ನ್ಯೂಸ್

ಸುಶಾಂತ್​ ಸಿಂಗ್​ ಆತ್ಮ ನ್ಯಾಯಕ್ಕಾಗಿ ಪರಿತಪಿಸುತ್ತಿದೆ...! ಮೌನ ಮುರಿದ ತಂದೆ ಕೆ.ಕೆ. ಸಿಂಗ್​

ಪಟನಾ: ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಸಾವು ಸಂಭವಿಸಿದ ದಿನದಿಂದ ಈ ಪ್ರಕರಣ ಒಂದಿಲ್ಲೊಂದು ವಿವಾದಕ್ಕೆ ಗುರಿಯಾಗುತ್ತಲೇ ಇದೆ. ಮುಂಬೈ ಪೊಲೀಸರು ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ 30ಕ್ಕೂ ಅಧಿಕ ಜನರನ್ನು ವಿಚಾರಣೆ ನಡೆಸಿದ್ದಾರೆ.

ಸುಶಾಂತ್​ ಸಿಂಗ್​ ಸಾವು ಆತ್ಮಹತ್ಯೆಯಿಂದಲೇ ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ. ಹೀಗಿದ್ದರೂ ಚಿತ್ರೋದ್ಯಮದ ಹಲವು ಗಣ್ಯರು, ರಾಜಕಾರಣಿಗಳು ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಒತ್ತಾಯಿಸುತ್ತಲೇ ಬಂದಿದ್ದಾರೆ.

ಇದೀಗ ಸುಶಾಂತ್​ ಸಿಂಗ್​ ತಂದೆ ಕೆ.ಕೆ. ಸಿಂಗ್​ ಕೂಡ ಕೇಸ್​ಅನ್ನು ಸಿಬಿಐಗೆ ವಹಿಸಬೇಕೆಂದು ಬೇಡಿಕೆ ಮಂಡಿಸಿದ್ದಾರೆ. ಇಷ್ಟು ದಿನ ಮೌನವಾಗಿದ್ದ ಅವರಿಗೆ ಸುಶಾಂತ್​ ಇಲ್ಲ ಎಂಬ ಸತ್ಯವನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ನನ್ನ ಮಗನ ಆತ್ಮ ಪರಿತಪಿಸುತ್ತಿದೆ. ಸಿಬಿಐ ತನಿಖೆಗಾಗಿ ಒತ್ತಾಯಿಸುತ್ತಿದೆ ಎಂದು ಟ್ವೀಟ್​ ಮಾಡಿದ್ದಾರೆ.

ಸುಶಾಂತ್​ ಸಿಂಗ್​ ಧೈರ್ಯಶಾಲಿ. ಆತ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವೇ ಇಲ್ಲ ಎಂಬುದು ನನಗೆ ತಿಳಿದಿದೆ. ಆತನ ಸಾವು ಕೊಲೆಯಾಗಿದ್ದರೂ ಆತ್ಮಹತ್ಯೆ ಎಂದು ಬಿಂಬಿಸುವ ಪ್ರಯತ್ನ ನಡೆದಿದೆ. ಹೀಗಾಗಿ ಈ ಪ್ರಕರಣದ ಸಂಪೂರ್ಣ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೆಂದು ಮನವಿ ಮಾಡುವುದಾಗಿ ಇನ್ನೊಂದು ಟ್ವಿಟ್​ನಲ್ಲಿ ಹೇಳಿದ್ದಾರೆ.

ಸುಶಾಂತ್​ ಸಿಂಗ್​ ಸಾವು ಜೂ.14ರಂದು ಸಂಭವಿಸಿತ್ತು. ಮುಂಬೈನ ಬಾಂದ್ರಾದ ಮನೆಯಲ್ಲಿ ನೇಣು ಹಾಕಿದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು.