋಷವಾಗಿರುವ ವ್ಯಕ್ತಿಯೊಬ್ಬ ತನ್ನ ಕೋಣೆಯಲ್ಲಿ, ಏಕಾಂಗಿತನದಲ್ಲಿ ಏನೆಲ್ಲ ಎದುರಿಸಿರುತ್ತಾನೆ ಎನ್ನುವುದರ ಸಣ್ಣ ಅರಿವೂ ಕೂಡ ನಮಗಿರುವುದಿಲ್ಲ ಎಂದು ಅಭಿಮಾನಿಯೊಬ್ಬ ಬರೆದುಕೊಂಡಿದ್ದಾನೆ.