ಕರೊನಾ ಸಂಕಷ್ಟ ಹೆಚ್ಚಾಗಿರುವ ಹೆಚ್ಚಿನ ದೇಶಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದೆ. ಶಾಲಾ- ಕಾಲೇಜುಗಳನ್ನು ಬಂದ್ ಮಾಡಲಾಗಿದೆ. ಆದರೆ, ಕೆಲ ದೇಶಗಳಲ್ಲಿ ತರಗತಿಗಳನ್ನು ನಡೆಸಲಾಗುತ್ತಿದೆ.
ಬ್ರಿಟನ್ನಲ್ಲಿ ಶಾಲಾ- ಕಾಲೇಜುಗಳ ಆರಂಭಕ್ಕೆ ಹಸಿರು ನಿಶಾನೆ ತೋರಿಸಲಾಗಿದೆ. ಹೊಸ ಶೈಕ್ಷಣಿಕ ವರ್ಷಾರಂಭಕ್ಕೆ ಚಾಲನೆ ದೊರೆತಿದೆ. ಆದರೆ, ಹಲವು ನಿರ್ಬಂಧಗಳಿವೆ.
ಇದನ್ನೂ ಓದಿ; ಸಭೆ, ಸಮಾರಂಭಕ್ಕೆ ಅನುಮತಿ; ಸೆ.7ರಿಂದ ಮೆಟ್ರೋ ಸಂಚಾರ; ಶಾಲಾ-ಕಾಲೇಜು ಬಂದ್; ಅನ್ಲಾಕ್ 4.0 ಮಾರ್ಗಸೂಚಿ
ಶಿಕ್ಷಣ ಸಂಸ್ಥೆಯ ಕ್ಯಾಂಪಸ್ನಲ್ಲಿ ವ್ಯಕ್ತಿಗತ ಅಂತರ ಪಾಲಿಸುವುದು ಸೇರಿ ಹಲವು ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ. ಒಂದು ಈ ನಿಯಮಗಳನ್ನು ಪಾಲಿಸದಿದ್ದಲ್ಲಿ ಶಿಕ್ಷಗೆ ಗುರಿಯಾಗಬೇಕಾಗುತ್ತದೆ. ಜತೆಗೆ, ಶಾಲೆಯಿಂದಲೇ ಅಮಾನತು ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.
ಈಸ್ಟ್ ಸಸೆಕ್ಸ್ನಲ್ಲಿರುವ ಶಾಲೆಯೊಂದು ರೂಪಿಸಿರುವ ನಿಯಮಗಳು ಹೀಗಿವೆ. ಉದ್ದೇಶಪೂರ್ವಕವಾಗಿ ಅಥವಾ ಸಕಾರಣವಿಲ್ಲದೇ ಕೆಮ್ಮುವುದು, ಸೀನುವುದು, ಕರೊನಾ ಬಗ್ಗೆ ಸೂಕ್ತವಲ್ಲದ ಕಾಮೆಂಟ್ಗಳನ್ನು ಮಾಡುವುದು, ಉದ್ದೇಶಪೂರ್ವಕವಾಗಿ ಮತ್ತೊಬ್ಬರನ್ನು ಸ್ಪರ್ಶಿಸುವುದು, ಶಾಲೆ ರೂಪಿಸಿದ ನಿಯಮಗಳನ್ನು ಪದೇಪದೆ ಉಲ್ಲಂಘಿಸುವುದು. ಈ ಎಲ್ಲ ಕೃತ್ಯಗಳಿಗೆ ವಿದ್ಯಾರ್ಥಿಯನ್ನು ಶಾಲೆಯಿಂದ ಅಮಾನತು ಮಾಡುವ ಶಿಕ್ಷೆ ನೀಡಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.
ಸುಮ್ಸುಮ್ನೆ ಕೆಮ್ಮಿದರೆ, ಕರೊನಾ ಬಗ್ಗೆ ಕೆಟ್ಟ ಜೋಕ್ ಮಾಡಿದರೆ ಶಿಕ್ಷೆ ಗ್ಯಾರಂಟಿ ಎಂದು ಮತ್ತೊಂದು ಶಿಕ್ಷಣ ಸಂಸ್ಥೆಯೂ ಪ್ರಕಟಣೆ ಹೊರಡಿಸಿದೆ. ತರಗತಿಯಿಂದ ಹೊರ ಹೋಗುವಂತಿಲ್ಲ. ಡೆಸ್ಕ್ ಮೇಲೆಯೇ ಊಟ ಮಾಡಬೇಕು ಎಂದು ಕಟ್ಟಪ್ಪಣೆ ವಿಧಿಸಿದೆ. ಇದು ವಿಚಿತ್ರ ಎನಿಸಿದರೂ ಸಾಂಕ್ರಾಮಿಕ ಸಂಕಷ್ಟದಿಂದ ಪಾರಾಗಲೂ ಅಗತ್ಯವೂ ಆಗಿದೆ ಎನ್ನುತ್ತಾರೆ ಶಿಕ್ಷಕರು.