ನ್ಯೂಸ್

ಕಾಶಿ ಪೀಠಕ್ಕೆ ನೂತನ ಉತ್ತರಾಧಿಕಾರಿ ಆಯ್ಕೆ

ಬಂಕಾಪುರ: ಕಾಶಿ ಜ್ಞಾನಪೀಠದ ನೂತನ ಉತ್ತರಾಧಿಕಾರಿಯಾಗಿ ಸೊಲ್ಲಾಪುರ ಹೊಟಗಿ ಮಠದ ಡಾ.ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಆಯ್ಕೆ ಆಗಿದ್ದಾರೆ.

ಹಾವೇರಿ ಜಿಲ್ಲೆ ಬಂಕಾಪುರದ ಬಿಸನಹಳ್ಳಿಯಲ್ಲಿರುವ ಕಾಶಿಪೀಠದ ಪಾಠಶಾಲೆಯಲ್ಲಿ ಶ್ರೀಶೈಲ ಮತ್ತು ಉಜ್ಜಯಿನಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ನಡೆದ ಸಭೆಯಲ್ಲಿ ಕಾಶಿ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ನೂತನ ಉತ್ತರಾಧಿಕಾರಿಗಳ ಆಯ್ಕೆಯನ್ನು ಘೋಷಿಸಿದರು.

ಮೂಲತಃ ರಾಯಚೂರು ಜಿಲ್ಲೆಯ ಜಾಲಹಳ್ಳಿಯವರಾದ ಡಾ. ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ತಿರುಪತಿಯಲ್ಲಿ ಉನ್ನತ ಅಧ್ಯಯನ ನಡೆಸಿದ್ದು, ಸಂಸ್ಕೃತದಲ್ಲಿ ಪಾಂಡಿತ್ಯ ಹೊಂದಿದ್ದಾರೆ. ಮಹಾರಾಷ್ಟ್ರದ ಸೊಲ್ಲಾಪುರದ ಹೊಟಗಿ ಬೃಹನ್ಮಠದ ಪಟ್ಟಾಧ್ಯಕ್ಷರಾಗಿರುವ ಶ್ರೀಗಳು ಸುದೀರ್ಘ ಪರಂಪರೆಯುಳ್ಳ ಕಾಶಿ ಜಗದ್ಗುರು ವಿಶ್ವಾರಾಧ್ಯ ಜ್ಞಾನ ಸಿಂಹಾಸನ ಪೀಠದ 87ನೇ ಜಗದ್ಗುರುಗಳಾಗಲಿದ್ದಾರೆ.

ಈ ಆಯ್ಕೆಯ ಸಂದರ್ಭದಲ್ಲಿ ವಿಭೂತಿಪುರ, ಹುಕ್ಕೇರಿ, ಕೆರೂರು, ಕೊಟ್ಟೂರು ಸೇರಿದಂತೆ 25ಕ್ಕೂ ಹೆಚ್ಚಿನ ಶಿವಾಚಾರ್ಯರು ಉಪಸ್ಥಿತರಿದ್ದರು.