ನ್ಯೂಸ್

ವಿದ್ಯಾರ್ಥಿಗಳಿಗೆ ಸಿಗದ ಸ್ಕಾಲರ್​ಶಿಪ್: 3 ವರ್ಷದಿಂದ ಬಿಡುಗಡೆಯಾಗದ ಮೆಟ್ರಿಕ್​ಪೂರ್ವ ವಿದ್ಯಾರ್ಥಿವೇತನ

| ಗಂಗಾಧರ್ ಬೈರಾಪಟ್ಟಣ ರಾಮನಗರ

ಕಳೆದ ಮೂರು ವರ್ಷಗಳಿಂದಲೂ ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡದ ಸರ್ಕಾರ ಈ ಬಾರಿ ಅರ್ಜಿ ಹಾಕುವುದಕ್ಕೆ ತಡೆಯೊಡ್ಡಿದೆ. ಕೋವಿಡ್ ಕಾರಣದಿಂದಾಗಿ 2020-21ನೇ ಸಾಲಿನಿಂದ ಸ್ಥಗಿತಗೊಂಡ ವಿದ್ಯಾರ್ಥಿ ವೇತನ ಅಲ್ಲಿಗೇ ನಿಂತಿದ್ದು, ಬರೋಬ್ಬರಿ ಮೂರು ವರ್ಷ ಕಳೆದರೂ ವಿದ್ಯಾರ್ಥಿಗಳಿಗೆ ಸ್ಕಾಲರ್​ಶಿಪ್ ಬಿಡುಗಡೆ ಮಾಡದೆ, ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಪಾಲಕರು ಸರ್ಕಾರದ ದಾರಿಯನ್ನೇ ಕಾಯುವಂತೆ ಆಗಿದೆ.

ಏನಾಗಿದೆ?: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳಲ್ಲಿ ಕಲಿಯುತ್ತಿರುವ ಪ್ರವರ್ಗ-1, 2ಎ, 3ಎ ಮತ್ತು 3ಬಿ ವರ್ಗದ ಮೆಟ್ರಿಕ್ ಪೂರ್ವ ಮತ್ತು ನಂತರದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಗುತ್ತಿದೆ. 1-5ನೇ ತರಗತಿ ವಿದ್ಯಾರ್ಥಿಗಳಿಗೆ 750 ರೂ, 6-8ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ 900 ರೂ. ಹಾಗೂ 9-10ನೇ ತರಗತಿ ವಿದ್ಯಾರ್ಥಿಗಳಿಗೆ 1000 ರೂ.ಗಳನ್ನು ನೇರವಾಗಿಯೇ ವಿದ್ಯಾರ್ಥಿಯ ಖಾತೆಗೆ ಜಮಾ ಮಾಡಲಾಗುತ್ತಿತ್ತು. ಆದರೆ, ಕಳೆದ ಮೂರು ವರ್ಷಗಳಿಂದ 9-10ನೇ ತರಗತಿ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಉಳಿದವರಿಗೆ ಸ್ಕಾಲರ್​ಶಿಪ್ ಬಂದಿಲ್ಲ.

ಕೋವಿಡ್ ನೆಪ?: ಈ ಹಿಂದೆ ಬಿಜೆಪಿ ಸರ್ಕಾರ ಕೋವಿಡ್ ಕಾರಣದಿಂದ 2020-21ನೇ ಸಾಲಿನ ಸ್ಕಾಲರ್​ಶಿಪ್ ಬಿಡುಗಡೆ ಮಾಡಿರಲಿಲ್ಲ. ಇದಾದ ನಂತರ ವಿದ್ಯಾರ್ಥಿಗಳು ಅರ್ಜಿ ಹಾಕಿದ್ದು ಬಿಟ್ಟರೆ ಯಾವುದೇ ಪ್ರಗತಿ ಕಾಣಲಿಲ್ಲ. ಸ್ಟೇಟ್ ಸ್ಕಾಲರ್​ಶಿಪ್ ಪೋರ್ಟಲ್​ನಲ್ಲಿ ವಿದ್ಯಾರ್ಥಿಯ ಐಡಿ ಹಾಕಿ ಪರಿಶೀಲನೆ ಮಾಡಿದರೆ, ಅರ್ಜಿ ಸ್ವೀಕರಿಸಲಾಗಿದ್ದು, ಹಣ ಇನ್ನೂ ಬಿಡುಗಡೆಯಾಗಿಲ್ಲ ಎನ್ನುವ ಸಂದೇಶ ಬರುತ್ತಿದೆ.

ಅರ್ಜಿ ಸ್ವೀಕರಿಸುತ್ತಿಲ್ಲ: ಸ್ಕಾಲರ್​ಶಿಪ್ ಬಾರದಿರುವುದು ಒಂದೆಡೆಯಾದರೆ, 2023-24ನೇ ಸಾಲಿನಲ್ಲಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸ್ವೀಕರಿಸುತ್ತಿಲ್ಲ. ಬದಲಿಗೆ ಅರ್ಹತೆ ಆಧಾರದ ಮೇಲೆ ಕೃಷಿ, ಮೀನುಗಾರಿಕೆ, ಕಾರ್ವಿುಕ ಇಲಾಖೆ ಸೇರಿ ವಿವಿಧ ಇಲಾಖೆಗಳಲ್ಲಿ ಅರ್ಜಿ ಸಲ್ಲಿಸುವಂತೆ ಸೂಚನೆ ನೀಡಲಾಗುತ್ತಿದೆ. ಇದರಿಂದಾಗಿ ಅರ್ಜಿ ಹಾಕಲು ಸೈಬರ್ ಸೆಂಟರ್​ಗೆ ಹೋಗುವ ಪಾಲಕರು ಬರಿಗೈಲಿ ವಾಪಸಾಗುವಂತಾಗಿದೆ.

ಬಿಜೆಪಿ ಸರ್ಕಾರದ ಅವಧಿಯಿಂದಲೂ ಸ್ಥಗಿತಗೊಂಡಿರುವ ಸ್ಕಾಲರ್​ಶಿಪ್ ಹಿಂದುಳಿದ ವರ್ಗಗಳ ಬಡ ವಿದ್ಯಾರ್ಥಿಗಳ ಪಾಲಿಗೆ ದೊಡ್ಡ ಹೊಡೆತ ನೀಡಿದೆ. ಬರುವ ಅಲ್ಪ ಸ್ವಲ್ಪ ಹಣ ಓದಿನ ಖರ್ಚಿನ ಹೊರೆ ಕಡಿಮೆ ಮಾಡುತ್ತಿತ್ತು. ಹಣ ಬಾರದಿರುವುದು ಒಂದೆಡೆಯಾದರೆ, ಅರ್ಜಿ ಸ್ವೀಕರಿಸುವುದನ್ನೇ ಸ್ಥಗಿತಗೊಳಿಸಿರುವ ಕ್ರಮ ಆತಂಕ ಸೃಷ್ಟಿಸಿದೆ.

ಕರೊನಾ ವೇಳೆ ಹಣದ ಕೊರತೆಯ ಹಿನ್ನೆಲೆಯಲ್ಲಿ ಕಳೆದ ಮೂರು ವರ್ಷಗಳಿಂದ ವಿದ್ಯಾರ್ಥಿ ವೇತನ ನೀಡಲು ಸಾಧ್ಯವಾಗಿಲ್ಲ. ಬಾಕಿ ಉಳಿದಿರುವ ಅರ್ಜಿಗಳ ಇತ್ಯರ್ಥಕ್ಕೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಸರ್ಕಾರದ ಅನುಮತಿ ಪಡೆದು ಶೀಘ್ರದಲ್ಲಿ ಮತ್ತೆ ಅರ್ಜಿ ಆಹ್ವಾನಿಸುತ್ತೇವೆ. | ಕೆ.ಎ. ದಯಾನಂದ್, ಹಿಂದುಳಿದ ವರ್ಗಗಳ ಆಯುಕ್ತ ಕಳೆದ ಮೂರು ವರ್ಷಗಳಿಂದಲೂ ಅರ್ಜಿ ಹಾಕಿದ್ದೇವೆ. ವಿದ್ಯಾರ್ಥಿ ವೇತನ ಮಾತ್ರ ಬಿಡುಗಡೆ ಆಗಿಲ್ಲ. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಅನುದಾನ ಬಂದಿಲ್ಲ ಎನ್ನುತ್ತಾರೆ. ಸರ್ಕಾರ ಕೂಡಲೇ ಸ್ಕಾಲರ್​ಶಿಪ್ ಬಿಡುಗಡೆಗೆ ಹಾಗೂ ಅರ್ಜಿ ಹಾಕಲು ಅನುವು ಮಾಡಿಕೊಡಬೇಕು. | ಕುಮಾರ್, ವಿದ್ಯಾರ್ಥಿನಿಯೊಬ್ಬಳ ತಂದೆ