ಸಾವಿಗೂ ಮುನ್ನ ಅಪಾರ್ಟ್​ಮೆಂಟ್​ನ ಲಿಫ್ಟ್ ಬಳಿ ನಿಂತಿರುವ ವಿದ್ಯಾರ್ಥಿನಿ 
ನ್ಯೂಸ್

ಅಪಾರ್ಟ್​​ಮೆಂಟ್​​ನ 11ನೇ ಮಹಡಿಯಿಂದ ಕೆಳಕ್ಕೆ ಬಿದ್ದ ಯುವತಿ ಸ್ಥಳದಲ್ಲೇ ಸಾವು!

ಬೆಂಗಳೂರು: ಅಪಾರ್ಟ್​ಮೆಂಟ್​ವೊಂದರ ಹನ್ನೊಂದನೇ ಮಹಡಿಯಿಂದ ಕೆಳಕ್ಕೆ ಬಿದ್ದ ಯುವತಿಯೊಬ್ಬಳು ಸ್ಥಳದಲ್ಲೇ ಸಾವಿಗೀಡಾಗಿದ್ದಾಳೆ. ಯುವತಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ. ನಗರದ ಚಾಲುಕ್ಯ ಸರ್ಕಲ್ ಬಳಿಯ ಎಚ್​ಪಿ-3 ಅಪಾರ್ಟ್​ಮೆಂಟ್​ನಲ್ಲಿ ಈ ಘಟನೆ ನಡೆದಿದೆ.

ಯುವತಿಯನ್ನು ಪ್ರಕೃತಿ ಎಂದು ಗುರುತಿಸಲಾಗಿದೆ. ಸಂಜಯನಗರದ ನಿವಾಸಿಯಾಗಿರುವ ಈಕೆ ಸೋಫಿಯಾ ಕಾಲೇಜಿನ ವಿದ್ಯಾರ್ಥಿನಿ ಎನ್ನಲಾಗಿದೆ. ಆತ್ಮಹತ್ಯೆಗೂ ಮುನ್ನ ಯುವತಿ ಲಿಫ್ಟ್ ಬಳಿ ಬಂದು ಪ್ರವೇಶಿಸಿರುವುದು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಹೈಗ್ರೌಂಡ್ಸ್ ಠಾಣೆ ಪೊಲೀಸರು ಧಾವಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

ಮೇಲಿನಿಂದ ಬಿದ್ದ ಯುವತಿ ಕೆಳಗೆ ನಿಲುಗಡೆ ಮಾಡಲಾಗಿದ್ದು ಕಾರೊಂದರ ಹಿಂದಿನ ಗಾಜಿನ ಮೇಲೆ ಬಿದ್ದಿದ್ದಳು. ಬಿದ್ದ ರಭಸಕ್ಕೆ ಸ್ಥಳದಲ್ಲೇ ಸಾವಿಗೀಡಾಗಿದ್ದಾಳೆ. ಯುವತಿಯ ಜೇಬಿನಲ್ಲಿ ಒಂದು ಮೊಬೈಲ್​ಫೋನ್ ಮತ್ತು 300 ರೂಪಾಯಿ ಸಿಕ್ಕಿದೆ ಎನ್ನಲಾಗಿದೆ.

ಸ್ಥಳಕ್ಕೆ ಯುವತಿಯ ತಂದೆ ಅರವಿಂದ ಮತ್ತು ತಾಯಿ ತೇಜು ಆಗಮಿಸಿದ್ದಾರೆ. ಯುವತಿಯ ತಂದೆ ಸಾಫ್ಟ್​ವೇರ್ ಇಂಜಿನಿಯರ್ ಆಗಿದ್ದು, ಯುವತಿ ಪಿಯುಸಿ ವಿದ್ಯಾರ್ಥಿನಿ ಎನ್ನಲಾಗಿದೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಪ್ರಕರಣಕ್ಕೆ ಸಂಬಂಧಿತ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.