

ಮಂಡ್ಯ: ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅತ್ಯಂತ ಯಶಸ್ವಿಯಾಗುವುದರ ಜತೆಗೆ ಹೊಸ ದಾಖಲೆ ಸೃಷ್ಟಿ ಮಾಡುವಲ್ಲಿ ಯಾವುದೇ ಸಂಶಯವಿಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಕಸಾಪ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಂಡ್ಯದಲ್ಲಿ ನಡೆಯುವ ನುಡಿಜಾತ್ರೆಯಲ್ಲಿ ಹೊಸ ಹೆಜ್ಜೆ ಇಡಲಾಗುವುದು. ಇದು ಮುಂದೆ ಎಲ್ಲ ಸಾಹಿತ್ಯ ಸಮ್ಮೇಳನಕ್ಕೂ ಕೂಡ ಪರಂಪರೆಯಾಗಿ ಮುಂದುವರೆಯುತ್ತದೆ. ಪರಿಷತ್ನ ಕಾರ್ಯಕಾರಿ ಸಮಿತಿ ಸಭೆ ಸದಸ್ಯರು ಮತ್ತು ಜಿಲ್ಲಾಡಳಿತ ಒಟ್ಟಿಗೆ ಸೌಹಾರ್ಧತೆಯಿಂದ ಕೆಲಸ ನಿರ್ವಹಿಸಲಿ ಎಂದರು.
ಹಳೇ ಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು ಎಂಬಂತೆ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹೊಸತನವನ್ನು ತರಲು ಆಧುನಿಕರಣದ ಸ್ಪರ್ಶವಾಗಬೇಕಿದೆ. ಹೊಸ ಹೆಜ್ಜೆಯನ್ನು ಇಡುವ ಸಂದರ್ಭದಲ್ಲಿ ಅನೇಕ ಟೀಕೆಗಳಿಗೆ ಗುರಿಯಾಗುವುದು ಸಹಜ, ಅದನ್ನು ಸ್ವಾಗತಿಸಬೇಕು. ಪರಸ್ಪರ ಸಹಕಾರ, ಸಹಯೋಗ, ಸಹಭಾಗಿತ್ವ, ಸಹಾಯ ಮನೋಭಾವ, ಸಮನ್ವಯತೆ ಸೌಹಾರ್ದತೆ ಮತ್ತು ಸಮಾಲೋಚನೆಯಿಂದ ಒಟ್ಟಿಗೆ ಕೆಲಸ ಮಾಡಿದಾಗ ಟೀಕೆಗಳು ಸಾಯುತ್ತವೆ ಎಂದರು.
ಸಮ್ಮೇಳನಕ್ಕೆ ಜಿಲ್ಲಾಡಳಿತವು ಸಂಪೂರ್ಣ ಸಹಕಾರ ನೀಡುತ್ತಿದೆ. ಈ ರೀತಿಯ ಸಹಕಾರ ಪ್ರತಿ ವರ್ಷ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುವ ಜಿಲ್ಲೆಯಲ್ಲಿ ಸಿಕ್ಕರೆ ಯಾವುದೇ ಕಾರಣಕ್ಕೂ ಕಾರ್ಯಕ್ರಮದಲ್ಲಿ ತೊಂದರೆಯಾಗಲಿ, ಅಪಸ್ವರವಾಗಲಿ ಬರುವುದಿಲ್ಲ. ಸಮ್ಮೇಳನಕ್ಕೆ ಸಂಬಂಧಿಸಿದಂತೆ ಈಗಾಗಲೇ 28 ಸಮಿತಿ ರಚನೆಯಾಗಿದೆ. ಅವುಗಳಲ್ಲಿ ಮೌಲಿಕ ಚಿಂತನೆ ಆಗಬೇಕು. ಸಮ್ಮೇಳನಕ್ಕೆ ಕನ್ನಡಿಗರನ್ನು ಕರೆತರುವ ಅವಶ್ಯಕತೆ ಇಲ್ಲ. ಇದು ಕನ್ನಡಿಗರ, ಕನ್ನಡ ಭಾಷೆಯ, ಕನ್ನಡ ಸಂಸ್ಕೃತಿಯ, ಕನ್ನಡತನದ, ನಮ್ಮ ಅಸ್ಮಿತೆಯ ಸಮ್ಮೇಳನ. ಇಡೀ ಕರ್ನಾಟಕ ಜಿಲ್ಲೆಯ, ಗಡಿಭಾಗದ ಹಾಗೂ ವಿದೇಶದಲ್ಲಿರುವ ಕನ್ನಡ ಅಭಿಮಾನಿಗಳು ಸ್ವತಃ ಸಮ್ಮೇಳನದಲ್ಲಿ ಪಾಲ್ಗೊಳ್ಳುತ್ತಾರೆ. ಕನ್ನಡಕ್ಕೆ ಜಾತಿ, ಧರ್ಮ ಇಲ್ಲ. ಸಮ್ಮೇಳನದಲ್ಲಿ ಕನ್ನಡ ನಾಡು, ನುಡಿ, ಜಲ, ನೆಲದ ಬಗ್ಗೆ ಅತ್ಯಂತ ಗಂಭೀರ ಚರ್ಚೆ ನಡೆಯುತ್ತದೆ. ಇಲ್ಲಿ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಆಡಳಿತ ಹೇಗೆ ನಡೆಯಬೇಕೆಂದು ದಿಕ್ಸೂಚಿಯನ್ನು ತೋರಿಸುತ್ತದೆ. ಜತೆಗೆ ಸಮ್ಮೇಳನದಲ್ಲಿ ಭಾವೈಕ್ಯತೆ ಉಂಟಾಗುತ್ತದೆ ಎಂದರು.
ಶ್ರೀರಂಗಪಟ್ಟಣ ಶಾಸಕ ರಮೇಶ ಬಂಡಿಸಿದ್ದೇಗೌಡ ಮಾತನಾಡಿ, ಸಮ್ಮೇಳನ ಜಿಲ್ಲೆಯಲ್ಲಿ ನಡೆಯುತ್ತಿರುವುದು ಗೌರವ ತಂದು ಕೊಡುವ ವಿಷಯ. ಆದ್ದರಿಂದ ಅತ್ಯಂತ ಯಶಸ್ವಿಯಾಗಿ ನಡೆಸಲು ಪ್ರತಿಯೊಬ್ಬರೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಾರ್ವಜನಿಕರು, ಸಂಘ ಸಂಸ್ಥೆಗಳ ವಿಶ್ವಾಸ ಪಡೆದು ಹಲವಾರು ಸಭೆ ನಡೆಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಎಲ್ಲರ ಸಹಕಾರದಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಮ್ಮೇಳನದಲ್ಲಿ ಎಷ್ಟು ಜನರು ಭಾಗವಹಿಸಲಿದ್ದಾರೆ ಎಂಬುದನ್ನು ತಿಳಿದು ಮಂಡ್ಯ ಜಿಲ್ಲೆಯ ಹಾಗೂ ರಾಜ್ಯದ ಸೊಗಡನ್ನ ಎಲ್ಲರೂ ಸವಿಯುವಂತೆ ಕೆಲಸ ಮಾಡಲಾಗುವುದು. ಯಾವುದೇ ಸಣ್ಣ ಪುಟ್ಟ ತೊಂದರೆಗಳು ಬಾರದಂತೆ ಸರಿದೂಗಿಸಿಕೊಂಡು ಎಲ್ಲರ ಸಹಕಾರದಿಂದ ಸಮ್ಮೇಳನದ ಕೀರ್ತಿಯನ್ನು ಪಸರಿಸಲಾಗುವುದು ಎಂದರು.
ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, 87ನೇ ಕನ್ನಡ ಸಾಹಿತ್ಯ ಸಮ್ಮೇಳನವು ಕನ್ನಡದ ಹಬ್ಬ ಹಾಗೂ ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಹಬ್ಬವಾಗಿದೆ. ಕನ್ನಡ ಮನಸ್ಸುಗಳು ಸೇರಿ ಮಾಡುವ ಹಬ್ಬ ಇದಾಗಿರುವುದರಿಂದ ಕನ್ನಡಿಗರ ಹಬ್ಬ. ಮಂಡ್ಯ ಕೃಷಿ ಪ್ರಧಾನವಾದ ಜಿಲ್ಲೆ. ಸಾಹಿತ್ಯ ಕ್ಷೇತ್ರದಲ್ಲೂ ಸಹ ತನ್ನ ಸ್ಥಾನವನ್ನು ಹೆಚ್ಚಿಸಿಕೊಂಡಿದೆ. ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಮುಖ್ಯಮಂತ್ರಿಗಳು ಸಾಹಿತ್ಯ ಸಮ್ಮೇಳನವನ್ನ ಅದ್ದೂರಿಯಾಗಿ ಮಾಡುವುದಕ್ಕಿಂತ ಅರ್ಥಪೂರ್ಣವಾಗಿ ಮಾಡುವಂತೆ ಸಲಹೆ ಸೂಚನೆ ನೀಡಿದರು. ಆ ಮಾತಿನ ಮೇರೆಗೆ ಸಮ್ಮೇಳನವನ್ನು ಅದ್ದೂರಿ, ಸಂಭ್ರಮ, ಸಂತೋಷ ಜತೆಗೆ ಅರ್ಥ ಪೂರ್ಣವಾಗಿ ಕಾರ್ಯಕ್ರಮ ಆಯೋಜನೆ ಮಾಡಲಾಗುವುದು ಎಂದು ತಿಳಿಸಿದರು.
ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್ ಮಾತನಾಡಿ, ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳ ಜತೆಗೆ ಸಾಹಿತ್ಯ ಪ್ರೇಮ ಹಾಗೂ ಸಾಹಿತ್ಯ ಅಭಿಮಾನವನ್ನು ಕಂಡಿದ್ದೇನೆ. ಜಿಲ್ಲೆಯ ಜನರು ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ಕಾಪಾಡುವಲ್ಲಿ ಜಿಲ್ಲಾಡಳಿತ ಹಾಗೂ ಜಿಪಂಗೆ ಸಹಕಾರವನ್ನು ನೀಡಿದ್ದಾರೆ. ಜಿಲ್ಲೆಯಲ್ಲಿರುವ ದೇವಾಲಯ, ಸ್ಮಾರಕ, ಸಾಹಿತ್ಯ, ಚೋಳರ ಕಾಲದ ಸ್ಮಾರಕಗಳು, ಶಾಸನಗಳ ಬಗ್ಗೆ ಹಲವಾರು ಕೃತಿಯಲ್ಲಿ ಉಲ್ಲೇಖ ಮಾಡಿದ್ದು, ಈ ಮೂಲಕ ಜಿಲ್ಲೆಯಲ್ಲಿರುವ ಸಾಹಿತ್ಯವನ್ನು ಕಾಣಬಹುದಾಗಿದೆ. ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ವಿಗೆ, ನಮ್ಮ ಜಿಲ್ಲೆ ಹಾಗೂ ನಾಡಿಗೆ ಒಳ್ಳೆಯ ಹೆಸರು ಬರಲು ಪ್ರತಿಯೊಬ್ಬರು ಕೈಜೋಡಿಸಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಮಾತನಾಡಿ, ಸಮ್ಮೇಳನಕ್ಕೆ ಸಕಲ ಸಿದ್ಧತೆ ನಡೆಯುತ್ತಿದ್ದು, ಇದುವರೆಗೆ ಒಂದು ಹಂತಕ್ಕೆ ತರಲಾಗಿದೆ. ತಕ್ಷಣದಲ್ಲಿ ಕನ್ನಡ ಜ್ಯೋತಿ ರಥಯಾತ್ರೆಯನ್ನು ರಾಜ್ಯಾದ್ಯಂತ ಪ್ರಾರಂಭ ಮಾಡಲಾಗುವುದು. ಸಮ್ಮೇಳನದಲ್ಲಿ ದೋಷಗಳು ಬಾರದಂತೆ ಕಾರ್ಯ ನಿರ್ವಹಿಸಲಾಗುವುದು. ನಾಡಿನಾದ್ಯಂತ ಜಿಲ್ಲೆಗೆ ಬರುವ ಸಾಹಿತಿಗಳು ಹಾಗೂ ಕನ್ನಡ ಅಭಿಮಾನಿಗಳಿಗೆ ಸಣ್ಣ ನೋವು ಉಂಟಾಗದಂತೆ ಬಹಳ ಎಚ್ಚರದಿಂದ ಸಮ್ಮೇಳನವನ್ನು ನಡೆಸುವ ಹಂಬಲವಿದೆ ಎಂದು ಹೇಳಿದರು.
ಸಭೆಯಲ್ಲಿ 86ನೇ ಅಖಿಲ ಭಾರತ ಸಮ್ಮೇಳನದ ಅಧ್ಯಕ್ಷರೂ ಆದ ಹಿರಿಯ ಸಾಹಿತಿ ದೊಡ್ಡರಂಗೇಗೌಡ, ಕಸಾಪ ನಿಕಟಪೂರ್ವ ಅಧ್ಯಕ್ಷ ಮನು ಬಳಿಗರ್, ಸಮ್ಮೇಳನದ ಸಂಚಾಲಕಿ ಡಾ.ಮೀರಾ ಶಿವಲಿಂಗಯ್ಯ, ಕಸಾಪ ಕೋಶಾಧ್ಯಕ್ಷ ಪಾಟೇಲ್, ಗೌರವ ಕಾರ್ಯದರ್ಶಿಗಳಾದ ರಾಮಲಿಂಗಶೆಟ್ಟಿ, ಪದ್ಮಿನಿ ನಾಗರಾಜು, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿಗಳಾದ ಡಾ.ಕೃಷ್ಣೇಗೌಡ ಹುಸ್ಕೂರು, ಹರ್ಷ ವಿ.ಪಣ್ಣೆದೊಡ್ಡಿ ಇತರರಿದ್ದರು.