ತಿರುವನಂತಪುರ: ಇಲ್ಲಿನ ಉನ್ನತ ಮಾಧ್ಯಮಿಕ ಶಿಕ್ಷಣ ನಿರ್ದೇಶನಾಲಯವು ವಿದ್ಯಾರ್ಥಿಗಳಿಗೆ ಮುದ್ರಿತ ಹಾಗೂ ಕೈಬರಹದ ನೋಟ್ಸ್ಗಳನ್ನು ವಾಟ್ಸ್‌ಆ್ಯಪ್ ಸೇರಿದಂತೆ ಇತರೆ ಪ್ಲಾಟ್ಫಾರ್ಮ್ಗಳ ಮೂಲಕ ಕಳಿಸುವುದನ್ನು ನಿಷೇಧಿಸಿದೆ. ಈ ನಿರ್ದೇಶನವು ತರಗತಿಯ ಪರಿಸರದಲ್ಲಿ ಸಂಭವಿಸಬೇಕಾದ ಅಗತ್ಯ ಕಲಿಕೆಯ ಅನುಭವವನ್ನು ಕಾಪಾಡಿಕೊಳ್ಳುವ ಗುರಿಯನ್ನು ಹೊಂದಿರುವ ಹಿನ್ನೆಲೆಯಿಂದ ಜಾರಿಗೊಳಿಸಲಾಗಿದೆ ಎಂದು ಕೇರಳ ಸರ್ಕಾರ ತಿಳಿಸಿದೆ.
ಈ ಹಿಂದೆ ಮಕ್ಕಳು ತರಗತಿಯಲ್ಲಿ ಶಿಕ್ಷಕರು ಹೇಳಿಕೊಡುತ್ತಿದ್ದ ಪಠ್ಯವನ್ನು ಕ್ಲಾಸ್ನಲ್ಲಿಯೇ ಕಲಿಯಬೇಕಾಗಿತ್ತು. ಅಂದರೆ, ತರಗತಿಯ ಬೋರ್ಡ್ನಲ್ಲಿ ಬರೆಯಲಾದ ಪಾಠವನ್ನು ಅಲ್ಲಿಯೇ ನೋಟ್ಬುಕ್ನಲ್ಲಿ ಬರೆದುಕೊಳ್ಳುತ್ತಿದ್ದ ವಿದ್ಯಾರ್ಥಿಗಳು, ಅದನ್ನೇ ಓದಿ, ಪರೀಕ್ಷೆಗೆ ಹಾಜರಾಗುತ್ತಿದ್ದರು. ಆದ್ರೆ, ಇದೀಗ ಸಾಮಾಜಿಕ ಜಾಲತಾಣಗಳ ಪ್ರಭಾವ ಹೆಚ್ಚಾದ ಹಿನ್ನಲೆ ಶಿಕ್ಷಕರು ಮಕ್ಕಳಿಗೆ ಮುದ್ರಿತ ನೋಟ್ಸ್ಗಳನ್ನು ವಾಟ್ಸ್ಆ್ಯಪ್ನಲ್ಲಿಯೇ ಕಳುಹಿಸುವ ಅಭ್ಯಾಸ ರೂಡಿಸಿಕೊಂಡಿದ್ದಾರೆ. ಸದ್ಯ ಇದನ್ನು ತಡೆಯುವ ನಿಟ್ಟಿನಲ್ಲಿ ಕೇರಳ ಸರ್ಕಾರ, ಸಾಮಾಜಿಕ ಮಾಧ್ಯಮದ ಮೂಲಕ ಅಧ್ಯಯನಕ್ಕೆ ಸಂಬಂಧಿಸಿದ ಯಾವುದೇ ನೋಟ್ಸ್ಗಳನ್ನು ಕಳಿಸಬೇಡಿ, ಇದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ತಿಳಿಸಿದೆ.
ಹಿರಿಯ ಪ್ರಾಥಮಿಕ ಶೈಕ್ಷಣಿಕ ಜಂಟಿ ನಿರ್ದೇಶಕರಾದ ಸುರೇಶ್ ಕುಮಾರ್ ಅವರ ಆದೇಶದಂತೆ ಹೊಸ ನಿಯಮಾವಳಿಗಳ ಅನುಸರಣೆಯನ್ನು ಜಾರಿಗೊಳಿಸಲು ಶಾಲೆಗಳಿಗೆ ನಿಯಮಿತವಾಗಿ ಭೇಟಿ ನೀಡುವಂತೆ ಪ್ರಾದೇಶಿಕ ಉಪ ನಿರ್ದೇಶಕರಿಗೆ ಸೂಚಿಸಲಾಗಿದೆ. ಕೋವಿಡ್-19ರ ಸಾಂಕ್ರಾಮಿಕ ಸಮಯದಲ್ಲಿ ಮಕ್ಕಳು ತರಗತಿಗಳಿಗೆ ಹಾಜರಾಗಲು ಸಾಧ್ಯವಾಗದ ಕಾರಣ ಆನ್‌ಲೈನ್ ಕಲಿಕೆಯ ವಿಧಾನಗಳಿಗೆ ಆದ್ಯತೆ ನೀಡುವ ಮುಖೇನ ಹೆಚ್ಚು ಪ್ರೋತ್ಸಾಹಿಸಲಾಯಿತು. ಇದನ್ನು ಖಂಡಿಸಿದ ಪೋಷಕರು ಮಕ್ಕಳ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ ಬೆನ್ನಲ್ಲೇ ಇದೀಗ ವಾಟ್ಸ್‌ಆ್ಯಪ್ ಮೂಲಕ ನೋಟ್ಸ್ಗಳನ್ನು ಕಳಿಸುವುದನ್ನು ನಿಷೇಧಿಸಲಾಗಿದೆ.
ವಿದ್ಯಾರ್ಥಿಗಳ ಮೇಲೆ ಅನಗತ್ಯ ಹೊರೆ ಮತ್ತು ಆರ್ಥಿಕ ಒತ್ತಡದ ಬಗ್ಗೆ ಕಳವಳ ವ್ಯಕ್ತಪಡಿಸಲಾಗಿತ್ತು. ಸದ್ಯ ಈ ಬೆಳವಣಿಗೆಯ ಬೆನ್ನಲ್ಲೇ ಇದೀಗ ಪ್ರಾಥಮಿಕ ಶಿಕ್ಷಣ ಇಲಾಖೆಗೆ ಆದೇಶ ಹೊರಡಿಸಿರುವ ಕೇರಳ ಸರ್ಕಾರ, ಪಠ್ಯಕ್ರಮಕ್ಕೆ ಸಂಬಂಧಿಸಿದಂತೆ ಶಿಕ್ಷಕರು ಮಕ್ಕಳಿಗೆ ಜಾಲತಾಣಗಳ ಮೂಲಕ ನೋಟ್ಸ್ಗಳನ್ನು ಕಳಿಸುವುದನ್ನು ತಡೆಯಿರಿ ಎಂದು ಒತ್ತಿ ಹೇಳಿದೆ,(ಏಜೆನ್ಸೀಸ್).