Success Story : ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಯಶಸ್ವಿಯಾಗಬೇಕೆಂದು ( Success ) ಬಯಸುತ್ತಾರೆ. ಆದರೆ, ಅದು ಎಲ್ಲರಿಗೂ ಸಾಧ್ಯವಿಲ್ಲ. ಶ್ರಮದ ಜತೆ ಲಕ್ ಕೂಡ ಇದ್ದರೆ ಯಶಸ್ಸು ಖಂಡಿತ ಸಿಗುತ್ತದೆ. ಇಂದು ಅನೇಕರು ಉದ್ಯಮದಲ್ಲಿ ಕೋಟಿಗಟ್ಟಲೆ ಸಂಪಾದಿಸುತ್ತಿದ್ದಾರೆ. ಒಳ್ಳೆಯ ಸಂಬಳದ ಉದ್ಯೋಗವನ್ನು ಬಿಟ್ಟು ಕೋಟಿಗಟ್ಟಲೆ ದುಡಿಯುವವರು ಕೂಡ ನಮ್ಮ ನಡುವೆ ಇದ್ದಾರೆ. ಈ ನಿಟ್ಟಿನಲ್ಲಿ ತೆಲಂಗಾಣಕ್ಕೆ ಸಂಬಂಧಿಸಿದ ವ್ಯಕ್ತಿಯ ಯಶೋಗಾಥೆ ಬಹಳ ಸ್ಪೂರ್ತಿದಾಯಕವಾಗಿದೆ.
ಶ್ರೀಕಾಂತ್ ಬೊಳ್ಳಪಲ್ಲಿ. ಇವರು ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯವರು. ಇವರದು ಕೃಷಿ ಕುಟುಂಬ. 52 ಎಕರೆ ಪ್ರದೇಶದಲ್ಲಿ ವಿವಿಧ ಬಗೆಯ ಹೂಗಳನ್ನು ಬೆಳೆಯುವ ಮೂಲಕ ಪ್ರತಿ ವರ್ಷ ಹೂವಿನ ವ್ಯಾಪಾರದಿಂದ ಕೋಟ್ಯಂತರ ರೂ. ಸಂಪಾದಿಸುತ್ತಾರೆ. 200ಕ್ಕೂ ಹೆಚ್ಚು ಜನರಿಗೆ ಉದ್ಯೋಗವನ್ನೂ ನೀಡಿದ್ದಾರೆ. ಈ ಹೂವಿನ ವ್ಯಾಪಾರದಿಂದ 70 ಕೋಟಿ ರೂ. ವಹಿವಾಟು ನಡೆಯುತ್ತದೆ. ಅನೇಕ ಜನರಿಗೆ ಶ್ರೀಕಾಂತ್ ಅವರು ಇಂದು ಸ್ಫೂರ್ತಿಯ ಚಿಲುಮೆಯಾಗಿದ್ದಾರೆ.
ಆದರೆ, ಶ್ರೀಕಾಂತ್ ಅವರಿಗೆ ಈ ಯಶಸ್ಸು ಸುಲಭವಾಗಿ ಸಿಕ್ಕಿದ್ದಲ್ಲ. ಒಮ್ಮೆ ಶ್ರೀಕಾಂತ್ ಅವರು ಬಡತನದಲ್ಲಿ ಸಿಲುಕಿದ್ದರು. ರೈತ ಕುಟುಂಬದಲ್ಲಿ ಹಲವು ಸಂಕಷ್ಟಗಳನ್ನು ಎದರುಸಿದರು. ಆರ್ಥಿಕ ಸಂಕಷ್ಟದಿಂದ 10ನೇ ತರಗತಿಗೆ ಓದು ನಿಲ್ಲಿಸಿ, ಹದಿನಾರನೇ ವರ್ಷದವನಿದ್ದಾಗ ಬೆಂಗಳೂರಿನಲ್ಲಿ ಕುಟುಂಬದ ಸದಸ್ಯರೊಂದಿಗೆ ಹೂವಿನ ವ್ಯಾಪಾರ ಆರಂಭಿಸಿದರು.
ಬೆಂಗಳೂರಿನಲ್ಲಿ ದುಡಿಯುವ ಸಮಯದಲ್ಲಿ ತಿಂಗಳಿಗೆ ಕೇವಲ 1000 ರೂಪಾಯಿಗಳನ್ನು ಸಂಪಾದಿಸುತ್ತಿದ್ದರು. ಜೀವನದಲ್ಲಿ ಏನಾದರೂ ಮಾಡಬೇಕೆಂದು ಯೋಚಿಸಿದ ಶ್ರೀಕಾಂತ್, ಬೆಂಗಳೂರಿನಂತಹ ಮಹಾನಗರದಲ್ಲಿ ಸ್ವಂತ ಉದ್ದಿಮೆ ಆರಂಭಿಸಲು ಯೋಚಿಸಿದರು. ಆದರೆ, ಇದು ಅಷ್ಟು ಸುಲಭವಲ್ಲ. ಮನಸ್ಸು ಮಾಡಿ ಉದ್ಯಮ ಆರಂಭಿಸಿದ ಶ್ರೀಕಾಂತ್ ಆರಂಭದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದರು. ಆದರೆ, ಸಮಸ್ಯೆಗಳ ನಡುವೆಯೂ ತಮ್ಮ ಛಲಬಿಡದೆ ಮುಂದುವರಿದರು.
ಆರಂಭದಲ್ಲಿ ಹತ್ತು ಎಕರೆಯಲ್ಲಿ ಹೂ ಕೃಷಿ ಆರಂಭಿಸಿದ ಶ್ರೀಕಾಂತ್ ಇಂದು 52 ಎಕರೆಗೆ ತಲುಪಿದ್ದಾರೆ. ಕೇವಲ 12 ಬಗೆಯ ಹೂವುಗಳನ್ನು ಬೆಳೆಸುತ್ತಿರುವ ಇವರು ಈಗ ಕೋಟಿಗಟ್ಟಲೆ ಆದಾಯ ಗಳಿಸುತ್ತಿದ್ದಾರೆ. ಇವರನ್ನೇ ಆದರ್ಶವಾಗಿಟ್ಟುಕೊಂಡು ಮುನ್ನಡೆದರೆ ಎಷ್ಟೋ ಜನ ಯಶಸ್ವಿಯಾಗಬಹುದು. (ಏಜೆನ್ಸೀಸ್)