ಮೃತ್ಯುಂಜಯ ಕಪಗಲ್ ಬೆಂಗಳೂರು
ಪರಿಶಿಷ್ಟ ಜಾತಿ, ಉಪಜಾತಿಗಳ ನಿಖರ ದತ್ತಾಂಶ ಸಹಿತ ಏಕಸದಸ್ಯ ವಿಚಾರಣಾ ಆಯೋಗದ ವರದಿಗೆ ದಿನಗಣನೆ ಶುರುವಾಗಿರುವ ಹೊತ್ತಲ್ಲೇ ಸರ್ಕಾರಕ್ಕೆ ಉಪಜಾತಿಗಳ ಸಮೀಕ್ಷೆ ನಡೆಸುವ ಅನಿವಾರ್ಯ ಸೃಷ್ಟಿಯಾಗಿದೆ. ನ್ಯಾ.ಎಚ್.ಎನ್.ನಾಗಮೋಹನ್ ದಾಸ್
ನೇತೃತ್ವದ ಏಕಸದಸ್ಯ ವಿಚಾರಣಾ ಅಯೋಗ ವಿವಿಧ ಮೂಲಗಳಿಂದ ಮಾಹಿತಿ, ಇಲಾಖೆವಾರು ಅಧಿಕೃತ ಅಂಕಿ-ಅಂಶಗಳನ್ನು ಕಲೆಹಾಕುತ್ತಿದೆ. ಸಾರ್ವಜನಿಕರು, ಆಸಕ್ತ ಸಂಘಟನೆಗಳಿಂದ ಅಹವಾಲು ಸ್ವೀಕರಿಸಿದೆ. ಸಮಾಲೋಚನಾ ಸಭೆಯಲ್ಲಿ ಸಾಮಾಜಿಕವಾಗಿ ಹಿಂದುಳಿದಿರುವಿಕೆಯ ಸ್ಪಷ್ಟ ಬಿಂದು ಗುರುತಿಸಲು ಸರ್ಕಾರಿ ಹುದ್ದೆಗಳಲ್ಲಿ ಸಮಾನ ಪ್ರಾತಿನಿಧ್ಯದ ದತ್ತಾಂಶಗಳನ್ನು ಆಯೋಗ ಸಂಗ್ರಹಿಸುತ್ತಿದೆ.
ಎದುರಾಯ್ತು ತಲೆಬೇನೆ: ಅಧಿಕೃತ ಅಂಕಿ-ಅಂಶಗಳಲ್ಲಿ ಪರಿಶಿಷ್ಟ ಜಾತಿ ಉಪ ಪಂಗಡಗಳ ಪೈಕಿ ‘ಆದಿ ಕರ್ನಾಟಕ (ಎ-ಕೆ) ಮತ್ತು ಆದಿ ದ್ರಾವಿಡ (ಎ-ಡಿ) ಎಂಬ ಉಲ್ಲೇಖ ಆಯೋಗಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅಹವಾಲು, ಪುರಾವೆ ಸಲ್ಲಿಸಿದ ಹಲವು ಸಂಘಟನೆಗಳು ತಮ್ಮದೇ ವಾದ ಪ್ರತಿಪಾದಿಸಿವೆ. ಎರಡೂ ಉಪ ಜಾತಿಗಳು ಮಾದಿಗ ಉಪ ಪಂಗಡಗಳು ಎಂದು ಕೆಲ ಸಂಘಟನೆಗಳು ವಾದಿಸಿದರೆ, ಛಲವಾದಿ ಉಪ ಪಂಗಡಗಳು ಎಂದು ಮತ್ತೆ ಕೆಲ ಸಂಘಟನೆಗಳು ಪ್ರತಿವಾದಿಸಿವೆ. ರಾಜ್ಯದ ಒಂದು ಪ್ರಾಂತದಲ್ಲಿ ಛಲವಾದಿ ಉಪ ಪಂಗಡಗಳಾಗುವಎ-ಕೆ ಹಾಗೂ ಎ-ಡಿ ಇನ್ನೊಂದು ಪ್ರಾಂತದಲ್ಲಿ ಮಾದಿಗ ಉಪ ಪಂಗಡಗಳಾಗಿವೆ. ಇದು, ಗೊಂದಲದ ಮೂಲವಾಗಿದೆ. ಹೀಗಾಗಿ ಯಾವುದೇ ವರ್ಗಕ್ಕೆ ಸೇರಿಸಿದರೂ ಜನಸಂಖ್ಯಾ ಬಲದಲ್ಲಿ ವ್ಯತ್ಯಾಸವಾಗುತ್ತದೆ.
ಪರಿಹಾರೋಪಾಯ: ಎರಡು ಸಮುದಾಯಗಳ ಒಟ್ಟು ಜನಸಂಖ್ಯೆ 15 ಲಕ್ಷಕ್ಕೂ ಅಧಿಕವಿದೆ. ಮಾದಿಗ ಅಥವಾ ಛಲವಾದಿಗೆ ಶೇಕಡಾವಾರು ಮೀಸಲು ಪ್ರಮಾಣದಲ್ಲಿ ನಿರ್ಣಾಯಕವಾಗಲಿದೆ. ಹೀಗಾಗಿ ಎರಡೂ ಕಡೆಯವರು ತಮ್ಮದೇ ಉಪಜಾತಿಗಳು ಎಂದು ಪ್ರತಿಪಾದಿಸಿವೆ. ದತ್ತಾಂಶಗಳ ಸಹಿತ ಮೀಸಲು ವರ್ಗೀಕರಣಕ್ಕೆ ಶಿಫಾರಸು ಮಾಡಿದ ವರದಿಗೆ ಮುಂದೆ ಕೋರ್ಟ್ನಲ್ಲಿ ಸವಾಲು ಎದುರಾಗಬಹುದು. ಆ ಸಂದರ್ಭದಲ್ಲಿ ಎ-ಕೆ ಹಾಗೂ ಎ-ಡಿ ಗೊಂದಲ ಕಾನೂನು ತೊಡಕಿಗೆ ಸಿಲುಕುವ ಸಂಭವವಿದೆ. ಅಲ್ಪಾವಧಿ ಸಮೀಕ್ಷೆಯೇ ಶಾಶ್ವತ ಪರಿಹಾರ ಎಂಬುದು ಚಿಂತನೆ ಹಂತದಲ್ಲಿದ್ದು, ಸ್ಪಷ್ಟರೂಪ ಪಡೆದುಕೊಂಡಿಲ್ಲ. ಆದರೆ ಗಡುವಿನ ಪ್ರಕಾರ ಮಾರ್ಚ್ ಅಂತ್ಯದೊಳಗೆ ಆಯೋಗ ವರದಿ ಸಲ್ಲಿಸಿ, ಉಪ ಜಾತಿ ಗೊಂದಲ ಇತ್ಯರ್ಥವಾಗಬೇಕಾಗಿದೆ. ಮೀಸಲು ವರ್ಗೀಕರಣ ವಿಳಂಬವಾಗಬಹುದು ಎಂದು ಕೆಲವು ಸಮುದಾಯಗಳು ದಿಗಿಲುಗೊಂಡು, ಮಧ್ಯಂತರ ವರದಿಗೆ ಧ್ವನಿ ಎತ್ತಿವೆ.
ಸಿಎಂ ಮುಂದೆ ಪ್ರಸ್ತಾಪ?: ಕ್ಷೇತ್ರ ಕಾರ್ಯ, ಅಧ್ಯಯನ ಮಾಡಿದ ಹಲವರ ಜತೆ ರ್ಚಚಿಸಿರುವ ನ್ಯಾ.ನಾಗಮೋಹನ್ದಾಸ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿದ್ದಾರೆ. ಆದರೆ ನಿಖರ, ಸಮಾಧಾನಕರ ಮಾಹಿತಿ ಲಭಿಸಿಲ್ಲ ಎಂದು ಹೇಳಲಾಗಿದೆ. ಇದರಿಂದಾಗಿ ಆದಿ ದ್ರಾವಿಡ ಮತ್ತು ಆದಿ ಕರ್ನಾಟಕ ಸಮುದಾಯಗಳು ಯಾವ ಉಪ ಜಾತಿಗೆ ಸೇರಿದವು ಎಂಬುದನ್ನು ಸ್ಪಷ್ಟಪಡಿಸಿಕೊಳ್ಳಲು ಅಲ್ಪಕಾಲೀನ ಸಮೀಕ್ಷೆ ಲೇಸು ಎಂಬ ನಿಲುವನ್ನು ನ್ಯಾ. ನಾಗಮೋಹನ್ದಾಸ್ ತಳೆದಿದ್ದಾರೆ ಎಂದು ತಿಳಿದಿದೆ. ಸಿಎಂ ಸಿದ್ದರಾಮಯ್ಯ ಅವರಿಗೆ 40 ಪರ್ಸೆಂಟ್ ಕಮಿಷನ್ ಆರೋಪದ ವಿಚಾರಣಾ ವರದಿಯನ್ನು ಬುಧವಾರ ಸಲ್ಲಿಸಲಾಗಿದೆ. ಇದೇ ಸಂದರ್ಭದಲ್ಲಿ ಆದಿ ದ್ರಾವಿಡ ಮತ್ತು ಆದಿ ಕರ್ನಾಟಕ ಉಪ ಜಾತಿಗಳ ಸಮಸ್ಯೆ ಇತ್ಯರ್ಥಕ್ಕೆ ಅಲ್ಪಾವಧಿ ಸಮೀಕ್ಷೆಯ ಬಗ್ಗೆ ಪ್ರಾಸಂಗಿಕವಾಗಿ ಪ್ರಸ್ತಾಪಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅನಿವಾರ್ಯತೆಗೆ ಕಾರಣ
ರಾಜ್ಯ ಸರ್ಕಾರ ಮುತುವರ್ಜಿ ವಹಿಸಿ ಆಯೋಗಕ್ಕೆ ಬೇಕಾದ ಜಾತಿ, ಉಪಜಾತಿಗಳ ನಿಖರ ದತ್ತಾಂಶ ಒದಗಿಸಿ, ಎರಡು ತಿಂಗಳ ಕಾಲಮಿತಿ ಪಾಲನೆಗೆ ಬದ್ಧವಾಗಿರಬೇಕು, ಇಲ್ಲದಿದ್ದರೆ ಸಚಿವ ಸಂಪುಟ ಸಭೆಯ ತೀರ್ಮಾನ ಉಲ್ಲಂಘಿಸಿ, ಪ್ರಜ್ಞಾಪೂರ್ವಕವಾಗಿ ವಿಳಂಬ ಮಾಡುತ್ತಿದೆ ಎಂಬ ಅನುಮಾನ ಮೂಡುತ್ತದೆ.
- ಅಂಬಣ್ಣ ಅರೋಲಿಕರ್, ಎಸ್ಸಿ ಒಳಮೀಸಲು ಹೋರಾಟಗಾರ