ದುರಂತ ಸಂಭವಿಸಿದ ಸ್ಥಳ 
ನ್ಯೂಸ್

ಒಂದು ಹಗ್ಗ, ಒಂದು ಕಂಬ, ಎರಡು ಸಾವು: 8ನೇ ತರಗತಿ ವಿದ್ಯಾರ್ಥಿಯ ದುರ್ಮರಣ

ರಾಮನಗರ: ಒಂದು ಹಗ್ಗ, ಒಂದು ಕಂಬ, ಎರಡು ಸಾವು ಎಂಬ ರೀತಿಯಲ್ಲಿ ಈ ಪ್ರಕರಣ ನಡೆದಿದೆ. ಇಲ್ಲಿ ಎಂಟನೇ ತರಗತಿ ವಿದ್ಯಾರ್ಥಿಯ ದುರ್ಮರಣವಾಗಿದ್ದು, ಜೊತೆಗೆ ಹಸು ಕೂಡ ಮೃತಪಟ್ಟಿದೆ. ಆತನ ಸಹೋದರ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ರಾಮನಗರ ತಾಲೂಕಿನ ಬಿಡದಿ ಹೋಬಳಿಯ ಮಂಚೇಗೌಡನಪಾಳ್ಯ ಗ್ರಾಮದಲ್ಲಿ ಈ ಪ್ರಕರಣ ನಡೆದಿದೆ. ಸಿದ್ದರಾಜು ಸಾವಿಗೀಡಾದ ವಿದ್ಯಾರ್ಥಿ. ಈತನ ಸಹೋದರ ಮಾಳಪ್ಪ ಪ್ರಾಣಾಪಾಯದಿಂದ ಪಾರಾದವ. ಮನೆಗೆ ಹತ್ತಿರದ ವಿದ್ಯುತ್ ಕಂಬಕ್ಕೆ ಕಟ್ಟಿದ್ದ ಹಸುವನ್ನು ನೋಡಲು ಸಿದ್ದರಾಜು ಹೋಗಿದ್ದಾಗ ಈ ದುರಂತ ಸಂಭವಿಸಿದೆ.

ವಿದ್ಯುತ್ ಪ್ರವಹಿಸಿ ಹಸು ಸಾವಿಗೀಡಾಗಿತ್ತು. ಅದನ್ನು ನೋಡಲು ಹೋಗಿದ್ದ ಸಿದ್ದರಾಜು ಹಸುವನ್ನು ಮುಟ್ಟಲು ಹೋಗಿ ಆತನೂ ವಿದ್ಯುತ್​ ಶಾಕ್​ನಿಂದ ಸಾವಿಗೀಡಾಗಿದ್ದಾನೆ. ಅವನ ಶವ ಮುಟ್ಟಿದ ಸಹೋದರನ ಬೆರಳಿಗೆ ಗಾಯವಾಗಿದ್ದು, ಸ್ವಲ್ಪದರಲ್ಲೇ ಬಚಾವಾಗಿದ್ದಾನೆ. ಸ್ಥಳಕ್ಕೆ ಬೆಸ್ಕಾಂ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಿಡದಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಗ್ರಾಮಸ್ಥರು ಸೂಕ್ತ ಪರಿಹಾರಕ್ಕೆ ಆಗ್ರಹಿಸಿದ್ದಾರೆ.