ನ್ಯೂಸ್

ಇಂದಿನಿಂದ ಸುಪ್ರೀಂಕೋರ್ಟ್​ನಲ್ಲಿ ಆರ್ಟಿಕಲ್​ 370 ರದ್ದು ಸಂಬಂಧಿಸಿದ ವಿಚಾರಣೆ

ನವದೆಹಲಿ: ಇಂದಿನಿಂದ ಸುಪ್ರೀಂ ಕೋರ್ಟ್ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದ 370 ನೇ ವಿಧಿಯನ್ನು ರದ್ದುಗೊಳಿಸಿದ ಬಗ್ಗೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಆಲಿಸಲಿದೆ.

ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚಡ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಬೆಂಚ್ ಬುಧವಾರದಿಂದ ದಿನನಿತ್ಯದ ವಿಚಾರಣೆಯನ್ನು ನಡೆಸಲಿದೆ.

ಜುಲೈ 11ರಂದು, ನ್ಯಾಯಮೂರ್ತಿಗಳಾದ ಸಂಜಯ್ ಕಿಶಾನ್ ಕೌಲ್, ಸಂಜಿವ್ ಖನ್ನಾ, ಬಿಆರ್ ಗವಾಯಿ ಮತ್ತು ಸೂರಿಯಾ ಕಾಂತ್​​ ಇದ್ದ ಬೆಂಚ್​, ಜುಲೈ 27ರ ಒಳಗಾಗಿ ವಿವಿಧ ಪಕ್ಷಗಳು ಲಿಖಿತ ಸಲ್ಲಿಕೆಗಳನ್ನು ಸಲ್ಲಿಸುವ ಗಡುವು ಎಂದು ನಿಗದಿಪಡಿಸಿತ್ತು.

ಸೋಮವಾರ ಮತ್ತು ಶುಕ್ರವಾರಗಳನ್ನು ಹೊರತುಪಡಿಸಿ ದಿನನಿತ್ಯದ ಆಧಾರದ ಮೇಲೆ ವಿಚಾರಣೆಯನ್ನು ನಡೆಸಲಾಗುವುದು ಎಂದು ಐದು ನ್ಯಾಯಾಧೀಶರ ಬೆಂಚ್ ಹೇಳಿದೆ. ವಿಚಾರಣೆಗಾಗಿ ಈ ದಿನಗಳಲ್ಲಿ ಹೊಸ ಅರ್ಜಿಗಳನ್ನು ಮಾತ್ರ ತೆಗೆದುಕೊಳ್ಳುವಂತೆ ನಿರ್ಧರಿಸಲಾಗಿದ್ದು ನಿಯಮಿತ ವಿಷಯಗಳ ಪರಿಶೀಲನೆ ನಡೆಸಲಾಗುವುದಿಲ್ಲ.

ಅರ್ಜಿದಾರರಿಂದ ಮತ್ತು ಸರ್ಕಾರದ ಕಡೆಯಿಂದ ತಲಾ ಒಂದರಂತೆ, ಸುಪ್ರೀಂ ಕೋರ್ಟ್​ ಒಟ್ಟು ಇಬ್ಬರು ವಕೀಲರನ್ನು ನೇಮಿಸಿದೆ. ಅವರು, ಅಗತ್ಯ ದಾಖಲೆಗಳ ಸಂಕಲನವನ್ನು ತಯಾರಿಸಿ ಜುಲೈ 27ರ ಮೊದಲು ಅದನ್ನು ಸಲ್ಲಿಸಬೇಕಿತ್ತು. ಮೇಲ್ಕಂಡ ದಿನಾಂಕದ ನಂತರ ಯಾವುದೇ ದಾಖಲೆಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್​ ಸ್ಪಷ್ಟಪಡಿಸಿತ್ತು.(ಏಜೆನ್ಸೀಸ್)