ನ್ಯೂಸ್

ವರ್ಷಾಚರಣೆ ನಿಯಮ ಕಟ್ಟುನಿಟ್ಟು: ಪೊಲೀಸರಿಗೆ ಹೆಚ್ಚು ಹೊಣೆಗಾರಿಕೆ; ಶೀಘ್ರ ಮಾರ್ಗಸೂಚಿ ಪ್ರಕಟ

ಬೆಂಗಳೂರು: ರಾತ್ರಿ ಕರ್ಫ್ಯೂ ರದ್ದಾಯಿತೆಂಬ ಕಾರಣಕ್ಕೆ ಹೊಸ ವರ್ಷಾಚರಣೆಗೆ ಅಣಿಯಾಗುತ್ತಿರುವವರನ್ನು ನಿಯಂತ್ರಿಸುವ ಸಂಬಂಧ ಸರ್ಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಗೃಹ ಸಚಿವ ಬಸವರಾಜ ಬೊಮ್ಮಾಯಿ ಈ ಕಾರ್ಯದ ಹೊಣೆಗಾರಿಕೆಯನ್ನು ಪೊಲೀಸರಿಗೆ ನೀಡಿದ್ದು, ಪ್ರತ್ಯೇಕ ಮಾರ್ಗಸೂಚಿ ಹೊರಡಿಸಲು ಸೂಚಿಸಿದ್ದಾರೆ. ರೂಪಾಂತರಿ ಕರೊನಾತಂಕ ಸಂದರ್ಭದಲ್ಲಿ ಹೊಸ ವರ್ಷಾಚರಣೆ ಸಿದ್ಧತೆ ಆರಂಭವಾಗಿರುವುದು ಆತಂಕ ಹೆಚ್ಚಿಸಿದೆ. ಶೀಘ್ರ ಹೊಸ ಮಾರ್ಗಸೂಚಿ ತರುತ್ತಿದ್ದೇವೆ. ಬೆಂಗಳೂ ರಿಗೇ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಲಾಗುತ್ತದೆ ಎಂದು ಗೃಹ ಸಚಿವರು ಹೇಳಿದ್ದಾರೆ.

ಹೊಸ ವರ್ಷದ ದಿನ ಹಾಗೂ ಹಿಂದಿನ ದಿನ ಕಠಿಣ ಕ್ರಮ ಕೈಗೊಳ್ಳುವ ವಿಚಾರವಾಗಿ ಮಾರ್ಗಸೂಚಿ ಸಿದ್ಧಪಡಿಸಲು ನಗರ ಪೊಲೀಸ್ ಆಯುಕ್ತರಿಗೆ ಸೂಚಿಸಿದ್ದೇನೆ ಎಂದು ಸಚಿವ ಬೊಮ್ಮಾಯಿ ಸುದ್ದಿಗಾರರಿಗೆ ತಿಳಿಸಿದರು. ನೈಟ್ ಕರ್ಫ್ಯೂ ಜಾರಿ ಮಾಡುವುದಾಗಿ ಸರ್ಕಾರ ಘೋಷಿಸಿದಾಗ ಆತಿಥ್ಯ ಕ್ಷೇತ್ರದಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಈಗಾಗಲೇ ಬುಕಿಂಗ್ ಮಾಡಿಕೊಂಡು ಸಿದ್ಧತೆ ನಡೆಸಿರುವಾಗ ನೈಟ್ ಕರ್ಫ್ಯೂ ಹೇರಿದರೆ ಉದ್ಯಮಕ್ಕೆ ದೊಡ್ಡ ಪೆಟ್ಟು ಬೀಳಲಿದೆ ಎಂದು ಪಾರ್ಟಿ ಆಯೋಜಕರು ಸಹ ದನಿ ಎತ್ತಿದ್ದರು. ಆಡಳಿತ ಮತ್ತು ಪ್ರತಿಪಕ್ಷದ ಮುಖಂಡರು ಸಹ ಸರ್ಕಾರದ ತೀರ್ವನಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಕಾರಣದಿಂದ ಸರ್ಕಾರ ಒಂದು ಹೆಜ್ಜೆ ಹಿಂದಿಟ್ಟಿತ್ತು. ವಿವಿಧ ದೇಶಗಳಲ್ಲಿ ಕರೊನಾ ವ್ಯಾಪಕವಾಗಿ ಹರಡುತ್ತಿರುವ ಸಂದರ್ಭದಲ್ಲಿ ರಾಜ್ಯದಲ್ಲೂ ಕರೊನಾ ತೀವ್ರತೆ ಮರುಕಳಿಸಬಾರೆಂದು ಸರ್ಕಾರ ಬಯಸಿ ನೈಟ್ ಕರ್ಫ್ಯೂ ಹಾಕುವುದಾಗಿ ಘೋಷಿಸಿತ್ತು. ಆದರೀಗ ಪೊಲೀಸರಿಗೆ ಹೆಚ್ಚಿನ ಜವಾಬ್ದಾರಿ ನೀಡಿ, ಕರೊನಾ ಮಾರ್ಗಸೂಚಿ ಪಾಲನೆ ಮೇಲೆ ಹದ್ದಿನ ಕಣ್ಗಾವಲು ಹಾಕಲಾಗುತ್ತಿದೆ. ಪಾರ್ಟಿ, ಕಾರ್ಯಕ್ರಮ ಆಯೋಜಕರಿಗೆಂದೇ ಪ್ರತ್ಯೇಕ ಮಾರ್ಗಸೂಚಿ ಸಿದ್ಧಪಡಿಸಲಾಗುತ್ತಿದೆ. ಇದನ್ನು ಉಲ್ಲಂಘಿಸದಂತೆ ತಡೆಯುವ ಜವಾಬ್ದಾರಿ ಪೊಲೀಸರಿಗೆ ನೀಡಲಾಗುತ್ತಿದೆ.

ಇಂದು ಮಹತ್ವದ ಸಭೆ: ಮಾರ್ಗಸೂಚಿ ಸಿದ್ಧಪಡಿಸುವ ಸಂಬಂಧ ಶನಿವಾರ ಅಧಿಕಾರಿಗಳ ಸಭೆ ನಡೆಯಲಿದೆ. ಗೃಹ ಸಚಿವರು ನೀಡಿರುವ ಸೂಚನೆಯನ್ವಯ ಮಾರ್ಗಸೂಚಿ ತಯಾರಿಸಿದ ಬಳಿಕ ಅದರ ಅನುಷ್ಠಾನಕ್ಕೆ ಪೊಲೀಸ್ ಇಲಾಖೆಯಿಂದ ಪ್ರಯತ್ನ ನಡೆಯಲಿದೆ.

ಸಂಭಾವ್ಯ ನಿಯಮಗಳು

  • ರಸ್ತೆಗಳಲ್ಲಿ ಗುಂಪು ಸೇರದಂತೆ ಮುಂಜಾಗ್ರತೆ
  • ಸಾಮಾಜಿಕ ಅಂತರ ಖಾತ್ರಿ ಮಾಡಿಕೊಳ್ಳಲು ಹೆಚ್ಚುವರಿ ಪೊಲೀಸ್ ನಿಯೋಜನೆ
  • ವಿಶೇಷ ಡಿಜೆ, ಡಾನ್ಸ್ ಪಾರ್ಟಿಗಳಿಗೆ ಡಿ.30ರಿಂದ ಜನವರಿಗೆ 2ರವರೆಗೆ ಅವಕಾಶವಿಲ್ಲ, ಹಸ್ತಲಾಘವ, ಆಲಿಂಗನಕ್ಕೆ ಅವಕಾಶ ಇಲ್ಲದಂತೆ ಮುನ್ನೆಚ್ಚರಿಕೆ ಕ್ರಮ
  • ಪಬ್, ಕ್ಲಬ್, ಅಂಥದ್ದೇ ಕಡೆಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು
  • ಹೆಚ್ಚು ಕಡೆ ನಾಕಾಬಂದಿ, ಮಧ್ಯರಾತ್ರಿವರೆಗೆ ಮಾತ್ರ ಆಚರಣೆಗೆ ಮಿತಿ