ವಿರಾಟ್​ ಕೊಹ್ಲಿ ಒಬ್ಬರೇ ಅಲ್ಲ! ಈ ಸ್ಟಾರ್ ಕ್ರಿಕೆಟಿಗರು ಕೂಡ ನಂ. 18 ಜೆರ್ಸಿ ಧರಿಸುತ್ತಾರೆ

virat kohli no 18 jersey
Published on

ನವದೆಹಲಿ: ಕ್ರಿಕೆಟ್ ಲೋಕದಲ್ಲಿ ಆಟಗಾರರ ಬ್ಯಾಟಿಂಗ್, ಬೌಲಿಂಗ್ ಮತ್ತು ಆಲ್​ರೌಂಡ್ ಪ್ರದರ್ಶನ ಕ್ರೀಡಾಭಿಮಾನಿಗಳ ಗಮನಸೆಳೆಯುವುದು ತೀರ ಸಾಮಾನ್ಯ. ಆದ್ರೆ, ಇದನ್ನೂ ಮೀರಿ ಪ್ರತ್ಯೇಕವಾಗಿ ಒಂದಷ್ಟು ವಿಷಯಗಳು ಫ್ಯಾನ್ಸ್​ಗಳ ಕಣ್ಮನ ಸೆಳೆಯುತ್ತದೆ. ಆ ಪೈಕಿ ಕ್ರಿಕೆಟಿಗರು ಧರಿಸುವ ಜೆರ್ಸಿ ಹಾಗೂ ಅದರ ಸಂಖ್ಯೆ ಕೂಡ ಒಂದು. ಒಂದೊಂದು ಜೆರ್ಸಿ ಸಂಖ್ಯೆ ಹಿಂದೆಯೂ ಹಲವಾರು ವಿಷಯಗಳು ಅಡಗಿವೆ. ನಂಬರ್​ 07 ಹೊಂದಿರುವ ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ, ತಮ್ಮ ಜನ್ಮದಿನದ ದಿನಾಂಕವನ್ನೇ ಜೆರ್ಸಿ ನಂಬರ್​ ಆಗಿ ಬಳಸಿಕೊಂಡಿದ್ದಾರೆ. ಇದು ಅನೇಕರಿಗೆ ತಿಳಿದಿರುವ ಸಂಗತಿ. ಅದೇ ರೀತಿ 18 ಸಂಖ್ಯೆಯನ್ನು ತಮ್ಮ ಜೆರ್ಸಿಯಾಗಿ ಬಳಸಿಕೊಂಡಿರುವ ಸ್ಟಾರ್ ಆಟಗಾರರು, ಇದೊಂದು ಸಂಖ್ಯೆಯಿಂದಲೇ ಕ್ರಿಕೆಟ್​ ಜಗತ್ತಿನಲ್ಲಿ ದೊಡ್ಡ ಹೆಸರು ಸ್ಥಾಪಿಸಿ, ದಾಖಲೆಗಳನ್ನು ಬರೆದಿದ್ದಾರೆ.

ವಿರಾಟ್ ಕೊಹ್ಲಿ

ಟೀಮ್ ಇಂಡಿಯಾ ಪರ ಅಬ್ಬರದ ಬ್ಯಾಟಿಂಗ್ ನಡೆಸುವ ವಿರಾಟ್ ಕೊಹ್ಲಿ, ಮೈದಾನಕ್ಕಿಳಿದರೆ ರನ್​ಗಳ ಹೊಳೆಯನ್ನೇ ಹರಿಸುತ್ತಾರೆ. ಎದುರಾಳಿಗಳಲ್ಲಿ ತಮ್ಮ ಬ್ಯಾಟ್​ನಿಂದಲೇ ಬೆವರಿಳಿಸುವ ಕಿಂಗ್ ಕೊಹ್ಲಿ, ಈ ಹಿಂದೆ ದಿಗ್ಗಜ ಆಟಗಾರರು ನಿರ್ಮಿಸಿದ್ದ ದಾಖಲೆಗಳನ್ನು ಪುಡಿ ಮಾಡಿ ಹೊಸ ರೆಕಾರ್ಡ್​ಗಳನ್ನು ತಮ್ಮ ಹೆಸರಿನಲ್ಲಿ ದಾಖಲಿಸಿರುವುದು ವಿಶೇಷ ಹಾಗೂ ವಿಶಿಷ್ಟ. ಇಂದಿನ ಯುವಜನತೆಯನ್ನು ತಮ್ಮ ಕ್ರಿಕೆಟಿಂಗ್ ಶೈಲಿಯಿಂದಲೇ ಸೆಳೆದಿರುವ ವಿರಾಟ್​, ಬಹಳ ವೇಗವಾಗಿ ದಿಗ್ಗಜ ಆಟಗಾರರ ಸಾಲಿಗೆ ಸೇರಿದ್ದಾರೆ. ಟೀಮ್ ಇಂಡಿಯಾದ ಕ್ಯಾಪ್ಟನ್ ಆಗಿ ಜವಾಬ್ದಾರಿ ಹೊತ್ತಿದ್ದ ಕೊಹ್ಲಿ, ಇಂದು ಜೆರ್ಸಿ 18 ಧರಿಸಿ, ವಿಶ್ವ ಕ್ರಿಕೆಟ್​ನಲ್ಲಿ ತಮ್ಮದೇ ಒಂದು ಇತಿಹಾಸ ನಿರ್ಮಿಸಿದ್ದಾರೆ.

ಮೋಯಿನ್ ಅಲಿ

ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಆಲ್​​ರೌಂಡರ್​ ಮೋಯಿನ್ ಅಲಿ, ದೇಶಿಯ ಕ್ರಿಕೆಟ್ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ತಮ್ಮ ಬ್ಯಾಟಿಂಗ್ ಮತ್ತು ಸ್ಪಿನ್​ ಬೌಲಿಂಗ್​ನಿಂದಲೇ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. 3ನೇ ಕ್ರಮಾಂಕದಲ್ಲಿ ಬರಲಿ, ಆರನೇ ಆರ್ಡರ್​ನಲ್ಲಿ ಬರಲಿ ತಮ್ಮ ಬ್ಯಾಟಿಂಗ್ ಆರ್ಭಟವನ್ನು ಉತ್ತಮವಾಗಿ ಪ್ರದರ್ಶಿಸುವ ಮೋಯಿನ್​, ಟಿ20 ತಂಡದಲ್ಲಿ ಅತ್ಯುತ್ತಮ ಆಟಗಾರ ಎಂಬ ಪಟ್ಟವನ್ನೇ ಪಡೆದಿದ್ದಾರೆ. ಇವರು ಸಹ ಇದೇ ನಂಬರ್​ನ ಜೆರ್ಸಿ ಧರಿಸಿ, ಮೈದಾನದಲ್ಲಿ ಕಾಣಿಸಿಕೊಳ್ಳುತ್ತಾರೆ.

ಫಾಫ್ ಡು ಪ್ಲೆಸಿಸ್​

ಸೌತ್ ಆಫ್ರಿಕಾ ತಂಡದ ಮಾಜಿ ಕ್ಯಾಪ್ಟನ್ ಫಾಫ್​ ಡು ಪ್ಲೆಸಿಸ್​, 18ನೇ ನಂಬರ್​ ಜೆರ್ಸಿ ಧರಿಸಿ ಮೈದಾನಕ್ಕೆ ಇಳಿಯುತ್ತಾರೆ. ತಮ್ಮ ಕ್ಯಾಪ್ಟನ್ಸಿ, ಸ್ಫೋಟಕ ಬ್ಯಾಟಿಂಗ್​ ಮತ್ತು ಅದ್ಭುತ ಮೈಂಡ್​ಗೇಮ್​ಗೆ ಹೆಸರುವಾಸಿಯಾಗಿರುವ ಫಾಫ್, ಟಿ20 ಕ್ರಿಕೆಟ್​ನಲ್ಲಿಯೂ ಅತ್ಯುತ್ತಮ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಭಾರತದಲ್ಲಿ ನಡೆಯುವ ಐಪಿಎಲ್​ನಲ್ಲಿ ಸಿಎಸ್​ಕೆ ಪರ ಆಡಿದ್ದ ಡುಪ್ಲೆಸಿಸ್​, ಪ್ರಸ್ತುತ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ಕ್ಯಾಪ್ಟನ್ ಆಗಿ ಟೀಮ್​ನ ಮುನ್ನಡೆಸುತ್ತಿದ್ದಾರೆ.

ಆಡ್ಯಮ್​ ಗಿಲ್​ಕ್ರಿಸ್ಟ್​

ಟೀಮ್ ಇಂಡಿಯಾದ ಕ್ಯಾಪ್ಟನ್ ಆಗಿ ಮಹೇಂದ್ರ ಸಿಂಗ್ ಧೋನಿ ಆಳ್ತಿದ್ದ ಕಾಲದಲ್ಲಿ ನಾಯಕನಾಗಿ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸುತ್ತಿದ್ದವರು ಆ್ಯಡಮ್​ ಗಿಲ್​ಕ್ರಿಸ್ಟ್​. ಅಂದಿನ ಸಮಯದಲ್ಲಿ ಒಬ್ಬ ಯಶಸ್ವಿ ಕ್ಯಾಪ್ಟನ್ ಹಾಗೂ ಅದ್ಭುತ ವಿಕೆಟ್​ ಕೀಪರ್​-ಬ್ಯಾಟರ್​. ತಮ್ಮ ಕೀಪಿಂಗ್​ ಕೌಶಲ್ಯದಿಂದಲೇ ಭಾರೀ ಜನಪ್ರಿಯತೆ ಗಳಿಸಿರುವ ಆ್ಯಡಮ್​, ಇದೇ 18 ನಂಬರ್​ ಒಳಗೊಂಡ ಜೆರ್ಸಿಯನ್ನು ಧರಿಸಿ, ಮೈದಾನಕ್ಕೆ ಆಗಮಿಸುತ್ತಿದ್ದರು. ಪಂದ್ಯವನ್ನು ಬಹಳ ಕಿಚ್ಚು ಹಾಗೂ ಉತ್ಸಾಹದಿಂದ ಆಡುತ್ತಿದ್ದ ಗಿಲ್​ಕ್ರಿಸ್ಟ್​, ಮ್ಯಾಚ್​ ಮೇಲೆ ಬೀರುತ್ತಿದ್ದ ಪ್ರಭಾವ ಇಂದಿಗೂ ಅವರ ಅಭಿಮಾನಿಗಳಿಗೆ ನೆನಪಿದೆ.

ಟ್ರೆಂಟ್ ಬೋಲ್ಟ್​

ನ್ಯೂಜಿಲೆಂಡ್ ಪರ ಅದ್ಭುತ ವೇಗಿ ಎಂದೇ ಗುರುತಿಸಿಕೊಂಡಿರುವ ಬೋಲ್ಟ್​, ತಮ್ಮ ಸ್ವಿಂಗ್​ ಬೌಲಿಂಗ್​ನಿಂದಲೇ ಎದುರಾಳಿಗಳ ವಿಕೆಟ್​ಗಳನ್ನು ಕಬಳಿಸುತ್ತಾರೆ. ಯಾವುದೇ ಪಂದ್ಯವಿರಲಿ ಅಲ್ಲಿ ಬೌಲಿಂಗ್ ದಾಳಿ ಮೊದಲು ಆರಂಭಿಸುವುದೇ ಟ್ರೆಂಟ್​. ಮೈದಾನದಲ್ಲಿ ವೇಗದ ಬೌಲಿಂಗ್​ಗೆ ಹೆಚ್ಚು ಹೆಸರುವಾಸಿಯಾಗಿರುವ ಟ್ರೆಂಟ್​ ಬೌಲ್ಟ್​ ಕೂಡ ಇದೇ ನಂಬರ್​ 18 ಜೆರ್ಸಿ ಧರಿಸಿ, ಪಂದ್ಯಗಳನ್ನಾಡುತ್ತಾರೆ ಎಂಬುದು ವಿಶೇಷ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net