ನ್ಯೂಸ್

ಬೆಂಬಲಿಗರ ಟೀ, ಕಾಫಿ, ಸಮೋಸ ವೆಚ್ಚವೂ ಅಭ್ಯರ್ಥಿ ಖಾತೆಗೆ!

ನವದೆಹಲಿ: ಪಂಚರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಎಲ್ಲ ರಾಜಕೀಯ ಪಕ್ಷಗಳು ಶಕ್ತಿಮೀರಿ ಪ್ರಚಾರ ನಡೆಸಲು ಮುಂದಾಗಿವೆ. ಆದರೆ ಈ ಬಾರಿ ಚುನಾವಣಾ ಆಯೋಗವು ಕಟ್ಟುನಿಟ್ಟಾಗಿ ಕಾರ್ಯನಿರ್ವಹಿಸುತ್ತಿದ್ದು, ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳಿಗೆ ಸಂಬಂಧಿಸಿದಂತೆ ಹಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದ್ದು, ಅಭ್ಯರ್ಥಿಗಳ ವೆಚ್ಚದ ಮೇಲೆ ನಿಗಾ ಇಟ್ಟಿದೆ.

ಚುನಾವಣೆಯ ಪ್ರಚಾರದ ವೇಳೆ ಬೆಂಬಲಿಗರಿಗೆ ನೀಡಲಾಗುವ ಟೀ, ಕಾಫಿ, ಸಮೋಸ ಸೇರಿ ಪ್ರತಿ ವಸ್ತುವಿನ ವೆಚ್ಚವನ್ನೂ ಅಭ್ಯರ್ಥಿಯ ಖಾತೆಗೆ ಸೇರಿಸಲಾಗುತ್ತದೆ. ಇದಕ್ಕಾಗಿ ಪ್ರತ್ಯೇಕ ದರ ಪಟ್ಟಿಯನ್ನು ಅದು ಸಿದ್ಧಪಡಿಸಿದೆ. ಆಯೋಗದ ದರ ಪಟ್ಟಿಯಲ್ಲಿ ಚಹಾ 5 ರೂ., ಕಾಫಿ 13 ರೂ., ಸಮೋಸಾ 12 ರೂ., ಕೆ.ಜಿ. ರಸಗುಲ್ಲಾಗೆ 210 ರೂಪಾಯಿ ನಿಗದಿಪಡಿಸಲಾಗಿದೆ. ಚುನಾವಣಾ ಪ್ರಚಾರ ಮತ್ತು ಸಭೆ, ಕಾರ್ಯಕ್ರಮಗಳಲ್ಲಿ ಬಳಸುವ ಪ್ರತಿ ವಸ್ತುಗಳ ಬೆಲೆಯನ್ನು ಸಹ ನಿಗದಿಪಡಿಸಿದೆ. ಆಯೋಗದ ದರ ಪಟ್ಟಿ ಪ್ರಕಾರ ಅಭ್ಯರ್ಥಿಯ ವೆಚ್ಚಗಳನ್ನು ನಿರ್ಣಯಿಸಲಾಗುತ್ತದೆ. ಚುನಾವಣೆ ಸಮಯದಲ್ಲಿ ಅಭ್ಯರ್ಥಿಗಳು ಕೋಟ್ಯಂತರ ರೂಪಾಯಿ ಖರ್ಚು ಮಾಡುವುದಕ್ಕೆ ಆಯೋಗ ಕಡಿವಾಣ ಹಾಕುತ್ತಿದೆ. ಅಭ್ಯರ್ಥಿಗಳ ಪ್ರತಿಯೊಂದು ವೆಚ್ಚವನ್ನು ಚುನಾವಣಾ ಆಯೋಗವು ಜಿಲ್ಲಾ ಚುನಾವಣಾಧಿಕಾರಿಯಿಂದ ಮೇಲ್ವಿಚಾರಣೆಗೆ ಒಳಪಡಿಸಲಿದೆ.

ಅಭ್ಯರ್ಥಿಗಳ ಕಾರಿಗೆ ಎಷ್ಟು ದರ?

ಚುನಾವಣಾ ಅಭ್ಯರ್ಥಿಗಳು ಬಳಸುವ ಕಾರಿನ ದರ ದಿನಕ್ಕೆ 2,625 ರೂ., 5 ಆಸನಗಳ ಕಾರಿನ ಬಾಡಿಗೆಗೆ ದಿನಕ್ಕೆ 2,625 ರೂ. ಅಥವಾ ತತ್ಸಮಾನ 3,675 ರೂ .ಖರ್ಚು ಮಾಡಬಹುದು. 20 ಆಸನದ ಮಿನಿ ಬಸ್​ಗೆ 6,300 ರೂ., 35 ಆಸನಗಳ ಬಸ್​ಗೆ 8,400 ರೂ. ಟೆಂಪೋಗೆ 1,260 ರೂ. ಜತೆಗೆ ಚಾಲಕನ ವೇತನ 630 ರೂಪಾಯಿ ಪ್ರತಿ ದಿನ ಅಭ್ಯರ್ಥಿಯ ವೆಚ್ಚಕ್ಕೆ ಸೇರ್ಪಡೆಯಾಗಲಿದೆ.

ಕುರ್ಚಿ, ಮೇಜುಗಳಿಗೂ ನಿರ್ದಿಷ್ಟ ದರ ನಿಗದಿ

ಸಾರ್ವಜನಿಕ ರ್ಯಾಲಿ, ಕಾರ್ಯ ಕ್ರಮಗಳಲ್ಲಿ ಹಾಕಲಾಗುವ ಕುರ್ಚಿ, ಮೇಜುಗಳಿಗೂ ಆಯೋಗ ದರ ನಿಗದಿ ಮಾಡಲು ಮುಂದಾಗಿದೆ. ಪ್ಲಾಸ್ಟಿಕ್ ಕುರ್ಚಿಗೆ 5 ರೂ., ಪೈಪ್ ಕುರ್ಚಿಗೆ 3 ರೂ., ವಿಐಪಿ ಕುರ್ಚಿಗೆ 105 ರೂ., ಮರದ ಟೇಬಲ್​ಗೆ 53 ರೂ., ದೀಪಾಲಂಕಾರ ಸಹಿತ ಹಲವು ವೆಚ್ಚಗಳನ್ನು ಲೆಕ್ಕ ಹಾಕಲಿದೆ. ಆಹಾರ ಪದಾರ್ಥಗಳಲ್ಲಿ ಪ್ರತಿ ಊಟದ ತಟ್ಟೆಗೆ ಬೆಲೆ 71 ರೂ., ಕೆಜಿ ಬಾಳೆಹಣ್ಣಿಗೆ 21 ರೂ., ಸೇಬಿಗೆ 84 ರೂ., ದ್ರಾಕ್ಷಿ ಕೆಜಿಗೆ 84 ರೂ., 20 ಲೀಟರ್​ನ ಆರ್​ಒ ವಾಟರ್ ಕ್ಯಾನ್​ಗೆ 20 ರೂ., ತಂಪು ಪಾನೀಯ ಮತ್ತು ಐಸ್ಕ್ರೀಂ ವೆಚ್ಚವನ್ನು ಸೇರಿಸಲಾಗಿದೆ.

ಖರ್ಚಿನ ವಿವರ ನೀಡುವುದು ಕಡ್ಡಾಯ

ಪ್ರಚಾರಕ್ಕಾಗಿ ಖರ್ಚು ಮಾಡಿದ ಮೊತ್ತದ ವಿವರಗಳನ್ನು ಚುನಾವಣಾ ಆಯೋಗಕ್ಕೆ ನೀಡುವುದು ಕಡ್ಡಾಯವಾಗಿದೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಚುನಾವಣಾ ವೆಚ್ಚದ ವಿವರ ನೀಡದ ಅಭ್ಯರ್ಥಿಗಳ ವಿರುದ್ಧ ಚುನಾವಣಾ ಆಯೋಗ ಕ್ರಮ ಕೈಗೊಂಡಿದೆ. ಇತ್ತೀಚೆಗೆ ಚುನಾವಣಾ ಆಯೋಗವು ರಾಜಸ್ಥಾನದ 46 ನಾಯಕರನ್ನು ಅನರ್ಹ ಗೊಳಿಸಿದೆ ಮತ್ತು ಅವರನ್ನು ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿಷೇಧಿಸಿದೆ.

ಬಿಜೆಪಿಗೆ ಬಂಡಾಯದ ಬಿಸಿ

ರಾಜಸ್ಥಾನದಲ್ಲಿ ಬಿಜೆಪಿ ಬಿಡುಗಡೆ ಮಾಡಿದ 41 ಮಂದಿಯ ಮೊದಲ ಪಟ್ಟಿಯಲ್ಲಿ ಸ್ಥಾನ ಪಡೆಯಲು ಸಾಧ್ಯವಾಗದ ಟಿಕೆಟ್ ಆಕಾಂಕ್ಷಿಗಳು ನವೆಂಬರ್ 25ರಂದು ನಡೆಯುವ ಚುನಾವಣೆಯಲ್ಲಿ ಪಕ್ಷೇತರರಾಗಿ ಅಥವಾ ಇತರ ಪಕ್ಷಗಳಿಂದ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ರಾಜಪಾಲ್ ಸಿಂಗ್ ಶೇಖಾವತ್ (ಜೋತ್ವಾರಾ), ವಿಕಾಸ್ ಚೌಧರಿ (ಕಿಶನ್​ಗಢ್), ರಾಜೇಂದ್ರ ಗುರ್ಜರ್ (ಡಿಯೋಲಿ ಉನಿಯಾರಾ), ಅನಿತಾ ಗುರ್ಜರ್ (ನಗರ) ತಮ್ಮ ಕ್ಷೇತ್ರಗಳಲ್ಲಿಯೇ ಸ್ಪರ್ಧಿಸಲು ಮುಂದಾಗಿದ್ದಾರೆ.