ನ್ಯೂಸ್

VIDEO| ಹಿಂಸಾಚಾರಕ್ಕೆ ತಿರುಗಿದ ಮರಾಠ ಮೀಸಲಾತಿ ಪ್ರತಿಭಟನೆ; 360 ಮಂದಿ ವಿರುದ್ಧ ಪ್ರಕರಣ ದಾಖಲು

ಮುಂಬೈ: ಮರಾಠ ಮೀಸಲಾತಿಗೆ ಆಗ್ರಹಿಸಿ ಮಹಾರಾಷ್ಟ್ರದ ಜಲ್ನಾ ಜಿಲ್ಲೆಯಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಗುಂಪೊಂದು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿ ವಾಹನಗಳಿಗೆ ಬೆಂಕಿ ಹಚ್ಚಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದೆ.

ಘಟನೆಯಲ್ಲಿ ಹಲವು ಪೊಲೀಸ್​ ಅಧಿಕಾರಿಗಳು ಗಂಭೀರವಾಗಿ ಗಾಯಗೊಂಡಿದ್ದು, ಪ್ರತಿಭಟನಾ ನಿರತರ ಮೇಲೆ ಲಾಠಿ ಚಾರ್ಜ್​, ಜಲಫಿರಂಗಿ, ಅಶ್ರುವಾಯು ಪ್ರಯೋಗಿಸಲಾಗಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಮಹಾರಾಷ್ಟ್ರದ ಮಧ್ಯಭಾಗದಲ್ಲಿರುವ ಜಲ್ನಾ ಜಿಲ್ಲೆಯಲ್ಲಿ ಮರಾಠ ಮೀಸಲಾತಿಗೆ ಆಗ್ರಹಿಸಿ ಶುಕ್ರವಾರ ಆರಂಭವಾದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ಅಂಬಾಡ್​ ತಾಲ್ಲೂಕಿನಲ್ಲಿ ಧುಲೆ ಹಾಗೂ ಸೊಲ್ಲಾಪುರ ಹೆದ್ದಾರಿಯನ್ನು ತಡೆದು ಪ್ರತಿಭಟನಾ ನಿರತರು ಸಾರಿಗೆ ಹಾಗೂ ಲಾರಿಗೆಳಿಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದರು. ಹಿಂಸಾಚಾರ ಸಂಬಂಧ ಪೊಲೀಸರು 360 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದು, ಈ ಪೈಕಿ 16 ಮಂದಿಯನ್ನು ಘಟನೆಯ ಪ್ರಮುಖ ಆರೋಪಿಗಳು ಎಂದು ಗುರುತಿಸಲಾಗಿದೆ.

ಮನೋಜ್​ ಜಾರಂಗೆ ನೇತೃತ್ವದಲ್ಲಿ ಮೀಸಲಾತಿಗೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ ನಡೆಸಾಲಾಗುತ್ತಿದ್ದು, ತೀವ್ರವಾಗಿ ಅಸ್ವಸ್ಥಗೊಂಡಿದ್ದ ಪ್ರತಿಭಟನಾ ನಿರತರನ್ನು ಪೊಲೀಸರು ಬಲವಂತವಾಗಿ ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಿದಾಗ ಹಿಂಸಾಚಾರ ಭುಗಿಲೆದ್ದಿತ್ತು. ಹಿಂಸಾಚಾರದಲ್ಲಿ 90ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.