ನ್ಯೂಸ್

ಕೋಲ್ಕತ ಹತ್ಯೆ ಕೇಸ್​: ಇದು ಸಾರ್ವಜನಿಕ ಹಿತಾಸಕ್ತಿಯ ವಿಷಯ! ನೇರಪ್ರಸಾರ ರದ್ದತಿಗೆ ಸುಪ್ರೀಂ ಕೋರ್ಟ್​ ನಿರಾಕರಣೆ

ನವದೆಹಲಿ: ಕೋಲ್ಕತದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸ್ನಾತಕೋತ್ತರ ಟ್ರೈನಿ ವೈದ್ಯೆಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್​, ಇದೀಗ ಪ್ರಕರಣದ ನೇರಪ್ರಸಾರವನ್ನು ನಿಲ್ಲಿಸಲು ನಿರಾಕರಿಸಿದೆ. ಇದು ಸಾರ್ವಜನಿಕ ಹಿತಾಸಕ್ತಿಯ ವಿಷಯವಾಗಿದ್ದು, ನ್ಯಾಯಾಲಯದಲ್ಲಿ ಏನು ನಡೆಯುತ್ತಿದೆ ಎಂಬುದು ಸಾರ್ವಜನಿಕರಿಗೆ ಸ್ಪಷ್ಟವಾಗಿ ತಿಳಿಯಬೇಕು ಎಂದು ನ್ಯಾಯಾಲಯ ಹೇಳಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ಸಿಬಿಐ ವರದಿಯನ್ನು ಸಂಪೂರ್ಣವಾಗಿ ಪರಿಶೀಲಿಸಿದೆ. ಇನ್ನು ವಿಚಾರಣೆ ಆರಂಭವಾಗುತ್ತಿದ್ದಂತೆ ಪಶ್ಚಿಮ ಬಂಗಾಳ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ಪ್ರಕರಣದ ನೇರ ವಿಚಾರಣೆಯನ್ನು ನಿಲ್ಲಿಸುವಂತೆ ಕೋರ್ಟ್​ಗೆ ಮನವಿ ಸಲ್ಲಿಸಿದರು. ಚೇಂಬರ್‌ನ ಮಹಿಳಾ ವಕೀಲರು ಆಸಿಡ್ ದಾಳಿ ಮತ್ತು ಅತ್ಯಾಚಾರದ ಬೆದರಿಕೆಗಳನ್ನು ಎದುರಿಸುತ್ತಿರುವ ಹಿನ್ನಲೆ ಲೈವ್​ ಸ್ಟ್ರೀಮಿಂಗ್​ಗೆ ತಡೆ ನೀಡಬೇಕು ಎಂದು ಹೇಳಿದರು.

ಸಿಬಲ್ ಮನವಿಗೆ ಪ್ರತಿಕ್ರಿಯಿಸಿದ ನ್ಯಾಯಾಲಯ, ವಕೀಲರು ಮತ್ತು ಇತರರಿಗೆ ಯಾವುದೇ ಬೆದರಿಕೆಗಳಿದ್ದಲ್ಲಿ ಕೋರ್ಟ್ ​ಮಧ್ಯಪ್ರವೇಶಿಸುವುದಾಗಿ ಭರವಸೆ ನೀಡಿತು. ನ್ಯಾಯಾಲಯ ಅತ್ಯಾಚಾರ-ಹತ್ಯೆ ಪ್ರಕರಣದಲ್ಲಿ ಮೃತ ವೈದ್ಯೆಯ ಶವಪರೀಕ್ಷೆಗೆ ಸಂಬಂಧಿಸಿದ ದಾಖಲೆಯನ್ನು ಹಾಜರುಪಡಿಸಲು ಪಶ್ಚಿಮ ಬಂಗಾಳ ಪೊಲೀಸರಿಗೆ ಆದೇಶಿಸಿದ್ದು, ಸದ್ಯ ವಿಚಾರಣೆ ಮುಂದುವರೆದಿದೆ,(ಏಜೆನ್ಸೀಸ್).