ನ್ಯೂಸ್

ಕೋಚಿಂಗ್​ಗೆ ಹಣವಿಲ್ಲದಿದ್ರೂ 7 ಸರ್ಕಾರಿ ಕೆಲ್ಸ ಗಿಟ್ಟಿಸಿದ ಈ ಯುವಕನ ಯಶೋಗಾಥೆಯೇ ಎಲ್ಲರಿಗೂ ಸ್ಫೂರ್ತಿ! Success Story

Success Story ​: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಒಂದೇ ಒಂದು ಸರ್ಕಾರಿ ನೌಕರಿ ಗಿಟ್ಟಿಸುವುದೆಂದರೆ ಸುಲಭದ ಮಾತಲ್ಲ. ಜವಾನನ ಕೆಲಸಕ್ಕೂ ಕೂಡ ಇಂಜಿಯರ್​ ಓದಿದವರು ಅರ್ಜಿ ಸಲ್ಲಿಸುತ್ತಾರೆ. 100 ಹುದ್ದೆ ಇದ್ದರೆ ಅದಕ್ಕೆ ಲಕ್ಷಾಂತರ ಮಂದಿ ಅರ್ಜಿ ಸಲ್ಲಿಸುತ್ತಾರೆ. ಇಷ್ಟೊಂದು ಸ್ಪರ್ಧೆ ಇರುವಾಗ ಸರ್ಕಾರಿ ಕೆಲಸ ಗಿಟ್ಟಿಸಲು ಕಠಿಣ ಪರಿಶ್ರಮದ ಅವಶ್ಯಕತೆ ಇದೆ. ಆದರೆ, ಒಂದಲ್ಲ ಏಳು ಸರ್ಕಾರಿ ಕೆಲಸ ಗಿಟ್ಟಿಸುವುದೆಂದರೆ ತಮಾಷೆಯ ಮಾತಲ್ಲ. ಇಂತಹ ಪ್ರತಿಭೆಗಳು ತುಂಬಾ ಅಪರೂಪವಾಗಿ ಕಾಣಸಿಗುತ್ತವೆ. ತೆಲಂಗಾಣದ ಯುವಕನೊಬ್ಬ 7 ಸರ್ಕಾರಿ ಕೆಲಸ ಗಿಟ್ಟಿಸಿದ್ದಾನೆ. ಕೋಚಿಂಗ್‌ಗೆ ಹಣವಿಲ್ಲದಿದ್ದರೂ ಒಂದೇ ಬಾರಿಗೆ 7 ಸರ್ಕಾರಿ ಉದ್ಯೋಗ ಪಡೆಯುವ ಮೂಲಕ ತೆಲಂಗಾಣದ ಜನ್ನಾರಾಮ ಮಂಡಲದ ರೋಟಿಗುಡಾದ ಸಂತೋಷ್ ಸುದ್ದಿಯಲ್ಲಿದ್ದಾರೆ. ಸದ್ಯ ಸಂತೋಷ್​ ಅವರ ಯಶೋಗಾಥೆ ವೈರಲ್ ಆಗಿದೆ.

ಸಂತೋಷ್ ಬಡಕುಟಂಬ ಹಿನ್ನೆಲೆಯಿಂದ ಬಂದವರು. ಇವರ ತಂದೆ-ತಾಯಿ ಲಚ್ಚಣ್ಣ ಮತ್ತು ರಾಜವ್ವ ಬಡ ರೈತರಾಗಿದ್ದು, ಸಣ್ಣ ಜಮೀನಿನಲ್ಲಿ ಕಷ್ಟಪಟ್ಟು ಮಗನ ವಿದ್ಯಾಭ್ಯಾಸಕ್ಕೆ ಬೆಂಬಲ ನೀಡುತ್ತಿದ್ದರು. ತಂದೆ-ತಾಯಿಯ ತ್ಯಾಗ ವ್ಯರ್ಥವಾಗಬಾರದು ಎಂದು ಸಂಕಲ್ಪ ಮಾಡಿದ ಸಂತೋಷ್ ಸಮರ್ಪಣಾ ಮನೋಭಾವದಿಂದ ಓದಿ ಯಶಸ್ಸು ಗಳಿಸಿದ್ದಾರೆ.

ಸರ್ಕಾರಿ ನೌಕರಿ ಗಿಟ್ಟಿಸಿಕೊಳ್ಳುವ ಪಯಣದಲ್ಲಿ ಸಂತೋಷ್ ಸಾಕಷ್ಟು ವೈಫಲ್ಯಗಳನ್ನು ಎದುರಿಸಿದರು. ಆದರೂ ತನ್ನ ಭರವಸೆಯನ್ನು ಕಳೆದುಕೊಳ್ಳಲಿಲ್ಲ. ಪ್ರತಿ ಬಾರಿ ಯಶಸ್ಸು ಸಿಗದಿದ್ದಾಗ ಹೊಸ ನಿರ್ಣಯದೊಂದಿಗೆ ಮತ್ತೆ ಪ್ರಯತ್ನಿಸಿದರು. ಕೊನೆಗೂ ಅವರ ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಸಿಕ್ಕಿದೆ. 2023ರಲ್ಲಿ ರೈಲ್ವೇಯಲ್ಲಿ ಪಾಯಿಂಟ್‌ಮ್ಯಾನ್‌, ಸಿಂಗರೇಣಿಯಲ್ಲಿ ಜೂನಿಯರ್‌ ಅಸಿಸ್ಟೆಂಟ್‌ ಹುದ್ದೆಗಳನ್ನು ಅಲಂಕರಿಸಿದ್ದರು. 2024 ರಲ್ಲಿ ಗುರುಕುಲಗಳಲ್ಲಿ ಟಿಜಿಟಿ, ಪಿಜಿಟಿ, ಜೂನಿಯರ್ ಲೆಕ್ಚರರ್ ಮತ್ತು ಡಿಗ್ರಿ ಲೆಕ್ಚರರ್ ಪರೀಕ್ಷೆಗಳನ್ನು ಪೂರ್ಣಗೊಳಿಸಿದರು. ಒಟ್ಟು ಏಳು ಸರ್ಕಾರಿ ಉದ್ಯೋಗಗಳನ್ನು ಪಡೆದ ಸಂತೋಷ್ ಅವರ ಈ ಪಯಣ ಇಂದಿನ ಯುವಕರಿಗೆ ಸ್ಪೂರ್ತಿಯಾಗಿದೆ.

ಸಂತೋಷ್ ಇತ್ತೀಚೆಗೆ ತೆಲಂಗಾಣ ಪಬ್ಲಿಕ್ ಸರ್ವಿಸ್ ಕಮಿಷನ್ ಬಿಡುಗಡೆ ಮಾಡಿದ ಫಲಿತಾಂಶಗಳಲ್ಲಿ ಜೂನಿಯರ್ ಲೆಕ್ಚರರ್ (ಜೆಎಲ್) ಆಗಿ ಆಯ್ಕೆಯಾದರು. ವೃತ್ತಿಜೀವನದ ಹಾದಿಯಾಗಿ ಇದೇ ಕೆಲಸವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇನ್ನು ಸಂತೋಷ್ ಅವರ ಕಥೆಯು ಇನ್ನಷ್ಟು ಸ್ಪೂರ್ತಿದಾಯಕವಾಗಿದೆ. ಏಕೆಂದರೆ ಅವರು ಈ ಏಳು ಸರ್ಕಾರಿ ಉದ್ಯೋಗಗಳನ್ನು ಕೇವಲ ಎರಡು ವರ್ಷಗಳಲ್ಲಿ, ಸಂಪೂರ್ಣವಾಗಿ ಸ್ವಯಂ ತಯಾರಿಯ ಮೂಲಕ, ಯಾವುದೇ ಔಪಚಾರಿಕ ತರಬೇತಿಯಿಲ್ಲದೆ ಸಾಧಿಸಿದರು. ಒಂದು ಉದ್ಯೋಗವನ್ನು ಪಡೆಯುವುದು ಕಷ್ಟವಾಗಿರುವ ಸಮಯದಲ್ಲಿ, ಸಂತೋಷ್​ ಅವರ ಸಾಧನೆ ಭರವಸೆಯ ದಾರಿದೀಪವಾಗಿದೆ.

ಇಂದು ಅನೇಕ ಯುವಕರು ಸರ್ಕಾರಿ ಉದ್ಯೋಗ ಅಧಿಸೂಚನೆಗಳ ಕೊರತೆಯಿಂದ ನಿರುತ್ಸಾಹಗೊಂಡಿದ್ದಾರೆ ಮತ್ತು ಕೆಲವೊಮ್ಮೆ ಕೆಲವೇ ಅಂಕಗಳಿಂದ ಅವಕಾಶಗಳನ್ನು ಕಳೆದುಕೊಳ್ಳುತ್ತಾರೆ, ಕೆಲವರು ಖಾಸಗಿ ಉದ್ಯೋಗಗಳ ಕಡೆಗೆ ಮುಖ ಮಾಡುತ್ತಾರೆ. ಕೆಲವರು ಸೋಲುಗಳನ್ನು ನಿರಾಸೆಯಿಲ್ಲದೆ ಎದುರಿಸಿ ಸಂತೋಷ್ ರೀತಿ ಆತ್ಮವಿಶ್ವಾಸದಿಂದ ಯಶಸ್ಸು ಸಾಧಿಸುತ್ತಾರೆ. (ಏಜೆನ್ಸೀಸ್​)